
ಭಾರತದಲ್ಲಿ ಬಜೆಟ್ 5ಜಿ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಮತ್ತಷ್ಟು ಹೆಚ್ಚಾಗಿದೆ. ಶಿಯೋಮಿ (Xiaomi) ಒಡೆತನದ ರೆಡ್ಮಿ ಕಂಪನಿ ರೆಡ್ಮಿ 17ಸಿ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೊಡ್ಡ ಡಿಸ್‌ಪ್ಲೇ, 6000mAh ಸಾಮರ್ಥ್ಯದ ಬ್ಯಾಟರಿ, 120Hz ರಿಫ್ರೆಶ್ ದರದ ಪರದೆ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 20,999 ದಿಂದ ಶುರುವಾಗುತ್ತದೆ. ಈ ಫೋನಿನ ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ರೆಡ್ಮಿ 17ಸಿ 5ಜಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯ ಬೆಲೆ 20,999 ಆಗಿದೆ. 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮತ್ತೊಂದು ಮಾದರಿಯ ಬೆಲೆ 22,999.
ರೆಡ್ಮಿ 17ಸಿ 5ಜಿಯಲ್ಲಿ 6.9 ಇಂಚಿನ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ನೀಡಲಾಗಿದೆ. 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರಿಂದ ವೆಬ್‌ಸೈಟ್ ಸ್ಕ್ರೋಲ್ ಮಾಡುವುದು, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ವೀಡಿಯೊ ವೀಕ್ಷಣೆಯ ಸಂದರ್ಭಗಳಲ್ಲಿ ಪರದೆಯ ಚಲನೆ ಹೆಚ್ಚು ಸರಾಗವಾಗಿ ಕಾಣಿಸಬಹುದು.
ಕಡಿಮೆ ನೀಲಿ ಬೆಳಕು, ಫ್ಲಿಕ್ಕರ್-ಫ್ರೀ ಮತ್ತು ಸರ್ಕೇಡಿಯನ್ ಫ್ರೆಂಡ್ಲಿ ವೀಕ್ಷಣೆಗೆ ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನೂ ಫೋನ್ ಹೊಂದಿದೆ. ಒದ್ದೆಯಾದ ಬೆರಳುಗಳಿಂದಲೂ ಟಚ್‌ಸ್ಕ್ರೀನ್ ಬಳಸಲು ಸಹಾಯ ಮಾಡುವ ವೆಟ್ ಟಚ್ ತಂತ್ರಜ್ಞಾನವನ್ನು ನೀಡಲಾಗಿದೆ.
ಫೋನ್‌ನ ಪ್ರಮುಖ ಆಕರ್ಷಣೆಗಳಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯೂ ಒಂದು. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಇದು 105 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ. ಬ್ಯಾಟರಿಗೆ 33W ವೇಗದ ಚಾರ್ಜಿಂಗ್ ಬೆಂಬಲವಿದೆ. ಕಂಪನಿಯ ಪ್ರಕಾರ, ಸುಮಾರು 90 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇ.80ರಷ್ಟು ಚಾರ್ಜ್ ಮಾಡಬಹುದು.
Apple Pay India: ಭಾರತಕ್ಕೆ ಬಂತು ಆ್ಯಪಲ್ ಪೇ; ಐಫೋನ್‌ನಲ್ಲೇ ಕಾರ್ಡ್ ಬಳಸಿ ಪಾವತಿ ಮಾಡಿ!
ಕಾರ್ಯಕ್ಷಮತೆಗಾಗಿ ರೆಡ್ಮಿ 17ಸಿ 5ಜಿಯಲ್ಲಿ 6 ನ್ಯಾನೋಮೀಟರ್ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ನೀಡಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಎಚ್‌ಡಿಆರ್, ಪೋರ್ಟ್ರೇಟ್ ಮತ್ತು ನೈಟ್ ಮೋಡ್‌ನಂತಹ ಆಯ್ಕೆಗಳಿವೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಹಿಂಬದಿಯ ಕ್ಯಾಮೆರಾದಿಂದ 1080p ಗುಣಮಟ್ಟದಲ್ಲಿ ವೀಡಿಯೊ ರೆಕಾರ್ಡ್ ಮಾಡಬಹುದು.
ರೆಡ್ಮಿ 17ಸಿ 5ಜಿ ಶಿಯೋಮಿಯ ಹೈಪರ್‌ಓಎಸ್ 3 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 16 ಆಧಾರಿತವಾಗಿದೆ. ಗೂಗಲ್‌ನ ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಸಾಫ್ಟ್‌ವೇರ್ ವೈಶಿಷ್ಟ್ಯಗಳಿವೆ. ಕನೆಕ್ಟಿವಿಟಿಗಾಗಿ 5ಜಿ, 4ಜಿ ಎಲ್‌ಟಿಇ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4 ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೌಲಭ್ಯಗಳಿವೆ. ಸುಮಾರು 211 ಗ್ರಾಂ ತೂಕವಿರುವ ಫೋನ್ 7.99 ಮಿ.ಮೀ ದಪ್ಪ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Thu, 1 October 26