GDP forecast: ಈ ಹಣಕಾಸು ವರ್ಷ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆ ಹೆಚ್ಚಿಸಿದ ಆರ್​ಬಿಐ

|

Updated on: Dec 08, 2023 | 11:13 AM

RBI MPC Meeting Highlights: ಭಾರತದ ಜಿಡಿಪಿ 2023-24ರ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಬೆಳೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆ ಹೆಚ್ಚಿಸಿದೆ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಕ್ರಮವಾಗಿ ಶೇ 7.8 ಮತ್ತು ಶೇ. 7.6ರಷ್ಟು ಬೆಳೆದಿದೆ. ಮುಂದಿನ ಐದು ಕ್ವಾರ್ಟರ್ ಅವಧಿಗೆ ಆರ್ಥಿಕತೆ ಎಷ್ಟು ಬೆಳೆಯಬಹುದು ಎಂಬ ಅಂದಾಜನ್ನು ಆರ್​ಬಿಐ ಮಾಡಿದೆ.

GDP forecast: ಈ ಹಣಕಾಸು ವರ್ಷ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆ ಹೆಚ್ಚಿಸಿದ ಆರ್​ಬಿಐ
ಆರ್​ಬಿಐ
Follow us on

ನವದೆಹಲಿ, ಡಿಸೆಂಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಈ ಹಣಕಾಸು ವರ್ಷಕ್ಕೆ (2023-24ರಲ್ಲಿ) ಜಿಡಿಪಿ ವಿಚಾರದಲ್ಲಿ ತನ್ನ ಹಿಂದಿನ ಅಂದಾಜನ್ನು ಬದಲಿಸಿದೆ. ಈ ಹಿಂದೆ ಶೇ. 6.5ರಷ್ಟು ಬೆಳೆಯಬಹುದು ಎಂದು ಭವಿಷ್ಯ ನುಡಿದಿದ್ದ ಆರ್​ಬಿಐ (RBI MPC Meeting) ಇದೀಗ ಅದನ್ನು ಶೇ. 7ಕ್ಕೆ ಹೆಚ್ಚಿಸಿದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಶುಕ್ರವಾರ (ಡಿ. 8) ಹೇಳಿದ್ದಾರೆ. ಮೊನ್ನೆಯಿಂದ (ಡಿ. 6) ನಡೆದ ಎಂಪಿಸಿ ಸಭೆಯಲ್ಲಿ ಜಿಡಿಪಿ ವಿಚಾರ (Indian Economy) ಚರ್ಚೆಯಾಗಿದ್ದು, ಆರ್​ಬಿಐ ತನ್ನ ಹಿಂದಿನ ಅಂದಾಜನ್ನು ಬದಲಿಸಿದೆ.

ಎರಡನೇ ಕ್ವಾರ್ಟರ್ ಅವಧಿಯಲ್ಲಿ ಭಾರತದ ಜಿಡಿಪಿ ನಿರೀಕ್ಷೆಮೀರಿ ಅಧಿಕ ಮಟ್ಟದಲ್ಲಿತ್ತು. ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳೆದರೆ ಎರಡನೇ ತ್ರೈಮಾಸಿಕ ಅವಧಿಯಲ್ಲಿ (2023ರ ಜುಲೈನಿಂದ ಸೆಪ್ಟೆಂಬರ್) ಶೇ. 7.6ರಷ್ಟು ಹೆಚ್ಚಳಗೊಂಡಿತ್ತು. ಇಷ್ಟು ಹೆಚ್ಚಿನ ಮಟ್ಟದಲ್ಲಿ ಜಿಡಿಪಿ ಹೆಚ್ಚುತ್ತದೆ ಎಂದು ಆರ್​ಬಿಐ ಕೂಡ ನಿರೀಕ್ಷಿಸಿರಲಿ. ಈ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಆರ್​ಬಿಐ ತನ್ನ ಹಿಂದಿನ ಅಂದಾಜನ್ನು ಸಹಜವಾಗಿ ಬದಲಿಸಿ, ನಿರೀಕ್ಷೆಯನ್ನು ಹೆಚ್ಚಿಸಿದೆ. ಮುಂದಿನ ಎರಡು ತ್ರೈಮಾಸಿಕ ಅವಧಿಯ ಜಿಡಿಪಿ ನಿರೀಕ್ಷೆಯನ್ನೂ ಆರ್​​ಬಿಐ ಹೆಚ್ಚಿಸಿದೆ.

ಇದನ್ನೂ ಓದಿ: RBI MPC Meet: ಶೇ. 6.5ರಷ್ಟು ಬಡ್ಡಿದರ ಮುಂದುವರಿಸಿದ ಆರ್​ಬಿಐ; ಸತತ ಆರನೇ ಬಾರಿ ಬಡ್ಡಿದರ ಯಥಾಸ್ಥಿತಿ

ಆರ್​ಬಿಐನ ಜಿಡಿಪಿ ಬೆಳವಣಿಗೆ: ಹೊಸ ಅಂದಾಜು

  • 2023ರ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿ: ಶೇ. 6ರಿಂದ ಶೇ. 6.5ಕ್ಕೆ ಹೆಚ್ಚಳ
  • 2024ರ ಜನವರಿಯಿಂದ ಮಾರ್ಚ್ ಅವಧಿ: ಶೇ. 5.7ರಿಂದ ಶೇ. 6ಕ್ಕೆ ಹೆಚ್ಚಳ
  • 2024ರ ಏಪ್ರಿಲ್​ನಿಂದ ಜೂನ್ ಅವಧಿ: ಶೇ. 6.66ರಿಂದ ಶೇ. 6.7ಕ್ಕೆ ಹೆಚ್ಚಳ
  • 2024ರ ಜುಲೈನಿಂದ ಸೆಪ್ಟೆಂಬರ್ ಅವಧಿ: ಶೇ. 6.5
  • 2024ರ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿ: ಶೇ. 6.4

ಬಡ್ಡಿದರ ಯಥಾಸ್ಥಿತಿ

ಆರ್​​ಬಿಐ ಈ ಬಾರಿಯೂ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಶೇ. 6.5ರ ದರವನ್ನೇ ಮುಂದುವರಿಸಿದೆ. ಅಂದರೆ ಆರ್​ಬಿಐನ ಬಡ್ಡಿದರ ಶೇ. 6.5ರಷ್ಟೇ ಇರಲಿದೆ. ಇದರೊಂದಿಗೆ ಸತತ ಐದು ಅವಧಿಯೂ ಬಡ್ಡಿದರದಲ್ಲಿ ವ್ಯತ್ಯಯವಾಗಿಲ್ಲ. ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರದಲ್ಲೂ ಯಾವ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: ಚಿದಂಬರಂ, ರಾಜನ್​ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್

ಆರ್​ಬಿಐಗೆ ಹಣದುಬ್ಬರ ತಲೆನೋವು

ರಿಸರ್ವ್ ಬ್ಯಾಂಕ್​ಗೆ ಹಣದುಬ್ಬರಕ್ಕೆ ಕಡಿವಾಣ ಹಾಕುವುದೇ ಹೆಚ್ಚಿನ ಸವಾಲಾಗಿದೆ. ಆಹಾರವಸ್ತುಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬುದು ಆರ್​ಬಿಐನ ಹತಾಶೆ. ಈ ಹಣಕಾಸು ವರ್ಷದಲ್ಲಿ (2023-24) ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಆಧಾರಿತ ಹಣದುಬ್ಬರ ಅಥವಾ ರೀಟೇಲ್ ಇನ್​ಫ್ಲೇಶನ್ ಶೇ. 5.4ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಸದ್ಯದಲ್ಲೇ ಹಣದುಬ್ಬರ ನಿಗದಿತ ಗುರಿಯಾದ ಶೇ. 4ರ ದರಕ್ಕೆ ಇಳಿಸುವುದು ಸಾಧ್ಯವಿಲ್ಲ ಎನ್ನುವ ಸೂಚನೆಯನ್ನು ಆರ್​ಬಿಐ ರವಾನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Fri, 8 December 23