Repo Rate Hike: ಆರ್ಬಿಐ ಮತ್ತೆ ರೆಪೊ ದರ ಹೆಚ್ಚಿಸುವ ಸಾಧ್ಯತೆ; ಕಾರಣ ಇಲ್ಲಿದೆ
ರೂಪಾಯಿ ಮೌಲ್ಯ ಕುಸಿತ ಮತ್ತು ಅಮೆರಿಕದ ಬಡ್ಡಿ ದರದ ಜತೆಗಿನ ವ್ಯತ್ಯಾಸದ ಬಗ್ಗೆಯೂ ಆರ್ಬಿಐ ಗಮನಹರಿಸಲಿದೆ. ರೆಪೊ ದರವನ್ನು ಶೇಕಡಾ 6.75ಕ್ಕೆ ನಿಗದಿಪಡಿಸುವ ಸಾಧ್ಯತೆ ಶೇಕಡಾ 60ರಷ್ಟಿದೆ ಎಂದು ಅರುಣ್ ಬನ್ಸಾಲ್ ಹೇಳಿದ್ದಾರೆ.

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮುಂದಿನ ವರ್ಷ ಹಣಕಾಸು ನೀತಿಯಲ್ಲಿ ಮತ್ತೆ ರೆಪೊ ದರ (Repo Rate) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಣದುಬ್ಬರ (inflation) ಪ್ರಮಾಣ ತೀವ್ರವಾಗಿ ಏರಿಕೆಯಾಗಿರುವುದರಿಂದ ಅಮೆರಿಕದ ಫೆಡರಲ್ ಬ್ಯಾಂಕ್ (Federal Bank) ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಇದನ್ನೇ ಆರ್ಬಿಐ ಕೂಡ ಅನುಸರಿಸುವ ಸಾಧ್ಯತೆ ಇದೆ. 50 ಮೂಲಾಂಶದಷ್ಟು ಹೆಚ್ಚಳ ಮಾಡಿ ಶೇಕಡಾ 6.75ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಮುಖ ಹಣದುಬ್ಬರ ಶೇಕಡಾ 6ಕ್ಕಿಂತ ಕೆಳಗೆ ಇರುವಂತೆ ನೋಡಿಕೊಳ್ಳುವತ್ತ ಆರ್ಬಿಐ ಮುಖ್ಯವಾಗಿ ಗಮನಹರಿಸಲಿದೆ. ಹಣದುಬ್ಬರಕ್ಕೆ ಸಂಬಂಧಿಸಿದ ಇತರ ಕೆಲವು ಅಂಶಗಳು ಕೂಡ ಏರಿಕೆ ಕಂಡಿವೆ. ಹೀಗಾಗಿ ಹಣದುಬ್ಬರವು ಆರ್ಬಿಐನ ಸಹನೆಯ ಮಿತಿಯ ಕೆಳಗೆ ಬಂದಿದೆ ಎಂದು ಈಗಲೇ ಹೇಳುವುದು ಸರಿಯಾಗದು ಎಂದು ಐಡಿಬಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಅರುಣ್ ಬನ್ಸಾಲ್ ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಮೌಲ್ಯ ಕುಸಿತ ಮತ್ತು ಅಮೆರಿಕದ ಬಡ್ಡಿ ದರದ ಜತೆಗಿನ ವ್ಯತ್ಯಾಸದ ಬಗ್ಗೆಯೂ ಆರ್ಬಿಐ ಗಮನಹರಿಸಲಿದೆ. ರೆಪೊ ದರವನ್ನು ಶೇಕಡಾ 6.75ಕ್ಕೆ ನಿಗದಿಪಡಿಸುವ ಸಾಧ್ಯತೆ ಶೇಕಡಾ 60ರಷ್ಟಿದೆ ಎಂದು ಅರುಣ್ ಬನ್ಸಾಲ್ ಹೇಳಿದ್ದಾರೆ. ಅಮೆರಿಕದ ಫೆಡರಲ್ ಬ್ಯಾಂಕ್ 2023ರಲ್ಲಿ ಬಡ್ಡಿ ದರವನ್ನು ಶೇಕಡಾ 5ಕ್ಕಿಂತ ಮೇಲ್ಮಟ್ಟಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಇದು ಭಾರತದ ಕೇಂದ್ರೀಯ ಬ್ಯಾಂಕ್ ಮೇಲೂ ಬಡ್ಡಿ ದರ ಹೆಚ್ಚಿಸುವಂತೆ ಪ್ರಭಾವ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಹಣದುಬ್ಬರ ಶೇ 4ಕ್ಕೆ ಇಳಿಸುವುದೇ ಗುರಿ; ಶಕ್ತಿಕಾಂತ ದಾಸ್
ಹಣದುಬ್ಬರ ಪ್ರಮಾಣವನ್ನು ಮತ್ತು ಒಟ್ಟಾರೆ ಬೆಳವಣಿಗೆ ಮೇಲೆ ನಿಗಾ ಇರಿಸಲಾಗಿದೆ. ಹಣದುಬ್ಬರ ಪ್ರಮಾಣವನ್ನು ಶೇಕಡಾ 4ರ ಮಟ್ಟಕ್ಕೆ ಬರುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದ್ದರು. ಹಣದುಬ್ಬರ ಕಡಿಮೆ ಮಾಡುವ ನಿಟ್ಟಿನಲ್ಲಿ ಹಣಕಾಸು ನೀತಿಯಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ದೇಶದ ಆರ್ಥಿಕತೆಯ ಮಧ್ಯಮ ಅವಧಿಯ ಬೆಳವಣಿಗೆ ಉತ್ತಮಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ಮುಂದಿನ ಹಣಕಾಸು ನೀತಿಯಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಮುಂದಿನ ಹಣಕಾಸು ನೀತಿ ಸಮಿತಿ ಸಭೆ ಫೆಬ್ರವರಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: Retail Inflation: ಕೊನೆಗೂ ಆರ್ಬಿಐ ಸಹನೆಯ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಶೇ 5.88ಕ್ಕೆ ಇಳಿಕೆ
ರೆಪೊ ಹೆಚ್ಚಳದ ವೇಗ ತಗ್ಗಿಸುವ ಸುಳಿವು ನೀಡಿದ್ದ ಆರ್ಬಿಐ
ಡಿಸೆಂಬರ್ 7ರಂದು 35 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸುವ ಮೂಲಕ ಆರ್ಬಿಐ ದರ ಹೆಚ್ಚಳದ ವೇಗವನ್ನು ತಗ್ಗಿಸುವ ಸುಳಿವು ನೀಡಿತ್ತು. ರೆಪೊ ದರವನ್ನು ಶೇಕಡಾ 6.25ಕ್ಕೆ ನಿಗದಿಪಡಿಸಿತ್ತು. ಅದಕ್ಕಿಂತ ಹಿಂದಿನ ಹಣಕಾಸು ನೀತಿಗಳನ್ನು ಪ್ರಕಟಿಸುವಾಗಲೆಲ್ಲ 50 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿ, ಒಟ್ಟು 225 ಮೂಲಾಂಶ ಹೆಚ್ಚಳ ಮಾಡಿತ್ತು. ಪರಿಣಾಮವಾಗಿ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿ ದರ ಮತ್ತು ವಿವಿಧ ಠೇವಣಿಗಳ ದರವನ್ನು ಹೆಚ್ಚಿಸಿವೆ. ಚಿಲ್ಲರೆ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿ ಆರ್ಬಿಐ ಸಹನೆಯ ಮಟ್ಟಕ್ಕೆ ಬಂದಿತ್ತು. ಹೀಗಾಗಿ ಮುಂದಿನ ಹಣಕಾಸು ನೀತಿ ಸಭೆಯ ಬಳಿಕ ಆರ್ಬಿಐ ರೆಪೊಮ ದರ ಹೆಚ್ಚಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿತ್ತು. ಆದರೆ, ಇದೀಗ ಹಣದುಬ್ಬರ ಪ್ರಮಾಣವನ್ನು 4ಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಆರ್ಬಿಐ ಗವರ್ನರ್ ಹೇಳಿರುವುದು ರೆಪೊ ದರ ಹೆಚ್ಚಳದ ಸುಳಿವು ನೀಡಿದಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Thu, 22 December 22