ಸಾವಿರಾರು ರೂ ಮೌಲ್ಯದ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಇಲ್ಲಿದೆ ಮರ್ಮ
Google, OpenAI, Perplexity providing free AI to Indians: ಚ್ಯಾಟ್ಜಿಪಿಟಿ ಗೋನಂತಹ ಸುಧಾರಿತ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇವುಗಳ ಸಬ್ಸ್ಕ್ರಿಪ್ಷನ್ಗೆ ಹಲವು ಸಾವಿರ ರೂ ಆಗುತ್ತದೆ. ಈ ಉಚಿತ ಎಐ ಹಂಚಿಕೆಯ ತಂತ್ರದ ಹಿಂದೆ ಬೇರೆ ಉದ್ದೇಶ ಇದೆ. ಭಾರತದಲ್ಲಿ ನಿರ್ಮಾಣವಾಗುವ ಅಗಣಿತ ದತ್ತಾಂಶವು ಎಐ ಮಾಡಲ್ಗಳನ್ನು ಮತ್ತಷ್ಟು ಟ್ರೈನ್ ಮಾಡಲು ಬಳಕೆಯಾಗುತ್ತದೆ.

ಚ್ಯಾಟ್ಜಿಪಿಟಿ, ಪರ್ಪ್ಲೆಕ್ಸಿಟಿ, ಗೂಗಲ್ ಜೆಮಿನಿ ಇತ್ಯಾದಿ ಎಐ ಚ್ಯಾಟ್ಬೋಟ್ಗಳನ್ನು (AI Models) ಭಾರತೀಯರು ಉಚಿತವಾಗಿ ಅನುಭವಿಸುತ್ತಿದ್ದಾರೆ. ಅಡ್ವಾನ್ಸ್ಡ್ ವರ್ಷನ್ಗಳೂ ಕೂಡ ಉಚಿತವಾಗಿ ಲಭ್ಯವಿವೆ. ಈ ಸುಧಾರಿತ ಆವೃತ್ತಿಯ ಎಐ ಮಾಡಲ್ಗಳನ್ನು ಸಬ್ಸ್ಕ್ರೈಬ್ ಮಾಡಬೇಕೆಂದರೆ ವರ್ಷಕ್ಕೆ 10-30 ಸಾವಿರ ರೂ ತೆರಬೇಕು. ಇದನ್ನು ಕಂಪನಿಗಳು ಉಚಿತವಾಗಿ ಹಂಚುತ್ತಿವೆ. ಚ್ಯಾಟ್ಜಿಪಿಟಿಯ ಸುಧಾರಿತ ಆವೃತ್ತಿಯಾದ ಚ್ಯಾಟ್ಜಿಪಿಟಿ ಗೋ ಪ್ಲಾನ್ ಅನ್ನು ಒಂದು ವರ್ಷ ಉಚಿತ ಕೊಡಲಾಗುತ್ತಿದೆ.
ಹೊಸ ಸೇವೆಗಳನ್ನು ಈ ರೀತಿ ಆರಂಭದಲ್ಲಿ ಉಚಿತವಾಗಿ ನೀಡುವುದು ಬ್ಯುಸಿನೆಸ್ ಸ್ಟ್ರಾಟಿಜಿ. ಜನರು ಇವುಗಳಿಗೆ ಒಗ್ಗಿಕೊಂಡ ಬಳಿಕ ಹಂತ ಹಂತವಾಗಿ ದರ ಹೇರಿಕೆ ಮತ್ತು ಏರಿಕೆ ಮಾಡುತ್ತಾ ಹೋಗಲಾಗುತ್ತದೆ. ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಊರಲು ಇದೇ ತಂತ್ರ ಅನುಸರಿಸಿತ್ತು. ಈ ಜಾಗತಿಕ ಎಐ ಕಂಪನಿಗಳೂ ಇದೇ ತಂತ್ರ ಅನುಸರಿಸುತ್ತಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ.
ಇದನ್ನೂ ಓದಿ: ನಿರೀಕ್ಷೆಮೀರಿಸುತ್ತದಾ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ?; ವಿ ಅನಂತನಾಗೇಶ್ವರನ್ ವಿಶ್ವಾಸ
ಆದರೆ, ಈ ಉಚಿತ ಕೊಡುಗೆಯ ಹಿಂದೆ ಎಐ ಕಂಪನಿಗಳಿಗೆ ಇದಕ್ಕಿಂತಲೂ ಇನ್ನೂ ದೊಡ್ಡ ಉದ್ದೇಶ ಇದೆ ಎಂದು ತಜ್ಞರು ಭಾವಿಸಿದ್ದಾರೆ. ಅವರ ಪ್ರಕಾರ, ಎಐ ಮಾಡಲ್ಗಳ ಬೆಳವಣಿಗೆಗೆ ಈಗ ಹೆಚ್ಚೆಚ್ಚು ದತ್ತಾಂಶಗಳು ಬೇಕು. ಭಾರತ ಈಗ ದತ್ತಾಂಶಗಳ ಭವ್ಯ ಭಂಡಾರವೇ ಆಗಿದೆ.
ಭಾರತದಲ್ಲಿ 70 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ಸ್ಮಾರ್ಟ್ಫೋನ್ ಬಳಸುವವರ ಸಂಖ್ಯೆ ಬಹಳ ದೊಡ್ಡದಿದೆ. ಇಲ್ಲಿ ಡಾಟಾ ದರ ಕಡಿಮೆ ಇದೆ. ಹೀಗಾಗಿ, ಇಂಟರ್ನೆಟ್ ಬಳಕೆ ಬಹಳ ಅಧಿಕ ಇದೆ. ಇವರೆಲ್ಲರೂ ಕೂಡ ಮನಸೋಯಿಚ್ಛೆ ಎಐ ಮಾಡಲ್ಗಳ ಸೇವೆ ಬಳಸಿಬಿಟ್ಟರೆ ಅಗಣಿತವಾದ ದತ್ತಾಂಶವೇ ನಿರ್ಮಾಣವಾಗುತ್ತದೆ. ಎಐ ಕಂಪನಿಗಳಿಗೆ ಇದುವೇ ಬಹಳ ದೊಡ್ಡ ನಿಧಿ.
ಇದನ್ನೂ ಓದಿ: ಸ್ಕ್ರ್ಯಾಪ್ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು
ಎಐ ಮಾಡಲ್ಗಳನ್ನು ಮತ್ತಷ್ಟು ಹರಿತವಾಗಿ ಟ್ರೈನ್ ಮಾಡಲು ಈ ದತ್ತಾಂಶ ಬಹಳ ಅಗತ್ಯ. ಭಾರತದಲ್ಲಿ ಎಐ ಮಾರುಕಟ್ಟೆ 2027ರಷ್ಟರಲ್ಲಿ 17 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಎಐ ಮಾರುಕಟ್ಟೆ ಭಾರತದ್ದು. ಅಲ್ಲದೆ ಭಾರತವು ವಿಶ್ವದ ಬೋಟ್ ಟ್ರೈನಿಂಗ್ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಎಐ ಮಾಡಲ್ಗಳನ್ನು ಉಚಿತವಾಗಿ ನೀಡಲು ಕಂಪನಿಗಳು ಮುಂದಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




