Sovereign Green Bonds: ಎರಡು ಕಂತು ಸಾವರಿನ್ ಗ್ರೀನ್ ಬಾಂಡ್ ಬಿಡುಗಡೆ ಮಾಡಲಿದೆ ಆರ್​ಬಿಐ

| Updated By: Ganapathi Sharma

Updated on: Jan 06, 2023 | 6:52 PM

ಸಾವರಿನ್ ಗ್ರೀನ್ ಬಾಂಡ್ ಎಂಬುದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹೂಡಿಕೆದಾರರಿಂದ ಹಣ ಸಂಗ್ರಹ ಮಾಡಲು ಇರುವ ಒಂದು ಸಾಧನ. ಅಂದರೆ ಈ ಬಾಂಡ್​​ಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಸರ್ಕಾರ ಹಣ ಸಂಗ್ರಹಿಸುತ್ತದೆ. ಈ ಹಣವನ್ನು ಹವಾಮಾನ, ಪರಿಸರ ವ್ಯವಸ್ಥೆಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

Sovereign Green Bonds: ಎರಡು ಕಂತು ಸಾವರಿನ್ ಗ್ರೀನ್ ಬಾಂಡ್ ಬಿಡುಗಡೆ ಮಾಡಲಿದೆ ಆರ್​ಬಿಐ
ಸಾವರಿನ್ ಗ್ರೀನ್ ಬಾಂಡ್ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ಜನವರಿ 25 ಮತ್ತು ಫೆಬ್ರವರಿ 9ರಂದು 8,000 ಕೋಟಿ ರೂ.ನ ಎರಡು ಕಂತು ಸಾವರಿನ್ ಗ್ರೀನ್​ ಬಾಂಡ್​ (Sovereign Green Bonds) ಬಿಡುಗಡೆ ಮಾಡುವುದಾಗಿ ಆರ್​ಬಿಐ (RBI) ಘೋಷಿಸಿದೆ. ಬಾಂಡ್ ಮೂಲಕ ದೊರೆಯುವ ಆದಾಯವನ್ನು ಸರ್ಕಾರಿ ವಲಯದ ಯೋಜನೆಗಳಲ್ಲಿ ನಿಯೋಜಿಸಲಾಗುವುದು. ಅದು ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಆರ್​ಬಿಐ ಪ್ರಕಟಣೆ ತಿಳಿಸಿದೆ. ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಾವರಿನ್ ಗ್ರೀನ್ ಬಾಂಡ್​ಗಳನ್ನು ಬಿಡುಗಡೆ ಮಾಡುವ ಬಗ್ಗೆ 2022-23ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು.

ಅದರಂತೆ, 2022-23ನೇ ಸಾಲಿಗಾಗಿ ಒಟ್ಟು 16,000 ಕೋಟಿ ರೂ. ಮೊತ್ತದ ಸಾವರಿನ್ ಗ್ರೀನ್ ಬಾಂಡ್​ಗಳನ್ನು ಬಿಡುಗಡೆ ಮಾಡುವುದಾಗಿ 2022ರ ಸೆಪ್ಟೆಂಬರ್ 29ರಂದು ಸರ್ಕಾರ ಘೋಷಿಸಿತ್ತು. 2022ರ ನವೆಂಬರ್ 9ರಂದು ಸಾವರಿನ್ ಗ್ರೀನ್ ಬಾಂಡ್​​ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿತ್ತು. ಈ ಗ್ರೀನ್ ಬಾಂಡ್​​ಗಳು 5ರಿಂದ 10 ವರ್ಷಗಳ ಅವಧಿಗೆ ಲಭ್ಯವಿರಲಿದೆ ಎಂದು ಆರ್​ಬಿಐ ತಿಳಿಸಿದೆ.

ಇದನ್ನೂ ಓದಿ: Green Bond: ನಿಮ್ಮ ಹಣ ಪರಿಸರಪೂರಕ ಕೆಲಸಕ್ಕೆ ಬಳಕೆಯಾಗಬೇಕೇ? ಗ್ರೀನ್ ಬಾಂಡ್ ಸರಿಯಾದ ಮಾರ್ಗ

ಏನಿದು ಸಾವರಿನ್ ಗ್ರೀನ್ ಬಾಂಡ್?

ಸಾವರಿನ್ ಗ್ರೀನ್ ಬಾಂಡ್ ಎಂಬುದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹೂಡಿಕೆದಾರರಿಂದ ಹಣ ಸಂಗ್ರಹ ಮಾಡಲು ಇರುವ ಒಂದು ಸಾಧನ. ಅಂದರೆ ಈ ಬಾಂಡ್​​ಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಸರ್ಕಾರ ಹಣ ಸಂಗ್ರಹಿಸುತ್ತದೆ. ಈ ಹಣವನ್ನು ಹವಾಮಾನ, ಪರಿಸರ ವ್ಯವಸ್ಥೆಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಈ ಯೋಜನೆಯನ್ನು 2022-23ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕೇಂದ್ರ ಸರ್ಕಾರದ ಪರವಾಗಿ ಆರ್​ಬಿಐ ಈ ಬಾಂಡ್​​ ಅನ್ನು ಬಿಡುಗಡೆ ಮಾಡುತ್ತದೆ. ಈ ಬಾಂಡ್​ಗೆ ಹೂಡಿಕೆದಾರರಿಗೆ ಸರ್ಕಾರ ಖಾತರಿ ನೀಡುತ್ತದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Fri, 6 January 23