
ನವದೆಹಲಿ, ಜನವರಿ 22: ಬ್ಲಿಂಕಿಟ್ ಮತ್ತು ಜೊಮಾಟೊದ ಮಾಲಕ ಸಂಸ್ಥೆಯಾದ ಎಟರ್ನಲ್ನ ಗ್ರೂಪ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ (Deepinder Goyal) ನಿನ್ನೆ ರಾಜೀನಾಮೆ ಕೊಟ್ಟಿದ್ದಾರೆ. ಬ್ಲಿಂಕಿಟ್ನ ಸಿಇಒ ಆಗಿದ್ದ ಆಲ್ಬೀಂದರ್ ಧಿಂಡ್ಸ ಅವರು ಎಟರ್ನಲ್ ಗ್ರೂಪ್ನ ಸಿಇಒ ಆಗಿ ಬಡ್ತಿ ಮತ್ತು ಜವಾಬ್ದಾರಿ ಪಡೆಯಲಿದ್ದಾರೆ. ದೀಪಿಂದರ್ ಗೋಯಲ್ ಅವರು ಸ್ಟಾಕ್ ಫೈಲಿಂಗ್ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಷೇರುದಾರರು ಅನುಮಸತಿಸಿದರೆ ಎಟರ್ನಲ್ ನಿರ್ದೇಶಕರ ಮಂಡಳಿಯಲ್ಲಿ ವೈಸ್ ಛೇರ್ಮನ್ ಆಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ. ಹಾಗೆಯೇ, ತಾನು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೆ ಏನು ಮಾಡಲು ಹೊರಟಿದ್ದೇನೆ ಎಂಬುದರ ಮಾಹಿತಿ ನೀಡಿದ್ದಾರೆ.
ದೀಪಿಂದರ್ ಗೋಯಲ್ ಜೊಮಾಟೊವನ್ನು ಯಶಸ್ವಿ ಕಂಪನಿಯಾಗಿಸಿದರು. ಬ್ಲಿಂಕಿಟ್ ಅನ್ನೂ ಸೂಪರ್ ಸಕ್ಸಸ್ ಆಗಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಟರ್ನಲ್ ಎನ್ನುವ ಗ್ರೂಪ್ ಕಂಪನಿಯ ನಿರ್ಮಾಣವಾಗಿದ್ದು, ಇದರ ಅಡಿಯಲ್ಲಿ ಜೊಮಾಟೊ ಮತ್ತು ಬ್ಲಿಂಕಿಟ್ ಇವೆ. ಎಟರ್ನಲ್ಗೆ ಪ್ರಮುಖ ಆದಾಯ ಮೂಲವೇ ಬ್ಲಿಂಕಿಟ್ ಆಗಿದೆ. ಯಶಸ್ವಿ ಬ್ಯುಸಿನೆಸ್ ಮಾಡಲ್ ಅನ್ನು ರೂಪಿಸಿದ್ದರ ಹಿಂದೆ ದೀಪಿಂದರ್ ಅವರ ಶ್ರಮ ಇದೆ.
ಇದನ್ನೂ ಓದಿ: ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ
ದೀಪಿಂದರ್ ಗೋಯಲ್ ಕೆಲ ಕುತೂಹಲಕಾರಿ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಟೆಂಪಲ್ ಒಂದು. ಮುಖದ ಬದಲಿಯಲ್ಲಿ, ಅಂದರೆ ಕಣ್ಣು ಮತ್ತು ಕಿವಿ ನಡುವೆ ತುಸು ಮೇಲಿನ ಪ್ರದೇಶವನ್ನು ಟೆಂಪಲ್ ಎನ್ನುತ್ತಾರೆ. ಆ ಜಾಗದಲ್ಲಿ ಧರಿಸಬಹುದಾದ ಒಂದು ಉಪಕರಣವನ್ನು (Temple Device) ಗೋಯಲ್ ಅಭಿವೃದ್ಧಿಪಡಿಸುತ್ತಿದ್ದಾರೆ. ಮಿದುಳಿಗೆ ರಕ್ತದ ಹರಿವವನ್ನು ಇದು ಅಳೆಯಬಲ್ಲುದು. ಗುರುತ್ವಾಕರ್ಷಣ ಶಕ್ತಿಯಿಂದ ಮಿದುಳಿಗೆ ರಕ್ತದ ಚಲನೆ ಕಡಿಮೆ ಆಗಬಲ್ಲುದು ಎಂದು ಕೆಲ ತಜ್ಞರು ವಾದಿಸುತ್ತಿದ್ದಾರೆ. ಟೆಂಪಲ್ ಸಾಧನದ ಮೂಲಕ ಇದನ್ನು ಪರೀಕ್ಷಿಸಲಾಗುತ್ತಿದೆ. ಇದು ನಿಜವೇ ಎಂಬುದಕ್ಕೆ ಸಾಕ್ಷ್ಯಾಧಾರ ಸಿಕ್ಕರೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವುದು ಸುಲಭವಾಗಬಹುದು.
ಎಲ್ಎಟಿ ಏರೋಸ್ಪೇಸ್ (LAT Aerospace) ಸದ್ಯ ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್. ದೇಶದಲ್ಲಿ ವೈಮಾನಿಕ ಕ್ರಾಂತಿ ಮಾಡಲು ಹೊರಟಂತಿದೆ. ಬಸ್ಸು, ಮೆಟ್ರೋಗಳಂತೆ ವಿಮಾನಗಳೂ ಕೂಡ ನಗರದ ವಿವಿಧ ಏರಿಯಾಗಳಲ್ಲಿ ಇಳಿಯಬಲ್ಲಂತಹ ಒಂದು ವ್ಯವಸ್ಥೆಯ ಪರಿಕಲ್ಪನೆ ಅದು. ಫ್ಲೈಯಿಂಗ್ ಟ್ಯಾಕ್ಸಿ ರೀತಿಯದ್ದು. 10-20 ಸೀಟರ್ಗಳ ಸಣ್ಣ ಸಣ್ಣ ವಿಮಾನಗಳನ್ನು ನಿರ್ಮಿಸಲು ಯತ್ನಿಸಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯೋಗಗಳಾಗಿವೆ. ಲಂಬವಾಗಿ ಟೆಕಾಫ್ ಆಗಿ ನಂತರ ಸುರಕ್ಷಿತವಾಗಿ ಇಳಿಯಬಲ್ಲಂತೆ ಆಗುವವರೆಗೂ ಪ್ರಯೋಗಗಳು ನಡೆಯಲಿವೆ.
ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ವಿಶ್ವದಲ್ಲಿ ಯಾರೂ ಕೂಡ ಈ ಪ್ರಯೋಗ ಮಾಡಿಲ್ಲ. ತಾವೇ ಮೊದಲು ಮಾಡುತ್ತಿರುವುದು. ಇದು ವಿಫಲವಾದರೂ ಪರವಾಗಿಲ್ಲ. ಪ್ರಯತ್ನವನ್ನಂತೂ ಮಾಡುವುದಾಗಿ ರಾಜ್ ಶಮಾನಿ ಪೋಡ್ಕ್ಯಾಸ್ಟ್ನಲ್ಲಿ ದೀಪಿಂದರ್ ಗೋಯಲ್ ಹೇಳಿಕೊಂಡಿದ್ದಾರೆ. ಗೋಯಲ್ ಅವರು ಇವಿಷ್ಟೂ ಮಾತ್ರವಲ್ಲ, ಇನ್ನೂ ಕೆಲ ಬ್ಯುಸಿನೆಸ್ ಹಾಗೂ ಇತರ ಪರಿಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ