ವಿಶ್ವದ ಅತಿದೊಡ್ಡ ಡಾಟಾಸೆಂಟರ್ಗಿಂತ ಮೂರು ಪಟ್ಟು ದೊಡ್ಡದು ರಿಲಾಯನ್ಸ್ನಿಂದ ನಿರ್ಮಾಣ; ಇಲ್ಲಿದೆ ಪಟ್ಟಿ
Mukesh Ambani building world's largest data center: ಗುಜರಾತ್ನ ಜಾಮ್ನಗರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನಿಂದ ವಿಶ್ವದ ಅತಿದೊಡ್ಡ ಡಾಟಾ ಸೆಂಟರ್ ನಿರ್ಮಾಣವಾಗುತ್ತಿದೆ. ಒಂದು ಗೀಗಾವ್ಯಾಟ್ ವಿದ್ಯುತ್ ಅಗತ್ಯದ ವಿಶ್ವದ ಮೊದಲ ಡಾಟಾ ಸೆಂಟರ್ ಇದಾಗಿದೆ. ಇದನ್ನು 3 ಗಿಗಾವ್ಯಾಟ್ಗೆ ಹೆಚ್ಚಿಸುವ ಅವಕಾಶ ಇದೆ. ಮಹಾರಾಷ್ಟ್ರದ ಪನ್ವೇಲ್ನಲ್ಲಿರುವ ಯೋಟ್ಟಾ ಎನ್ಎಂ1 ಸದ್ಯ ಭಾರತದ ಅತಿದೊಡ್ಡ ಡಾಟಾ ಸೆಂಟರ್ ಆಗಿದೆ. ಎಐ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ಲೌಡ್ ಸರ್ವಿಸ್ಗಳಿಗೆ ಡಾಟಾ ಸೆಂಟರ್ಗಳು ಬಹಳ ಅಗತ್ಯ ಇವೆ.
ನವದೆಹಲಿ, ಜನವರಿ 24: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಗುಜರಾತ್ನ ಜಾಮ್ನಗರ್ನಲ್ಲಿ ಬೃಹತ್ ಡಾಟಾ ಸೆಂಟರ್ ನಿರ್ಮಿಸುತ್ತಿದೆ ಎಂದು ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅಕ್ಟೋಬರ್ ತಿಂಗಳಲ್ಲೇ ಮುಕೇಶ್ ಅಂಬಾನಿ ಅವರು ನಿವಿಡಿಯಾ ಸಹಭಾಗಿತ್ವದಲ್ಲಿ ಭಾರತದಲ್ಲಿ ಡಾಟಾ ಸೆಂಟರ್ ತಯಾರಿಸುವುದಾಗಿ ಘೋಷಿಸಿದ್ದರು. ಒಂದು ಗೀಗಾ ವ್ಯಾಟ್ಗಿಂತಲೂ ಹೆಚ್ಚು ಸಾಮರ್ಥ್ಯದ ಡಾಟಾ ಸೆಂಟರ್ ಇದಾಗಿದ್ದು, ವಿಶ್ವದ ಅತಿದೊಡ್ಡ ಡಾಟಾ ಸೆಂಟರ್ ಎನಿಸಿಕೊಳ್ಳಲಿದೆ.
ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿಗೆ ಸಹಾಯಕವಾಗುವ ಇನ್ಫ್ರಾಸ್ಟ್ರಕ್ಚರ್ಗಳಲ್ಲಿ ಡಾಟಾ ಸೆಂಟರ್ಗಳು ಪ್ರಮುಖವಾದುದು. ಭಾರತದಲ್ಲೇ ಇರುವ ಬೃಹತ್ ದತ್ತಾಂಶಗಳ ಸಂಸ್ಕರಣೆಗಳಿಂದ ಹಿಡಿದು ಹಲವು ಎಐ ಕಾರ್ಯಗಳಿಗೆ ಈ ಡಾಟಾ ಸೆಂಟರ್ಗಳ ಅವಶ್ಯಕತೆ ಇರುತ್ತದೆ. ಹೀಗಾಗಿ, ಜಾಮ್ನಗರ್ನಲ್ಲಿ ನಿರ್ಮಾಣವಾಗುತ್ತಿರುವ ಡಾಟಾ ಸೆಂಟರ್ ಬಹಳ ಮಹತ್ವದ್ದಾಗಿದೆ.
ಇದನ್ನೂ ಓದಿ: ಹೊಸದಾಗಿ ಹೊಟೇಲ್ ಆರಂಭಿಸಲು ಹೊರಟಿದ್ದೀರೇ, ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ
2024ರ ಅಕ್ಟೋಬರ್ನಲ್ಲಿ ನಡೆದ ನಿವಿಡಿಯಾ ಎಐ ಸಮಿಟ್ ಕಾರ್ಯಕ್ರಮದಲ್ಲಿ ಈ ಡಾಟಾ ಸೆಂಟರ್ ನಿರ್ಮಾಣದ ಯೋಜನೆಯನ್ನು ಘೋಷಿಸಲಾಗಿತ್ತು. ‘ಜಾಮ್ನಗರದಲ್ಲಿ ಮೂಲಸೌಕರ್ಯವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಸಿದ್ಧರಿದ್ದೇವೆ. ಒಂದು ಗಿಗಾವ್ಯಾಟ್ನ ಸೌಕರ್ಯ ನಿರ್ಮಿಸುತ್ತಿದ್ದೇವೆ. ಒಂದೇ ಸ್ಥಳದಲ್ಲಿ ಇದನ್ನು ಹಲವು ಗಿಗಾವ್ಯಾಟ್ಗಳಿಗೆ ವಿಸ್ತರಿಸುವ ಸಾಮರ್ಥ್ಯ ಇದೆ. ನಮ್ಮಲ್ಲಿ ಹಸಿರು ಇಂಧನ ಸಿದ್ಧ ಇದೆ’ ಎಂದು ನಿವಿಡಿಡಾ ಸಿಇಒ ಜೆನ್ಸೆನ್ ಹುವಾಂಗ್ ಅವರೊಂದಿಗೆ ಮಾತನಾಡುತ್ತಾ ಮುಕೇಶ್ ಅಂಬಾನಿ ತಿಳಿಸಿದ್ದರು.
ರಿಲಾಯನ್ಸ್ ಇಂಡಸ್ಟ್ರೀಸ್ ಗುಜರಾತ್ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌರಶಕ್ತಿ ಉತ್ಪಾದನೆಯ ಘಟಕಗಳನ್ನು ನಿರ್ಮಿಸಿದ್ದಾರೆ. ಡಾಟಾ ಸೆಂಟರ್ಗಳಿಗೆ ವಿದ್ಯುತ್ ಪೂರೈಕೆ ಬಹಳ ಮುಖ್ಯ. ರಿಲಾಯನ್ಸ್ನ ರಿನಿವಬಲ್ ಎನರ್ಜಿ ಉತ್ಪಾದನೆ ಈ ಡಾಟಾ ಸೆಂಟರ್ನ ಅಗತ್ಯಗಳನ್ನು ಪೂರೈಸಬಲ್ಲುದು. ಒಂದು ಮಾಹಿತಿ ಪ್ರಕಾರ, ಜಾಮ್ನಗರದಲ್ಲಿ ಸದ್ಯ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಡಾಟಾ ಸೆಂಟರ್ ನಿರ್ಮಾಣವಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ 3 ಗಿಗಾ ವ್ಯಾಟ್ಗೆ ಹೆಚ್ಚಿಸುವ ಸಾಧ್ಯತೆ ಇದೆ. ಒಂದು ಗಿಗಾವ್ಯಾಟ್ನ ಡಾಟಾ ಸೆಂಟರ್ ವಿಶ್ವದ ಬೇರೆಲ್ಲೂ ಇಲ್ಲ. ಹೀಗಾಗಿ, ರಿಲಾಯನ್ಸ್ ಹಾಗೂ ಭಾರತ ಹೊಸ ದಾಖಲೆ ಮತ್ತು ಮೈಲಿಗಲ್ಲು ಸೃಷ್ಟಿಸಿವೆ.
ಸದ್ಯ ಇರುವ ವಿಶ್ವದ ಅತಿದೊಡ್ಡ ಡಾಟಾ ಸೆಂಟರ್ಗಳಿವು…
ಡಾಟಾ ಸೆಂಟರ್ಗಳ ವಿಚಾರಕ್ಕೆ ಬಂದರೆ ಚೀನಾ ಮತ್ತು ಅಮೆರಿಕ ದೇಶಗಳದ್ದೇ ಕಾರುಬಾರು. ಚೀನಾದ ಇನ್ನರ್ ಮೊಂಗೋಲಿಯಾದ ಹೋಹಾಟ್ ಎಂಬಲ್ಲಿ ಚೀನಾ ಟೆಲಿಕಾಂ ನಿರ್ಮಿಸಿರುವ ಡಾಟಾ ಸೆಂಟರ್ 700 ಮೆಗಾವ್ಯಾಟ್ಗೂ ಅಧಿಕ ವಿದ್ಯುತ್ ಬಳಸುತ್ತದೆ. ಇದು ಸದ್ಯ ವಿಶ್ವದ ಅತಿದೊಡ್ಡ ಡಾಟಾ ಸೆಂಟರ್ ಎನಿಸಿದೆ. ಭಾರತದ ಮಹಾರಾಷ್ಟ್ರದಲ್ಲಿ ಇರುವ ಯೋಟ್ಟಾ ಎನ್ಎಂ1 ಎನ್ನುವ ಡಾಟಾ ಸೆಂಟರ್ ಮೂರನೇ ಸ್ಥಾನ ಪಡೆದಿದೆ. ಭಾರತದ ಡಾಟಾ ಸೆಂಟರ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿರುವ ಸುನೀಲ್ ಗುಪ್ತಾ ಎಂಬುವವರು ಸ್ಥಾಪಿಸಿದ ಡಾಟಾ ಸೆಂಟರ್ ಇದು.
ಇದನ್ನೂ ಓದಿ: ಅಮೆರಿಕದ ಸ್ಟಾರ್ಗೇಟ್: ಟ್ರೋಲ್ ಮಾಡಿದ ಮಸ್ಕ್; ತಿರುಗೇಟು ನೀಡಿದ ಆಲ್ಟ್ಮ್ಯಾನ್; ಏನಿದು ಎಐ ಪ್ರಾಜೆಕ್ಟ್? ಇಲ್ಲಿದೆ ಡೀಟೇಲ್ಸ್
ವಿಶ್ವದ ಟಾಪ್-10 ಡಾಟಾ ಸೆಂಟರ್ಗಳಲ್ಲಿ ಅಮೆರಿಕ ಮತ್ತು ಚೀನಾ ತಲಾ ನಾಲ್ಕನ್ನು ಹೊಂದಿವೆ. ಭಾರತ ಮತ್ತು ನಾರ್ವೆಯಲ್ಲಿ ತಲಾ ಒಂದೊಂದು ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ