GDP: ಜಿಡಿಪಿ ಅಂದರೇನು ಎಂಬುದರಿಂದ ಮೊದಲುಗೊಂಡು ದೇಶದ ಹಲವು ಆರ್ಥಿಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಜಿಡಿಪಿ ಅಂದರೇನು, ಅದರ ಲೆಕ್ಕಾಚಾರ ಹೇಗೆ ಮತ್ತು ಒಂದು ದೇಶದ ಆರ್ಥಿಕತೆ ಮೇಲೆ ಅದರ ಪರಿಣಾಮ ಏನು ಎಂಬುದನ್ನು ಸಹಾಯಕ ಪ್ರಾಧ್ಯಾಪಕರಾದ ಗರಣಿ ಕೃಷ್ಣಮೂರ್ತಿ ಅವರು ಟಿವಿ9ಕನ್ನಡ ಡಿಜಿಟಲ್ ಜತೆಗೆ ಹಂಚಿಕೊಂಡಿದ್ದಾರೆ.
ಜಿಡಿಪಿ (Gross Domestic Product) ಅಂಕಿ-ಅಂಶ ಬಿಡುಗಡೆ ಆಗಿದೆ. ಇದಕ್ಕಾಗಿಯೇ ಪ್ರತಿ ಮೂರು ತಿಂಗಳಿಗೊಮ್ಮೆ, ಅಂತಿಮವಾಗಿ ವಾರ್ಷಿಕ ಲೆಕ್ಕಾಚಾರವನ್ನೂ ಜನರ ಮುಂದಿಡಲಾಗುತ್ತದೆ. ಇದಕ್ಕೆ ಯಾಕೆ ಇಷ್ಟೊಂದು ಮಹತ್ವ, ಇಷ್ಟು ಬೆಳವಣಿಗೆ ಆಯಿತು ಅಂತ ಹೇಳುವಾಗ ಅದಕ್ಕೆ ಏನು ಮಾನದಂಡ, ಜಿಡಿಪಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ. ಇವತ್ತಿಗೆ ಭಾರತದ ಆರ್ಥಿಕ ಸ್ಥಿತಿ ಹೇಗಿದೆ ಹೀಗೆ ಅನೇಕ ವಿಚಾರಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಗರಣಿ ಕೃಷ್ಣಮೂರ್ತಿ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ. ಪ್ರಶ್ನೋತ್ತರ ಮಾದರಿಯ ಈ ಲೇಖನದಲ್ಲಿ ಅನೇಕ ಮುಖ್ಯ ವಿಚಾರಗಳನ್ನು ಕೇಳಲಾಗಿದೆ ಹಾಗೂ ಅವುಗಳಿಗೆ ಕೃಷ್ಣಮೂರ್ತಿ ಅವರು ಅಷ್ಟೇ ಸರಳವಾಗಿ ಉತ್ತರಿಸಿದ್ದಾರೆ. ಅವುಗಳನ್ನು ಈಗ ನಿಮ್ಮೆದುರು ಇಡಲಾಗುತ್ತಿದೆ.
- ಪ್ರಶ್ನೆ: ಸರಳವಾಗಿ ಅರ್ಥವಾಗುವ ರೀತಿ ಜಿಡಿಪಿ ಅಂದರೇನು ಎಂಬುದನ್ನು ವಿವರಿಸುತ್ತೀರಾ? ಗರಣಿ ಕೃಷ್ಣಮೂರ್ತಿ: ಒಂದು ನಿರ್ದಿಷ್ಟ ಅವಧಿಗೆ, ಸಾಮಾನ್ಯವಾಗಿ ಇದು ತ್ರೈಮಾಸಿಕ (ಮೂರು ತಿಂಗಳು) ಹಾಗೂ ವಾರ್ಷಿಕವಾಗಿ ಒಮ್ಮೆ ಲೆಕ್ಕ ಹಾಕುವ ಬಾಬ್ತು. ಒಂದು ದೇಶದಲ್ಲಿ ಉತ್ಪಾದನೆ ಆಗುವ ಸರಕು ಹಾಗೂ ಸೇವೆಯ ಮೌಲ್ಯವನ್ನು ಜಿಡಿಪಿ ಎನ್ನಲಾಗುತ್ತದೆ. ಇದು ನಮ್ಮ- ನಿಮ್ಮೆಲ್ಲರ ಆದಾಯವನ್ನು ಸಹ ಸೂಚಿಸುತ್ತದೆ.
- ಪ್ರಶ್ನೆ: ಇಷ್ಟು ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ ಎಂಬುದನ್ನು ಹೇಗೆ ತಿಳಿಸಲಾಗುತ್ತದೆ? ಗರಣಿ ಕೃಷ್ಣಮೂರ್ತಿ: ಈ ವರ್ಷದ ಜನವರಿಯಿಂದ ಮಾರ್ಚ್ (2022ರ ಜನವರಿಯಿಂದ ಮಾರ್ಚ್) ತನಕದ ಜಿಡಿಪಿ ಲೆಕ್ಕ ಹಾಕುತ್ತಿದ್ದೇವೆ ಅಂದುಕೊಳ್ಳಿ. ಅದನ್ನು ಹಿಂದಿನ ವರ್ಷದ, ಅಂದರೆ 2021ರ ಜನವರಿಯಿಂದ ಮಾರ್ಚ್ ಅವಧಿಗೆ ಹೋಲಿಸಲಾಗುತ್ತದೆ. ಆ ಅವಧಿಯಲ್ಲಿ ಉತ್ಪಾದನೆಯಾದ ಮೊತ್ತಕ್ಕಿಂತ ಎಷ್ಟು ಹೆಚ್ಚಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ವ್ಯತ್ಯಾಸವು ಸಕಾರಾತ್ಮಕ ಆಗಿದ್ದಲ್ಲಿ ಬೆಳವಣಿಗೆ ಎನ್ನಲಾಗುತ್ತದೆ. ಶೇಕಡಾವಾರು ಪ್ರಮಾಣದಲ್ಲಿ ಮುಂದಿಡಲಾಗುತ್ತಿದೆ.
- ಪ್ರಶ್ನೆ: ಹಾಗಿದ್ದರೆ ಜಿಡಿಪಿ ಉತ್ತಮವಾಗಿದ್ದರೆ ಆ ದೇಶ ಬೆಳವಣಿಗೆ ಆಗಿದೆ ಅಂತಲೇ ಅರ್ಥವೆ? ಗರಣಿ ಕೃಷ್ಣಮೂರ್ತಿ: ಖಂಡಿತಾ ಇಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕ, ಜಾಗತಿಕ ಹಸಿವು ಸೂಚ್ಯಂಕ, ನಿರುದ್ಯೋಗ ಸೂಚ್ಯಂಕ, ಆರೋಗ್ಯ, ಸ್ವಚ್ಛತೆ, ಆಯುಷ್ಯ, ಸಂತುಷ್ಟ ದೇಶಗಳ ಸೂಚ್ಯಂಕ ಇವೆಲ್ಲವುಗಳಲ್ಲಿ ಎಲ್ಲಿದ್ದೇವೆ ಎಂಬುದು ಮುಖ್ಯ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಿತಿ ಬಹಳ ಕೆಟ್ಟದಾಗಿದೆ. ಜಿಡಿಪಿ ಒಂದೇ ಅಭಿವೃದ್ಧಿ ಮಾನದಂಡ ಅಲ್ಲ.
- ಪ್ರಶ್ನೆ: ಈಗ ದೇಶದ ಜಿಡಿಪಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಗರಣಿ ಕೃಷ್ಣಮೂರ್ತಿ: ನಮ್ಮ ದೇಶದ ಅವಲಂಬನೆ ಒಂದು ಕಾಲಕ್ಕೆ ಕೃಷಿ ಮೇಲೆ ಜಾಸ್ತಿ ಇತ್ತು. ಅದೀಗ ಸೇವಾ ವಲಯಕ್ಕೆ ತಿರುಗಿದೆ. ಈ ಬಿಪಿಒ, ಐಟಿ ರಫ್ತು ಇವನ್ನೆಲ್ಲ ಬೆಳವಣಿಗೆ ಅಂದುಕೊಂಡು, ಕೃಷಿಯನ್ನು ನಿರ್ಲಕ್ಷ್ಯ ಮಾಡಿದ್ದೇವೆ. ಭಾರತವು ಕೃಷಿ ಪ್ರಧಾನ ದೇಶವಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಮ್ಯಾನುಫ್ಯಾಕ್ಚರಿಂಗ್ ವಲಯವೂ ದುರ್ಬಲವಾಗಿದೆ. ಇವೆಲ್ಲ ಒಳ್ಳೆ ಸೂಚನೆ ಅಲ್ಲ. ಅಷ್ಟೇ ಅಲ್ಲ, ಜಿಡಿಪಿಯ ಅಳತೆಗೋಲೇ ಸರಿ ಆಗಬೇಕು. ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿಯಿಂದ ಬಸ್ನಲ್ಲಿ ಪ್ರಯಾಣಿಸುವ ತನಕ ಎಲ್ಲದರ ಲೆಕ್ಕವನ್ನೂ ಜಿಡಿಪಿಯ ಲೆಕ್ಕಾಚಾರಕ್ಕೆ ಸೇರಿಸಲಾಗಿದೆ. ಈಗಿನ ಸಂಖ್ಯೆಯನ್ನು ನೋಡಿದರೆ ಇವೆಲ್ಲ ಕೇವಲ ಕಾಗದದ ಮೇಲಿನ ಅಂಕಿಯಷ್ಟೇ ಎನ್ನಬಹುದು.
- ಪ್ರಶ್ನೆ: ಈಗಿನ ಪರಿಸ್ಥಿತಿ ಇಷ್ಟು ಬಿಗಡಾಯಿಸಿದ್ದರ ಮೂಲ ಎಲ್ಲಿದೆ? ಗರಣಿ ಕೃಷ್ಣಮೂರ್ತಿ: ಕೊವಿಡ್-19 ಸನ್ನಿವೇಶದಲ್ಲಿ ಸಪ್ಲೈ ಚೈನ್ (ಪೂರೈಕೆ) ಕಡಿತಗೊಂಡಿತು. ಅದು ಇವತ್ತಿಗೂ ಅದೇ ಪರಿಸ್ಥಿತಿಯಲ್ಲಿ ಇದೆ. ಇನ್ನು ಅದರ ಬೆನ್ನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಬೆಲೆ ಏರಿಕೆ ಆಯಿತು. ರೆಪೋ ದರಗಳ ಏರಿಕೆ ಸಹ ಸೇರಿಕೊಂಡು ಪರಿಸ್ಥಿತಿ ಬಿಗಡಾಯಿಸಲು ಕೊಡುಗೆ ನೀಡಿದವು.
- ಪ್ರಶ್ನೆ: ಈ ಸಮಯದಲ್ಲಿ ಜನ ಸಾಮಾನ್ಯರು ಹಣದ ವಿಚಾರವನ್ನು ಹೇಗೆ ನಿಭಾಯಿಸಬೇಕು? ಗರಣಿ ಕೃಷ್ಣಮೂರ್ತಿ: ಖರ್ಚನ್ನು ಮಾಡುವಾಗ ಬಹಳ ಅಳೆದು- ತೂಗಿ ಮಾಡಬೇಕು. ಇದರ ಜತೆಗೆ ಏನು ಅಗತ್ಯ ಅಥವಾ ಏನು ಅಗತ್ಯ ಅಲ್ಲ ಎಂಬುದೊಂದು ಪಟ್ಟಿ ಮಾಡಿಕೊಂಡು, ಅಗತ್ಯವಾದದ್ದಕ್ಕೆ ಮಾತ್ರ ವೆಚ್ಚ ಮಾಡಬೇಕು. ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚೆಚ್ಚು ಬಳಸುವುದಕ್ಕೆ ಆರಂಭಿದರೆ ಆಗುವ ಪರಿಣಾಮ ವಿವರಿಸಿದರೆ ಅದೇ ದೊಡ್ಡ ಲೇಖನ ಆಗುತ್ತದೆ. ಒಬ್ಬೊಬ್ಬರೇ ಒಂದು ಕಾರಿನಲ್ಲಿ ಹೋಗುವುದನ್ನು ನೋಡಿದಾಗ, ಹತ್ತಿರದ ಸ್ಥಳಗಳಿಗೂ ಟೂ ವ್ಹೀಲರ್ ತೆಗೆದುಕೊಂಡು ಹೋಗುವುದನ್ನು ನೋಡಿದರೆ ಇವರಿಗೆ ಹೇಗೆ ತಿಳಿಸಿ ಹೇಳುವುದು ಅನ್ನಿಸುತ್ತದೆ. ನಮ್ಮ ದೇಶಕ್ಕೆ ಬರುವ ಇಂಧನಕ್ಕೆ ಎಷ್ಟು ಬೆಲೆ ತೆರುತ್ತಿದ್ದೇವೆ ಅಂತ ಯೋಚಿಸಿದರೂ ಬದಲಾವಣೆ ಮಾಡಿಕೊಳ್ಳಲು ಆರಂಭಿಸುತ್ತೇವೆ.
- ಪ್ರಶ್ನೆ: ಇನ್ನು ಉಳಿತಾಯ ಮಾಡುವುದಾದರೆ ಎಲ್ಲಿ, ಹೇಗೆ? ಗರಣಿ ಕೃಷ್ಣಮೂರ್ತಿ: ಇಂಥ ಸನ್ನಿವೇಶದಲ್ಲಿ ಉಳಿತಾಯ ಮಾಡುವುದು ಸಹ ಅಪಾಯ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಅದರಿಂದಲೂ ಹಣದುಬ್ಬರ ಹೆಚ್ಚುತ್ತದೆ. ಆದ್ದರಿಂದ ಪೂರೈಕೆ ಮತ್ತು ಬೇಡಿಕೆ ಸರಿಯಾಗಿ ನಿರ್ವಹಣೆ ಆಗಬೇಕು.
- ಪ್ರಶ್ನೆ: ಭಾರತವು ಆರ್ಥಿಕ ಮುಗ್ಗಟ್ಟಿನತ್ತ ಸಾಗುತ್ತಿದೆಯೇ? ಗರಣಿ ಕೃಷ್ಣಮೂರ್ತಿ: ಸದ್ಯಕ್ಕೆ ನಾವು ಆರ್ಥಿಕ ಹಿಂಜರಿತದಲ್ಲಿದ್ದೇವೆ, ಇದು ಆರ್ಥಿಕ ಮುಗ್ಗಟ್ಟು (Great Depression) ಆದರೂ ಅಚ್ಚರಿಯಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Indian Economy: ಭಾರತದ ಆರ್ಥಿಕತೆ ಮರಳಿ ಹಳಿಗೆ ಬರುತ್ತಿದೆ ಎನ್ನುತ್ತಿವೆ ಈ ಅಂಕಿ- ಅಂಶಗಳು
Published On - 7:17 pm, Wed, 1 June 22