ಹಳೇ ಬ್ಯಾಂಕ್ ನೋಟುಗಳು ಮತ್ತು ಹಳೇ ನಾಣ್ಯಗಳನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡುವುದಾಗಿ ಹೇಳಿ, ಸಾರ್ವಜನಿಕರನ್ನು ಬಲೆಗೆ ಬೀಳಿಸಲಾಗುತ್ತಿದೆ. ಇಂಥವರಿಂದ ಎಚ್ಚರಿಕೆಯಾಗಿ ಇರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಿಳಿಸಿದೆ. “ಕೆಲವು ದುಷ್ಕರ್ಮಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು/ಲೋಗೋ ಬಳಸಿಕೊಂಡು, ವಿವಿಧ ಆನ್ಲೈನ್/ಆಫ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಹಳೇ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ವ್ಯವಹಾರ ಮಾಡುವುದಾಗಿ, ಶುಲ್ಕ/ಕಮಿಷನ್/ತೆರಿಗೆ ಎಂದು ಆರ್ಬಿಐ ಹೆಸರಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ,” ಎಂದು ಹೇಳಲಾಗಿದೆ. “ಇದೀಗ ಈ ಮೂಲಕ ಸ್ಪಷ್ಟಪಡಿಸಲಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಇಂಥ ಯಾವ ವ್ಯವಹಾರ ಮಾಡುವುದಿಲ್ಲ ಹಾಗೂ ಎಂದಿಗೂ ಯಾವುದೇ ಶುಲ್ಕ/ಕಮಿಷನ್ಗಳನ್ನು ಕೇಳುವುದಿಲ್ಲ,” ಎನ್ನಲಾಗಿದೆ.
ಇಂಥ ವ್ಯವಹಾರಗಳಿಗೆ ತನ್ನ ಪರವಾಗಿ ಯಾವುದೇ ಶುಲ್ಕಗಳು/ಕಮಿಷನ್ ಸಂಗ್ರಹಿಸಲು ಆರ್ಬಿಐನಿಂದ ಇಂಥ ಯಾವುದೇ ಸಂಸ್ಥೆಗಳು/ಕಂಪೆನಿ/ವ್ಯಕ್ತಿಗಳು ಮುಂತಾದವುಗಳನ್ನು ಅಂಗೀಕೃತ ಮಾಡಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ. ವಂಚನೆ ಆಫರ್ಗಳನ್ನು ನೀಡುವ ಮೂಲಕವಾಗಿ ಹಣವನ್ನು ವಸೂಲಿ ಮಾಡಿ, ವಂಚನೆ ಮಾಡುವಂಥವರಿಂದ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಹಳೇ ನಾಣ್ಯ, ನೋಟುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸುವುದಾಗಿ ಕೆಲವು ಜಾಹೀರಾತುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಅಷ್ಟೇ ಅಲ್ಲ, ಹೀಗೆ ಜಾಹೀರಾತು ಅಥವಾ ಪ್ರಚಾರ ಮಾಡುವಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ನಿಜ ಎಂದು ನಂಬುವ ಕೆಲವರು ತಮ್ಮ ಬಳಿ ಆ ನೋಟು ಅಥವಾ ನಾಣ್ಯ ಇದೆ ಎಂದು ಹೇಳಿಕೊಂಡ ಮೇಲೆ, ಬಹುಮಾನದ ಹಣವನ್ನು ಪಡೆಯುವುದಕ್ಕೆ ಮುಂಚೆ ಇಂತಿಷ್ಟು ಹಣವನ್ನು ಕಟ್ಟಬೇಕು. ಅದು ಆರ್ಬಿಐಗೆ ಬರಬೇಕಾದ ಕಮಿಷನ್, ಶುಲ್ಕ ಎಂದು ಹೇಳಿ, ಜನರಿಗೆ ವಂಚನೆ ಮಾಡಲಾಗುತ್ತಿದೆ. ಇಂಥವರಿಂದ ಎಚ್ಚರಿಕೆ ವಹಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹೇಳಿದೆ.
ಇದನ್ನೂ ಓದಿ: Master Card: ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಮಾಸ್ಟರ್ ಕಾರ್ಡ್ಗೆ ನಿರ್ಬಂಧ ವಿಧಿಸಿದ ಆರ್ಬಿಐ
(RBI Public Caution Notice Regarding Frauds In The Name Of Old Notes And Coins)
Published On - 6:29 pm, Wed, 4 August 21