ಮುಂಬೈ: ರಿಲಯನ್ಸ್ ಬ್ರ್ಯಾಂಡ್ ಲಿಮಿಟೆಡ್ (ಆರ್‌ಬಿಎಲ್) ಮತ್ತು ಪ್ಲಾಸ್ಟಿಕ್ ಲೆಗ್ನೋ ಎಸ್‌ಪಿಎ ಕಂಪನಿಗಳು ಜಂಟಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತದಲ್ಲಿ ಆಟಿಕೆ ಉತ್ಪಾದನೆ ಉದ್ಯಮಕ್ಕೆ ಇಂಬು ನೀಡುವುದಕ್ಕಾಗಿ ಪ್ಲಾಸ್ಟಿಕ್ ಲೆಗ್ನೋ ಎಸ್‌ಪಿಎ ಕಂಪನಿಯಲ್ಲಿ 40% ಪಾಲನ್ನು ಆರ್‌ಬಿಎಲ್ ಹೊಂದಲಿದೆ. ಎರಡು ಉದ್ದೇಶಕ್ಕೆ ಆರ್‌ಬಿಎಲ್ ಈ ಹೂಡಿಕೆ ಮಾಡಿದೆ. ಆರ್‌ಬಿಎಲ್‌ನ ಆಟಿಕೆ ಉದ್ಯಮಕ್ಕೆ ಇನ್ನಷ್ಟು ಬೆಂಬಲವನ್ನು ಇದು ನೀಡುತ್ತದೆ ಮತ್ತು ಭಾರತದಲ್ಲಿ ಆಟಿಕೆ ಉತ್ಪಾದನೆ ಉದ್ಯಮದ ಪೂರೈಕೆ ಸರಣಿಗೆ ವೈವಿಧ್ಯತೆಯನ್ನು ಇದು ನೀಡುತ್ತದೆ.
ಪ್ಲಾಸ್ಟಿಕ್ ಲೆಗ್ನೋ ಎಸ್‌ಪಿಎ ಮಾಲೀಕತ್ವವು ಸುನಿನೋ ಸಮೂಹದಲ್ಲಿದೆ. ಯುರೋಪ್‌ನಲ್ಲಿ ಈ ಸಂಸ್ಥೆಗೆ 25 ಕ್ಕೂ ಹೆಚ್ಚು ವರ್ಷಗಳ ಆಟಿಕೆ ಉತ್ಪಾದನೆ ಅನುಭವ ಇದೆ. ಭಾರತದಲ್ಲಿ ಈ ಸಮೂಹ 2009 ರಲ್ಲಿ ವಹಿವಾಟು ಆರಂಭಿಸಿತು. ಜಾಗತಿಕ ಮಾರುಕಟ್ಟೆಗೆ ಹಾಗೂ ವಿಶೇಷವಾಗಿ ಬೆಳೆಯುತ್ತಿರುವ ಭಾರತದ ಮಾರುಕಟ್ಟೆಗೆ ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮುವ ಧ್ಯೇಯವನ್ನು ಈ ಕಂಪನಿ ಹೊಂದಿತ್ತು.
ಆತ್ಮನಿರ್ಭರ ಭಾರತವಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯಕ್ಕೆ ಅನುಗುಣವಾಗಿ, ವಿಶ್ವದರ್ಜೆ ಆಟಿಕೆ ಉತ್ಪಾದನೆಯಲ್ಲಿ ಆಳವಾದ ಅನುಭವ ಹೊಂದಿರುವ ಪ್ಲಾಸ್ಟಿಕ್ ಲೆಗ್ನೋ ಜೊತೆಗಿನ ಈ ಸಹಭಾಗಿತ್ವ ಮಾಡಲಾಗಿದೆ. ಈ ಮೂಲಕ ಜಾಗತಿಕ ಆಟಿಕೆ ಚಿಲ್ಲರೆ ಉದ್ಯಮಕ್ಕೆ ನಮಗೆ ಹೊಸ ಬಾಗಿಲುಗಳು ಹಾಗೂ ಅಪಾರ ಅವಕಾಶಗಳು ತೆರೆಯುತ್ತಿವೆ. ಪ್ರತಿಸ್ಫರ್ಧಿಗಳಿಗಿಂತ ಒಂದು ಹೆಜ್ಜೆ ಆರ್‌ಬಿಎಲ್ ಮುಂದಿರುವುದಕ್ಕೆ ಇದು ಅನುವು ಮಾಡುತ್ತದೆ. ಅಷ್ಟೇ ಅಲ್ಲ, ದೇಶೀಯ ಮಾರುಕಟ್ಟೆ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಯಲ್ಲೂ ತನ್ನ ಹೆಜ್ಜೆ ಗುರುತನ್ನು ಮೂಡಿಸಲು ಆರ್‌ಬಿಎಲ್‌ಗೆ ಇದು ಅನುಕೂಲ ಮಾಡಿಕೊಡಲಿದೆ ಎಂದು ರಿಲಾಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್ ವಕ್ತಾರರು ಹೇಳಿದ್ದಾರೆ.
ಆರ್‌ಬಿಎಲ್ ಈಗಾಗಲೇ ಆಟಿಕೆ ಉದ್ಯಮದಲ್ಲಿ ಉತ್ತಮ ಹೆಜ್ಜೆ ಗುರುತು ಹೊಂದಿದೆ. ಬ್ರಿಟಿಷ್ ಚಿಲ್ಲರೆ ವಹಿವಾಟುದಾರ ಹ್ಯಾಮ್ಲೇಸ್ ಮತ್ತು ಭಾರತೀಯ ಆಟಿಕೆ ಸಂಸ್ಥೆ ರೋವನ್‌ಗೆ ಆರ್‌ಬಿಎಲ್ ಪ್ರಮುಖ ವಿತರಕನಾಗಿದೆ. ಹ್ಯಾಮ್ಲೇಸ್ ಆಟಿಕೆಗಳು 15 ದೇಶಗಳಲ್ಲಿನ 213 ಸ್ಥಳಗಳಲ್ಲಿ ಲಭ್ಯವಿದೆ ಮತ್ತು ಭಾರತದ ಅತಿದೊಡ್ಡ ಆಟಿಕೆ ಸ್ಟೋರ್ ಸರಣಿಯನ್ನು ಹೊಂದಿದೆ.
ಈ ಜಂಟಿ ಸಂಸ್ಥೆಯಲ್ಲಿ ಆರ್‌ಬಿಎಲ್ ಪಾಲುದಾರರಾಗಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಪ್ಲಾಸ್ಟಿಕ್ ಲೆಗ್ನೋ ಆಟಿಕೆ ಉದ್ಯಮದಲ್ಲಿ ಹೊಂದಿರುವ ಅನುಭವದ ಬಗ್ಗೆ ವಿಶ್ವಾಸವಿದೆ ಮತ್ತು ಹ್ಯಾಮ್ಲೆಯ ವಾಣಿಜ್ಯಿಕ ಸಂಪರ್ಕವು ಈ ಕಂಪನಿಗೆ ಇನ್ನಷ್ಟು ಇಂಬು ನೀಡಲಿದೆ. ಭಾರತದಲ್ಲಿ ಸಾಂಸ್ಕೃತಿ ಹಿನ್ನೆಲೆಯಲ್ಲಿ ಇನ್ನಷ್ಟು ಮಹತ್ವದ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಯೋಜನೆಯನ್ನು ಹೊಂದಿದ್ದೇವೆ. ಆರ್‌ಬಿಎಲ್‌ನಂತಹ ಸಂಸ್ಥೆಯ ಜೊತೆಗೆ ಇರುವಾಗ ನಾವು ಒಟ್ಟಾಗಿ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಸುನಿನೋ ಸಮೂಹದ ಸಹ ಮಾಲೀಕರಾದ ಪಾವ್ಲೋ ಸುನಿನೋ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?
Published On - 8:08 pm, Wed, 1 June 22