ನವದೆಹಲಿ, ಡಿಸೆಂಬರ್ 25: ಮನರಂಜನಾ ಲೋಕದಲ್ಲೊಂದು ಹೊಸ ದೈತ್ಯನ ಉದಯಕ್ಕೆ ಎಡೆ ಮಾಡಿಕೊಡುವ ಬೆಳವಣಿಗೆ ಇದು. ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ವಾಲ್ಟ್ ಡಿಸ್ನಿ ಸಂಸ್ಥೆಗಳ ಭಾರತೀಯ ಮಾಧ್ಯಮ ಕಾರ್ಯಾಚರಣೆಗಳು ವಿಲೀನಗೊಳ್ಳುತ್ತಿವೆ. ಈ ಸಂಬಂಧ ಎರಡೂ ಸಂಸ್ಥೆಗಳು ನಾನ್ ಬೈಂಡಿಂಗ್ ಟರ್ಮ್ ಶೀಟ್ಗೆ ಸಹಿ ಹಾಕಿವೆ (Reliance Industries and Walt Disney Sign Non Binding Agreement) ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಆದರೆ, ಎರಡೂ ಸಂಸ್ಥೆಗಳಿಂದ ಇನ್ನೂ ಕೂಡ ಅಧಿಕೃತ ಹೇಳಿಕೆ ಬಂದಿಲ್ಲ.
ನಾನ್ ಬೈಂಡಿಂಗ್ ಟರ್ಮ್ಶೀಟ್ ಎಂಬುದು ಹೊಸ ಹೂಡಿಕೆದಾರರ ಮೂಲಭೂತ ಅಂಶಗಳಿರುವ ಒಂದು ಚೌಕಟ್ಟು. ಕಾನೂನಿಗೆ ಒಳಪಡುವ ಈ ಚೌಕಟ್ಟು ಆಧಾರದ ಮೇಲೆ ಮುಂದಿನ ಒಪ್ಪಂದಗಳು ರೂಪುಗೊಳ್ಳುತ್ತವೆ. ವರದಿ ಪ್ರಕಾರ ರಿಲಾಯನ್ಸ್ ಇಂಡಸ್ಟ್ರೀಸ್ ಮಾಲಕತ್ವದ ವಯಾಕಾಮ್19 ಸಂಸ್ಥೆಯ ಅಡಿಯಲ್ಲಿ ಒಂದು ಉಪಸಂಸ್ಥೆ ಸ್ಥಾಪನೆ ಆಗಲಿದ್ದು, ಆರ್ಐಎಲ್ ಮತ್ತು ವಾಲ್ಟ್ ಡಿಸ್ನಿಯ ಎಲ್ಲಾ ಭಾರತೀಯ ಮಾಧ್ಯಮ ಚಟುವಟಿಕೆಗಳು ಅದರ ವ್ಯಾಪ್ತಿಗೆ ಬರಲಿವೆ. ವಿಲೀನದ ಬಳಿಕ ಸೃಷ್ಟಿಯಾಗುವ ಈ ಹೊಸ ಸಂಸ್ಥೆಯಲ್ಲಿ ರಿಲಾಯನ್ಸ್ ಶೇ. 51 ಹಾಗು ಡಿಸ್ನಿ ಶೇ. 49ರಷ್ಟು ಪಾಲು ಹೊಂದಿರಲಿವೆ. ಜಿಯೋ ಸಿನಿಮಾ ಕೂಡ ಈ ವಿಲೀನದ ಭಾಗವಾಗಿರುತ್ತದೆ.
ಇದನ್ನೂ ಓದಿ: ಯುಎಇ ತೈಲ ಖರೀದಿಗೆ ಭಾರತದಿಂದ ರುಪಾಯಿ ಕರೆನ್ಸಿಯಲ್ಲೇ ಹಣ ಪಾವತಿ; ಇದು ಆರಂಭಿಕ ಹೆಜ್ಜೆಗಳು ಮಾತ್ರ…
ಕಳೆದ ವಾರ ಬ್ರಿಟನ್ ದೇಶದಲ್ಲಿ ರಿಲಾಯನ್ಸ್ ಮತ್ತು ಡಿಸ್ನಿ ಮಧ್ಯೆ ಟರ್ಮ್ ಶೀಟ್ಗೆ ಸಹಿ ಹಾಕಿರುವುದು ತಿಳಿದುಂದಿದೆ. 2024ರ ಫೆಬ್ರುವರಿ ತಿಂಗಳು ಮುಗಿಯುವುದರೊಳಗೆ ಮನರಂಜನೆ ಮತ್ತು ಮಾಧ್ಯಮ ವಿಲೀನದ ಬಹುಭಾಗವು ಅಂತಿಮಗೊಳ್ಳಬಹುದು. ಜನವರಿಯಲ್ಲೇ ಈ ಒಪ್ಪಂದವನ್ನು ಅಂತಿಮಗೊಳಿಸಬೇಕು ಎಂದು ರಿಲಾಯನ್ಸ್ ಪ್ರಯತ್ನಿಸಿತಾದರೂ ಪ್ರಾಧಿಕಾರಗಳ ಒಪ್ಪಿಗೆ ಸೇರಿದಂತೆ ಹಲವು ಪ್ರಕ್ರಿಯೆಗಳಾಗಲು ಫೆಬ್ರುವರಿ ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಯಾಕಾಮ್18 ಅಡಿಯಲ್ಲಿ ಸ್ಥಾಪನೆಯಾಗುವ ಹೊಸ ಸಂಸ್ಥೆಯು ಭಾರತದ ಕಿರುತೆರೆ ಲೋಕದ ದೈತ್ಯ ಎನಿಸಲಿದೆ. ಝೀ ಎಂಟರ್ಟೈನ್ಮೆಂಟ್ ಮತ್ತು ಸೋನಿಗೆ ಪ್ರಬಲ ಸ್ಪರ್ಧೆ ಒಡ್ಡಲಿದೆ. ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್ನಂತಹ ಪ್ರಬಲ ಒಟಿಟಿ ಪ್ಲಾಟ್ಫಾರ್ಮ್ಗಳಿಗೂ ಪ್ರಬಲ ಪೈಪೋಟಿ ಒಡ್ಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ