Digital Rupee: ಇಂದು ಡಿಜಿಟಲ್ ರೂಪಾಯಿ ಬಿಡುಗಡೆ; ಬೆಂಗಳೂರಿನಲ್ಲೂ ಸಿಗಲಿದೆ ಇ-ರೂಪಾಯಿ
ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಆರಂಭದಲ್ಲಿ ಡಿಜಿಟಲ್ ರೂಪಾಯಿ ಚಲಾವಣೆಗೆ ಬರಲಿದೆ.
ನವದೆಹಲಿ: ನವೆಂಬರ್ 1ರಂದು ಹೋಲ್ಸೇಲ್ ಅಥವಾ ಸಗಟು ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು (Digital Rupee) ಬಿಡುಗಡೆ ಮಾಡಿದ್ದ ಆರ್ಬಿಐ (RBI) ಇಂದು ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು (e-Rupee) ಬಿಡುಗಡೆ ಮಾಡಲಿದೆ. ಬೆಂಗಳೂರು (Bengaluru) ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಅಸ್ತಿತ್ವಕ್ಕೆ ಬರಲಿದೆ. ಎಸ್ಬಿಐ (SBI), ಐಸಿಐಸಿಐ ಬ್ಯಾಂಕ್ (ICICI Bank) ಸೇರಿದಂತೆ ನಾಲ್ಕು ಬ್ಯಾಂಕ್ಗಳು ಆರಂಭದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ವ್ಯವಹಾರದಲ್ಲಿ ತೊಡಗಿಕೊಳ್ಳಲಿವೆ ಎಂದು ಆರ್ಬಿಐ ತಿಳಿಸಿದೆ.
ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಆರಂಭದಲ್ಲಿ ಡಿಜಿಟಲ್ ರೂಪಾಯಿ ಚಲಾವಣೆಗೆ ಬರಲಿದೆ. ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಸದ್ಯ ಬಳಕೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖ ಬೆಲೆಯಲ್ಲೇ ಡಿಜಿಟಲ್ ರೂಪಾಯಿಯೂ ಮುದ್ರಿತವಾಗಿರಲಿದೆ. ಯುಪಿಐ ವ್ಯವಸ್ಥೆಗೆ ಯುಪಿಐ ಐಡಿ ಅಥವಾ ಕ್ಯುಆರ್ ಕೋಡ್ ಇದ್ದಂತೆ ಡಿಜಿಟಲ್ ರೂಪಾಯಿಗೂ ಡಿಜಿಟಲ್ ರೂಪಾಯಿ ವಾಲೆಟ್ ವ್ಯವಸ್ಥೆ ಇರಲಿದೆ. ಬಳಕೆದಾರರಿಗೆ ಇದನ್ನು ಮೊಬೈಲ್ ಫೋನ್‌ಗಳಲ್ಲಿ ಸಂಗ್ರಹಿಸಡಲು ಸಾಧ್ಯವಾಗಲಿದೆ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: Digital Rupee: ಆರ್ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ
ಡಿಜಿಟಲ್ ವಾಲೆಟ್ ಮೂಲಕ ಇ-ರೂಪಾಯಿ ವಹಿವಾಟು ನಡೆಯಲಿದ್ದು, ಹೆಚ್ಚು ಸುರಕ್ಷಿತವಾಗಿರಲಿದೆ ಎಂದು ಆರ್ಬಿಐ ಹೇಳಿದೆ. ಒಂದು ಬಾರಿ ಬ್ಯಾಂಕ್ನಿಂದ ಕರೆನ್ಸಿ ಖರೀದಿ ಮಾಡಿದರೆ ನಂತರ ಅದು ವಾಲೆಟ್ನಿಂದ ವಾಲೆಟ್ಗೆ ವರ್ಗಾವಣೆಯಾಗುತ್ತಾ ಇರಲಿದೆ. 10, 100, 200, 500 ರೂ. ಮುಖಬೆಲೆಯ ಡಿಜಿಟಲ್ ರೂಪಾಯಿಯೂ ದೊರೆಯಲಿದೆ. 50 ಪೈಸೆ ಹಾಗೂ 1 ರೂ. ಮುಖಬೆಲೆಯ ಡಿಜಿಟಲ್ ರೂಪಾಯಿಯೂ ಲಭ್ಯವಾಗಲಿದೆ ಎನ್ನಲಾಗಿದೆ.
ನವೆಂಬರ್ 1ರಂದು ಆರ್ಬಿಐ ಹೋಲ್ಸೇಲ್ ವಿಭಾಗದ ಇ-ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಈ ಮಾದರಿಯ ಡಿಜಿಟಲ್ ರೂಪಾಯಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್ಎಸ್ಬಿಸಿ ಬ್ಯಾಂಕ್ಗಳಲ್ಲಿ ಸದ್ಯ ಪ್ರಾಯೋಗಿಕವಾಗಿ ಚಲಾವಣೆಯಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ