AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಸ್ಟಾರ್​ಗೇಟ್: ಟ್ರೋಲ್ ಮಾಡಿದ ಮಸ್ಕ್; ತಿರುಗೇಟು ನೀಡಿದ ಆಲ್ಟ್​ಮ್ಯಾನ್; ಏನಿದು ಎಐ ಪ್ರಾಜೆಕ್ಟ್? ಇಲ್ಲಿದೆ ಡೀಟೇಲ್ಸ್

Elon Musk vs Sam Altman on Stargate Project: ಅಮೆರಿಕದಲ್ಲಿ ವಿಶ್ವದ ಅತಿದೊಡ್ಡ ಎಐ ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಎನ್ನಲಾದ ಸ್ಟಾರ್​​ಗೇಟ್ ಅನ್ನು ಘೋಷಿಸಲಾಗಿದೆ. ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಸುದ್ದಿಗೋಷ್ಠಿಯಲ್ಲಿ ಇದನ್ನು ಘೋಷಿಸಿದ್ದಾರೆ. ಟ್ರಂಪ್ ಆಪ್ತರಾದ ಇಲಾನ್ ಮಸ್ಕ್ ಅವರು ಈ ಸ್ಟಾರ್​ಗೇಟ್ ಪ್ರಾಜೆಕ್ಟ್ ಅನ್ನು ಟ್ರೋಲ್ ಮಾಡಿದ್ದಾರೆ. ಓಪನ್​ಎಐ ಮೊದಲಾದ ಹಲವು ಪ್ರಮುಖ ಕಂಪನಿಗಳು ಜೊತೆಗೂಡಿ ನಡೆಸುತ್ತಿರುವ ಈ ಸ್ಟಾರ್​ಗೇಟ್​ಗೆ ವಿವಾದ ಸುತ್ತಿಕೊಳ್ಳುತ್ತಿರುವುದು ಯಾಕೆ?

ಅಮೆರಿಕದ ಸ್ಟಾರ್​ಗೇಟ್: ಟ್ರೋಲ್ ಮಾಡಿದ ಮಸ್ಕ್; ತಿರುಗೇಟು ನೀಡಿದ ಆಲ್ಟ್​ಮ್ಯಾನ್; ಏನಿದು ಎಐ ಪ್ರಾಜೆಕ್ಟ್? ಇಲ್ಲಿದೆ ಡೀಟೇಲ್ಸ್
ಸ್ಟಾರ್​ಗೇಟ್ ಪ್ರಾಜೆಕ್ಟ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2025 | 6:49 PM

Share

ಬೆಂಗಳೂರು, ಜನವರಿ 23: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ವೈಟ್​ಹೌಸ್​ನಲ್ಲಿ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್, ಒರೇಕಲ್ ಸಿಇಒ ಲ್ಯಾರಿ ಎಲಿಸನ್, ಸಾಫ್ಟ್​ಬ್ಯಾಂಕ್ ಸಿಇಒ ಮಸಯೋಶಿ ಸೋನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡತ್ತಾ, ಸ್ಟಾರ್​ಗೇಟ್ ಪ್ರಾಜೆಕ್ಟ್ ಅನ್ನು ಘೋಷಿಸಿದರು. ಇದು ವಿಶ್ವದಲ್ಲೇ ಅತಿದೊಡ್ಡ ಎಐ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಎಂದು ಬಣ್ಣಿಸಿದರು. ಈಗ ಈ ಸ್ಟಾರ್​ಗೇಟ್ ಪ್ರಾಜೆಕ್ಟ್ ದೊಡ್ಡ ಚರ್ಚೆಯ ವಸ್ತುವಾಗಿದೆ. ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿಗಳಲ್ಲಿ ಒಬ್ಬರೆಂದು ಗುರುತಾಗಿರುವ ಇಲಾನ್ ಮಸ್ಕ್ ಅವರು ಈ ಪ್ರಾಜೆಕ್ಟ್ ಅನ್ನು ಟ್ರೋಲ್ ಮಾಡಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಸ್ಟಾರ್​ಗೇಟ್ ಪ್ರಾಜೆಕ್ಟ್?

ಏನಿದು ಸ್ಟಾರ್​ಗೇಟ್ ಪ್ರಾಜೆಕ್ಟ್?

ಸ್ಟಾರ್​ಗೇಟ್ ಪ್ರಾಜೆಕ್ಟ್ ಎನ್ನುವುದು ಹೊಸದಾಗಿ ನಿರ್ಮಿಸಲಾಗಿರುವ ಒಂದು ಕಂಪನಿಯ ಹೆಸರು. ಓಪನ್​ಎಐ, ಸಾಫ್ಟ್​ಬ್ಯಾಂಕ್, ಒರೇಕಲ್ ಇತ್ಯಾದಿ ಸಂಸ್ಥೆಗಳು ಜಂಟಿಯಾಗಿ ಕಟ್ಟಿರುವ ಕಂಪನಿ. ಅಮೆರಿಕದಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯ ಇರುವ ಮೂಲಸೌಕರ್ಯಗಳನ್ನು, ಅಂದರೆ ಇನ್​ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಲು ದೊಡ್ಡ ಯೋಜನೆ ಹಮ್ಮಿಕೊಳ್ಳಲಾಗಿದೆ.

ಆರ್ಮ್ ಹೋಲ್ಡಿಂಗ್ಸ್, ಒರೇಕಲ್, ಮೈಕ್ರೋಸಾಫ್ಟ್, ನಿವಿಡಿಯಾ ಮೊದಲಾದ ಕಂಪನಿಗಳು ಈ ಪ್ರಾಜೆಕ್ಟ್​ಗೆ ಟೆಕ್ನಿಕಲ್ ನೆರವು ನೀಡುತ್ತವೆ. ಸಾಫ್ಟ್​ಬ್ಯಾಂಕ್, ಎಂಜಿಎಕ್ಸ್ ಮೊದಲಾದ ಕಂಪನಿಗಳು ಹಣಕಾಸು ನೆರವು ಒದಗಿಸುತ್ತಿವೆ. ಆರಂಭದಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. 2029ರೊಳಗೆ 500 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಲಾಗುವುದು. ಈ ಬೃಹತ್ ಎಐ ಪ್ರಾಜೆಕ್ಟ್​ನಿಂದ ತತ್​ಕ್ಷಣಕ್ಕೆ ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚೆಕ್ ಮೇಲೆ ಕಪ್ಪು ಇಂಕ್​ನಲ್ಲಿ ಸಹಿ ಮಾಡಬಾರದಾ? ಆರ್​ಬಿಐ ಮಾರ್ಗಸೂಚಿ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ

ಸಾಫ್ಟ್​ಬ್ಯಾಂಕ್​ನ ಸಿಇಒ ಮಸಯೋಶಿ ಸೋನ್ ಅವರು ಸ್ಟಾರ್​​ಗೇಟ್ ಪ್ರಾಜೆಕ್ಟ್​ನ ಛೇರ್ಮನ್ ಆಗಲಿದ್ದಾರೆ ಎನ್ನುವ ಮಾತಿದೆ.

ಎಐ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಅಂದರೆ ಏನು?

ಉದ್ದಿಮೆಗಳ ಬೆಳವಣಿಗೆಗೆ ಅಗತ್ಯ ಆಗಿರುವ ಮೂಲಸೌಕರ್ಯಗಳೆಂದರೆ ಅದು ರಸ್ತೆ, ಸಾರಿಗೆ, ವಿದ್ಯುತ್, ನೀರು ಇತ್ಯಾದಿ ಇರುತ್ತವೆ. ಹಾಗೆಯೇ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮೂಲಸೌಕರ್ಯ ಎಂದರೆ ಡಾಟಾ ಸೆಂಟರ್​ಗಳು, ವಿದ್ಯುತ್ ಇತ್ಯಾದಿ. ಸ್ಟಾರ್​ಗೇಟ್ ಪ್ರಾಜೆಕ್ಟ್ ವತಿಯಿಂದ ಈಗಾಗಲೇ ವಿವಿಧೆಡೆ ಡಾಟಾ ಸೆಂಟರ್​ಗಳ ನಿರ್ಮಾಣ ಕಾರ್ಯ ಚಾಲನೆಯಲ್ಲಿದೆ ಎನ್ನುವ ಸುದ್ದಿ ಇದೆ. ಡಾಟಾ ಸೆಂಟರ್​ಗಳ ನಿರ್ವಹಣೆಗೆ ಸಾಕಷ್ಟು ವಿದ್ಯುತ್ ವೆಚ್ಚವಾಗುತ್ತದೆ. ಸಾಕಷ್ಟು ಪವರ್ ಪ್ರಾಜೆಕ್ಟ್​ಗಳ ಅವಶ್ಯಕತೆ ಇದೆ. ಈ ವಿದ್ಯುತ್ ಉತ್ಪಾದನೆಯ ಕಾರ್ಯವೂ ಕೂಡ ಸ್ಟಾರ್​ಗೇಟ್ ಪ್ರಾಜೆಕ್ಟ್​ನ ವ್ಯಾಪ್ತಿಗೆ ಬರುತ್ತದೆ.

ಇಲಾನ್ ಮಸ್ಕ್ ಲೇವಡಿ ಮಾಡುತ್ತಿರುವುದು ಯಾಕೆ?

ಸ್ಟಾರ್​ಗೇಟ್ ಪ್ರಾಜೆಕ್ಟ್​ಗೆ 500 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಲಾಗುತ್ತದೆ ಎಂದು ಘೋಷಿಸಿರುವುದು ಇಲಾನ್ ಮಸ್ಕ್ ಅವರಿಂದ ಲೇವಡಿಗೆ ಕಾರಣವಾಗಿದೆ. 500 ಬಿಲಿಯನ್ ಡಾಲರ್ ಎಂದರೆ 40 ಲಕ್ಷ ಕೋಟಿ ರೂಗೂ ಅಧಿಕವಾದುದು. ಇಷ್ಟು ದೊಡ್ಡ ಮೊತ್ತದ ಹಣ ಇವರ ಬಳಿ ಇಲ್ಲ. ಸಾಫ್ಟ್​ಬ್ಯಾಂಕ್ ಬಳಿ ಇರುವ ಬಂಡವಾಳ 10 ಬಿಲಿಯನ್ ಡಾಲರ್ ಮಾತ್ರವೇ ಎಂದು ಇಲಾನ್ ಮಸ್ಕ್ ನೇರಾನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಜಿನೋಮ್ ಡಾಟಾಬೇಸ್, ಐಬಿಡಿಸಿ ಪೋರ್ಟಲ್ ಆರಂಭ; ಬಯೋಟೆಕ್ ಸೂಪರ್​ಪವರ್ ದೇಶವಾಗುವತ್ತ ಭಾರತದ ಹೆಜ್ಜೆ

ಸ್ಟಾರ್​ಗೇಟ್ ಪ್ರಾಜೆಕ್ಟ್​ನ ಸೂತ್ರದಾರರಾದ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ತಿರುಗೇಟು ನೀಡಿದ್ದಾರೆ. ಇಲಾನ್ ಮಸ್ಕ್ ಅವರ ಕಂಪನಗಳು ಈ ಪ್ರಾಜೆಕ್ಟ್​ನ ಭಾಗವಾಗಿಲ್ಲ ಎಂಬುದು ಅವರ ಕೋಪಕ್ಕೆ ಕಾರಣ ಇರಬಹುದು. ದೇಶಕ್ಕೆ ಈ ಪ್ರಾಜೆಕ್ಟ್ ಬಹಳ ಒಳ್ಳೆಯದು. ಒಂದು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದರೆ ಅದು ನಿಮ್ಮ ಕಂಪನಿಗಳಿಗೂ ಒಳ್ಳೆಯದಾಗುತ್ತದೆ ಎಂದಲ್ಲ. ನಿಮ್ಮ ಹೊಸ ಜವಾಬ್ದಾರಿಯಲ್ಲಿ ನಿಮಗೆ ಅಮೆರಿಕವೇ ಮೊದಲ ಆದ್ಯತೆಯಾಗಿರುತ್ತದೆ ಎಂದು ಭಾವಿಸುತ್ತೇನೆ ಎಂದು ಸ್ಯಾಮ್ ಆಲ್ಟ್​​ಮ್ಯಾನ್ ಪ್ರತಿಕ್ರಿಯಿಸಿದ್ದಾರೆ.

ಸ್ಯಾಮ್ ಆಲ್ಟ್​ಮ್ಯಾನ್ ಹಾಗೂ ಓಪನ್​ಎಐ ಬಗ್ಗೆ ಇಲಾನ್ ಮಸ್ಕ್ ಇತ್ತೀಚೆಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಈಗ ಸ್ಟಾರ್​ಗೇಟ್ ಪ್ರಾಜೆಕ್ಟ್ ಅನ್ನೇ ಮಸ್ಕ್ ಅವರು ಟ್ರೋಲ್ ಮಾಡತೊಡಗಿದ್ದಾರೆ. ಪ್ರಚಾರಕ್ಕೋಸ್ಕರ ಮಾತ್ರ ಈ ಪ್ರಾಜೆಕ್ಟ್ ಘೋಷಿಸಲಾಗಿದೆ. ಇದರಿಂದ ಏನೂ ಆಗಲ್ಲ. ಎಲ್ಲರೂ ಕೂಡ ಈಗ 1 ಟ್ರಿಲಿಯನ್ ಡಾಲರ್ ಎಐ ಪ್ರಾಜೆಕ್ಟ್​ಗಳನ್ನು ಘೋಷಿಸಿ ಪತ್ರಿಕಾಗೋಷ್ಠಿ ನೀಡಬಹುದು ಎಂದು ಇಲಾನ್ ಮಸ್ಕ್ ಲೇವಡಿ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ನಿಗೂಢ ಪ್ರತಿಕ್ರಿಯೆ…

ಈ ಮಧ್ಯೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ಸ್ಟಾರ್​ಗೇಟ್ ಪ್ರಾಜೆಕ್ಟ್ ಬಗ್ಗೆ ನಿಗೂಢವಾಗಿ ಮಾತನಾಡಿದ್ದಾರೆ. ‘ನನ್ನ 80 ಬಿಲಿಯನ್ ಡಾಲರ್​ಗೆ ನಾನು ಖಾತ್ರಿ ಇದ್ದೇನೆ. ಈ ಹಣವನ್ನು ಎಐ ಪ್ರಚಾರಕ್ಕೆ ಅಲ್ಲ, ನೈಜ ಜಗತ್ತಿಗೆ ಉಪಯೋಗವಾಗುವುದಕ್ಕೆ ಬಳಸಲಾಗುತ್ತದೆ,’ ಎಂದು ನಗುವಿನ ಇಮೋಜಿಯೊಂದಿಗೆ ಸತ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಹೊಸ ಟ್ರಂಪ್ ಮೀಮ್ ಕಾಯಿನ್, ಪತ್ನಿಯ ಹೊಸ ಕ್ರಿಪ್ಟೋಕಾಯಿನ್; ಏನಿದು ಮೀಮ್ ಕಾಯಿನ್?

ಸತ್ಯ ನಾದೆಲ್ಲಾ ಅವರ ಕಾಮೆಂಟ್​ಗೆ ಪ್ರತಿಕ್ರಿಯಿಸಿರುವ ಇಲಾನ್ ಮಸ್ಕ್, ‘ಸತ್ಯ ಬಳಿ ಅಷ್ಟು ದುಡ್ಡಿದೆ ಬಿಡಿ’ ಎಂದಿದ್ದಾರೆ. ಕುತೂಹಲ ಎಂದರೆ, ಸ್ಯಾಮ್ ಆಲ್ಟ್​ಮ್ಯಾನ್ ಅವರ ಓಪನ್​ಎಐಗೆ ಬಂಡವಾಳ ಹಾಕಿರುವುದು ಮೈಕ್ರೋಸಾಫ್ಟ್ ಸಂಸ್ಥೆಯೇ. ಸ್ಟಾರ್​ಗೇಟ್ ಪ್ರಾಜೆಕ್ಟ್​ನ ಟೆಕ್ನಿಕಲ್ ಪಾರ್ಟ್ನರ್​ಗಳಲ್ಲಿ ಮೈಕ್ರೋಸಾಫ್ಟ್ ಇದೆ. ಜಾಗತಿಕ ಎಐ ರೇಸ್​ನಲ್ಲಿ ಅಮೆರಿಕಕ್ಕೆ ಅನುಕೂಲ ತರುತ್ತದೆ ಎಂದು ಹೇಳಲಾದ ಈ ಪ್ರಾಜೆಕ್ಟ್ ಇಷ್ಟೊಂದು ವಿವಾದಕ್ಕೆ ಒಳಗಾಗುತ್ತಿರುವುದು ಕುತೂಹಲ ಮೂಡಿಸುವ ವಿಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ