Retail Inflation: ಕೊನೆಗೂ ಆರ್ಬಿಐ ಸಹನೆಯ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಶೇ 5.88ಕ್ಕೆ ಇಳಿಕೆ
ಅಕ್ಟೋಬರ್ ತಿಂಗಳಲ್ಲಿ ಶೇಕಡಾ 6.77 ಇದ್ದ ಚಿಲ್ಲರೆ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಶೇಕಡಾ 6ಕ್ಕಿಂತ ಕೆಳಗಿಳಿದಂತಾಗಿದೆ.
ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಕೊನೆಗೂ ಆರ್ಬಿಐ (RBI) ಸಹನೆಯ ಮಟ್ಟಕ್ಕೆ ಇಳಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಶೇಕಡಾ 6.77 ಇದ್ದ ಚಿಲ್ಲರೆ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಶೇಕಡಾ 6ಕ್ಕಿಂತ ಕೆಳಗಿಳಿದಂತಾಗಿದೆ. ಹಣದುಬ್ಬರಕ್ಕೆ ಸಂಬಂಧಿಸಿದ ದತ್ತಾಂಶವನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistics Office) ಸೋಮವಾರ ಬಿಡುಗಡೆ ಮಾಡಿದೆ. ಹಣದುಬ್ಬರ ತಡೆಯುವ ಸಲುವಾಗಿ ಆರ್ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು. 20206 ಮಾರ್ಚ್ ಒಳಗಾಗಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2ರಿಂದ 4ರ ಮಟ್ಟದಲ್ಲಿ ಇರುವಂತೆ ಮಾಡುವುದು ಆರ್ಬಿಐ ಗುರಿಯಾಗಿದೆ.
ಗ್ರಾಹಕ ದರ ಆಧಾರಿತ ಹಣದುಬ್ಬದರ ಅರ್ಧದಷ್ಟು ಆಹಾರ ಹಣದುಬ್ಬರವೇ ಇದ್ದು, ನವೆಂಬರ್ನಲ್ಲಿ ಶೇಕಡಾ 4.67ಕ್ಕೆ ಇಳಿಕೆಯಾಗಿದೆ. ಇದು ಅಕ್ಟೋಬರ್ನಲ್ಲಿ ಶೇಕಡಾ 7.01ರಷ್ಟಿತ್ತು. ಚಿಲ್ಲರೆ ಹಣದುಬ್ಬರ ಸತತ ಮೂರು ತ್ರೈಮಾಸಿಕಗಳಿಂದಲೂ ಹೆಚ್ಚು ಅವಧಿಗೆ ಶೇಕಡಾ 6ರ ಮೇಲಿದ್ದುದರಿಂದ ಆರ್ಬಿಐ ಹಣಕಾಸು ನೀತಿ ಸಮಿತಿ ಕಳೆದ ತಿಂಗಳು ವಿಶೇಷ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದನ್ನೂ ಓದಿ: RBI Inflation Report: ಹಣದುಬ್ಬರ ಕುರಿತ ಆರ್ಬಿಐ ವರದಿ ಬಹಿರಂಗಪಡಿಸಲಾಗದು; ಕೇಂದ್ರ
ಬಳಿಕ ಡಿಸೆಂಬರ್ 7ರಂದು ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರೆಪೊ ದರ ಹೆಚ್ಚಿಸಿದ್ದ ಆರ್ಬಿಐ, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿ ಶೇಕಡಾ 6.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ, ಇದೀಗ ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಸಹನೆಯ ಮಟ್ಟಕ್ಕೆ ಇಳಿಕೆಯಾಗಿರುವುದು ತುಸು ನಿರಾಳತೆ ಒದಗಿಸಿದೆ.
ಕೈಗಾರಿಕಾ ಉತ್ಪಾದನೆ ಕುಸಿತ, ವಿದ್ಯುತ್ ಉತ್ಪಾದನೆ ಹೆಚ್ಚಳ
ಅಕ್ಟೋಬರ್ ತಿಂಗಳ ಕೈಗಾರಿಕಾ ಉತ್ಪಾದನಾ ಪ್ರಮಾಣ ಕಳೆದ ವರ್ಷ ಅದೇ ಅವಧಿಗೆ ಹೋಲಿಸಿದರೆ ಶೇಕಡಾ 4ರಷ್ಟು ಕುಸಿದಿರುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಪ್ರತ್ಯೇಕ ದತ್ತಾಂಶಗಳಿಂದ ತಿಳಿದುಬಂದಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಅಕ್ಟೋಬರ್ನಲ್ಲಿ ಶೇಕಡಾ 5.6ಕ್ಕೆ ಇಳಿಕೆಯಾಗಿದೆ. ಗಣಿಗಾರಿಕೆ ಕ್ಷೇತ್ರ ಶೇಕಡಾ 2.5 ಹಾಗೂ ವಿದ್ಯುತ್ ಉತ್ಪಾದನೆ ಶೇಕಡಾ 1.2ರಷ್ಟು ಹೆಚ್ಚಳವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Mon, 12 December 22