ನವದೆಹಲಿ, ಜೂನ್ 12: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲ ಪ್ರಮುಖ ಕೆವೈಸಿ ನಿಯಮಗಳಲ್ಲಿ (KYC norms) ಬದಲಾವಣೆ ತಂದಿದೆ. ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲಾಗಿದೆ. 2025ರ ಆರ್ಬಿಐ ಕೆವೈಸಿ ತಿದ್ದಪಡಿ ನಿರ್ದೇಶನದ ಮೂಲಕ, ಆಧಾರ್ ಆಧಾರಿತವಾಗಿ ಮಾಡಬಹುದಾದ ಇ-ಕೆವೈಸಿ, ವಿಡಿಯೋ ಕೆವೈಸಿ ಹಾಗೂ ಡಿಜಿಲಾಕರ್ ಡಾಕ್ಯುಮೆಂಟ್ಗಳ ಬಳಕೆ ಬಗ್ಗೆ ಇರುವ ಪ್ರಕಿಯೆಗಳನ್ನು ಸರಳಗೊಳಿಸಲಾಗಿದೆ.
ಮೊದಲ ಬಾರಿಗೆ ಬ್ಯಾಂಕ್ ಖಾತೆ ಹೊಂದುತ್ತಿರುವವರಿಗೆ, ಅದರಲ್ಲೂ ಮುಖ್ಯವಾಗಿ ಡಿಜಿಟಿ ಇತ್ಯಾದಿ ಸ್ಕೀಮ್ಗೆ ಬ್ಯಾಂಕ್ ಖಾತೆ ತೆರೆಯುತ್ತಿರುವಂಥವರಿಗೆ ಪ್ರಕಿಯೆ ಕ್ಲಿಷ್ಟವಾಗಬಾರದು ಎನ್ನುವ ದೃಷ್ಟಿಯಿಂದ ಕೆವೈಸಿ ನಿಯಮ ಪರಿಷ್ಕರಿಸಲಾಗಿದೆ.
ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿ ಇಕೆವೈಸಿ ನಡೆಸಿ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ನೀಡಲಾಗಿದೆ. ಆಧಾರ್ನಲ್ಲಿರುವ ವಿಳಾಸ ಬೇರೆ ಇದ್ದಲ್ಲಿ, ಸೆಲ್ಫ್ ಡಿಕ್ಲರೇಶನ್ ಸಲ್ಲಿಸಿದರೆ ಸಾಕು.
ಇದನ್ನೂ ಓದಿ: ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?
ಬ್ಯಾಂಕ್ ಅಕೌಂಟ್ ತೆರೆಯಲು ಕಚೇರಿಗೆ ಹೋಗಬೇಕೆಂದಿಲ್ಲ. ನೀವು ಕೂತ ಜಾಗದಿಂದಲೇ ಆಧಾರ್ ಒಟಿಪಿ ಆಧಾರಿತವಾಗಿ ಇಕೆವೈಸಿ ಮಾಡಬಹುದು. ಡಿಜಿಲಾಕರ್ನಲ್ಲಿರುವ ದಾಖಲೆಗಳು ಅಥವಾ ಇ-ಡಾಕ್ಯುಮೆಂಟ್ಗಳಿಗೆ ಬ್ಯಾಂಕುಗಳು ಅನುಮತಿಸುತ್ತವೆ.
ಗಮನಿಸಬೇಕಾದ ಸಂಗತಿ ಎಂದರೆ, ಈ ವಿಧಾನದಲ್ಲಿ ಬ್ಯಾಂಕ್ ಖಾತೆ ಆರಂಭಿಸಲಾಗಿದ್ದರೆ, ಒಂದು ವರ್ಷದೊಳಗೆ ಅದರ ಸಿಡಿಡಿ ಪೂರ್ಣಗೊಳಿಸಬೇಕು. ಅಂದರೆ, ಗ್ರಾಹಕರು ಬ್ಯಾಂಕ್ಗೆ ಮೌಖಿಕವಾಗಿ ಹೋಗಿ ಕೆವೈಸಿಯನ್ನು ವೆರಿಫೈ ಮಾಡಬೇಕಾಗಬಹುದು.
ವಿಡಿಯೋ ಆಧಾರಿತವಾಗಿ ಗ್ರಾಹಕರ ಗುರುತು ಹಿಡಿಯುವ ಪ್ರಕ್ರಿಯೆಗೆ (ವಿ-ಸಿಐಪಿ) ಅನಮತಿಸಲಾಗುತ್ತದೆ. ಬ್ಯಾಂಕ್ನ ಪ್ರತಿನಿಧಿಯೊಬ್ಬರು ವಿಡಿಯೋ ಕರೆ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ನೇರವಾಗಿ ವೆರಿಫಿಕೇಶನ್ ಮಾಡಬಹುದು. ಇದು ಬ್ಯಾಂಕ್ ಕಚೇರಿಗೆ ನೇರವಾಗಿ ಹೋಗಿ ಬ್ಯಾಂಕ್ ಖಾತೆ ತೆರೆದದ್ದಕ್ಕೆ ಸಮ. ಖಾತೆ ತೆರೆಯಲು ಅಥವಾ ಕೆವೈಸಿ ಅಪ್ಡೇಟ್ ಮಾಡಲು ಈ ವಿಡಿಯೋ ವಿಧಾನವನ್ನು ಬಳಸಬಹುದು.
ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಸ್ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ
ಗ್ರಾಹಕರು ಬೇರೆ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಅವರ ಕೆವೈಸಿ ದಾಖಲೆಗಳು ಕೇಂದ್ರ ಕೆವೈಸಿ ರಿಜಿಸ್ಟ್ರಿಯಲ್ಲಿ ಇರುತ್ತದೆ. ಇವರು ಇನ್ನೊಂದು ಬ್ಯಾಂಕ್ನಲ್ಲಿ ಖಾತೆ ತೆರೆಯುವಾಗ ಮತ್ತೆ ಕೆವೈಸಿ ದಾಖಲೆ ಸಲ್ಲಿಸಬೇಕಾಗುವುದಿಲ್ಲ. ರಿಜಿಸ್ಟ್ರಿಯಲ್ಲಿರುವ ಗ್ರಾಹಕರ ಕೆವೈಸಿ ದಾಖಲೆಯನ್ನು ಬ್ಯಾಂಕು ಪಡೆಯಬಹುದು. ಇದರಿಂದ ಅಕೌಂಟ್ ಓಪನಿಂಗ್ ಪ್ರಕ್ರಿಯೆ ಸುಲಭಗೊಳ್ಳುತ್ತದೆ.
ಇದರ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆಯು ಹೆಚ್ಚೆಚ್ಚು ಜನರನ್ನು ತಲುಪಲು, ಅದರಲ್ಲೂ ಗ್ರಾಮೀಣ ಮತ್ತು ಪಟ್ಟಣ ಭಾಗಗಳಲ್ಲಿ ಬ್ಯಾಂಕ್ ಖಾತೆಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ವಿಶೇಷ ಅಸ್ಥೆ ವಹಿಸಬೇಕು ಎಂದು ಆರ್ಬಿಐ ಹೇಳಿದೆ. ಸರ್ಕಾರದ ಯೋಜನೆಗಳಿಗಾಗಿ ಜನರು ತೆರೆದಿರುವ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡು, ಅದನ್ನು ಮತ್ತೆ ರೀಆ್ಯಕ್ಟಿವೇಟ್ ಮಾಡುವ ವೇಳೆ ಬ್ಯಾಂಕುಗಳು ಉದಾರ ಧೋರಣೆ ಹೊಂದಿರಬೇಕು ಎಂದು ಆರ್ಬಿಐ ಸೂಚಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ