ಸಂಚಲನ ಸೃಷ್ಟಿಸಿದ ಹೊಸ ಟ್ರಂಪ್ ಮೀಮ್ ಕಾಯಿನ್, ಪತ್ನಿಯ ಹೊಸ ಕ್ರಿಪ್ಟೋಕಾಯಿನ್; ಏನಿದು ಮೀಮ್ ಕಾಯಿನ್?
$TRUMP crypto meme coins: ಮೂರ್ನಾಲ್ಕು ದಿನಗಳ ಹಿಂದಷ್ಟೇ ಆರಂಭವಾದ $TRUMP ಎನ್ನುವ ಕ್ರಿಪ್ಟೋಕಾಯಿನ್ ಕ್ಷಿಪ್ರವಾಗಿ ಜನಪ್ರಿಯತೆ ಪಡೆದಿದೆ. ಎರಡೇ ದಿನದಲ್ಲಿ ಅದು ವಿಶ್ವದ ಟಾಪ್ 20 ಕ್ರಿಪ್ಟೋಕಾಯಿನ್ಗಳಲ್ಲಿ ಒಂದೆನಿಸುವ ಮಟ್ಟಕ್ಕೆ ಹೋಗಿದೆ. ಇಂಟರ್ನೆಟ್ನಲ್ಲಿ ಟ್ರಂಪ್ ಬಗ್ಗೆ ಹರಡಿದ್ದ ಮೀಮ್ಗಳ ಆಧಾರವಾಗಿ $TRUMP ಕಾಯಿನ್ ಅನ್ನು ಆರಂಭಿಸಲಾಗಿದೆ.
ವಾಷಿಂಗ್ಟನ್, ಜನವರಿ 21: ಕೆಲ ವರ್ಷಗಳ ಹಿಂದಿನವರೆಗೂ ಕ್ರಿಪ್ಟೋ ಜಗತ್ತನ್ನು ಕತ್ತಲಲೋಕ ಎಂಬಂತೆ ಕತ್ತಿ ಮಸೆಯುತ್ತಿದ್ದ ಡೊನಾಲ್ಡ್ ಟ್ರಂಪ್ ಇದೀಗ ಕ್ರಿಪ್ಟೋ ಲೋಕದ ಒಡೆಯರಾಗಹೊರಟಿದ್ದಾರೆ. ಅಮೆರಿಕವನ್ನು ವಿಶ್ವ ಕ್ರಿಪ್ಟೋ ಅಡ್ಡೆಯಾಗಿ ಮಾಡಲು ಪಣತೊಟ್ಟಿದ್ದಾರೆ. ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮೂರು ದಿನಗಳ ಮೊದಲು ಆರಂಭಿಸಿದ $TRUMP ಎನ್ನುವ ಕ್ರಿಪ್ಟೋಕಾಯಿನ್ ಒಮ್ಮೆಗೇ ಸೂಪರ್ಹಿಟ್ ಆಗಿದೆ. ಅದರ ಜೊತೆಜೊತೆಗೆ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮಿಲಾನಿಯಾ ಟ್ರಂಪ್ ಕೂಡ ತಮ್ಮದೇ ಕ್ರಿಪ್ಟೋಕಾಯಿನ್ ಆದ $MELANIA ಅನ್ನೂ ಆರಂಭಿಸಿದ್ದಾರೆ. ಎರಡೂ ಕೂಡ ಕ್ಷಿಪ್ರವೇಗದಲ್ಲಿ ಜನಪ್ರಿಯತೆ ಪಡೆದಿವೆ.
$TRUMP ಎಂಬುದು ಮೀಮ್ ಕಾಯಿನ್ ಎನಿಸಿದೆ. ಶುಕ್ರವಾರ (ಜ. 17) ಅದನ್ನು ಅಧಿಕೃತ ಮೀಮ್ ಕಾಯಿನ್ ಎಂದೇ ಆರಂಭಿಸಲಾಯಿತು. ಆರಂಭಿಕ ಬೆಲೆ 6.50 ಡಾಲರ್ ಇದ್ದ $TRUMP ಕ್ರಿಪ್ಟೋಕಾಯಿನ್ ನೋಡ ನೋಡುತ್ತಿದ್ದಂತೆಯೇ ಭಾನುವಾರ 73 ಡಾಲರ್ಗೆ ಏರಿದೆ. ಸಾವಿರಕ್ಕೂ ಹೆಚ್ಚು ಪ್ರತಿಶತದಷ್ಟು ಬೆಲೆ ಏರಿಕೆ ಕಂಡಿತು. ಕೇವಲ ಎರಡು ದಿನದಲ್ಲಿ ಅದು ಜಗತ್ತಿನ ಅತಿದೊಡ್ಡ 20 ಕ್ರಿಪ್ಟೊಕರೆನ್ಸಿಗಳ ಸಾಲಿಗೆ ಹೋಗಿ ನಿಂತಿತು. ಅದರ ಮಾರುಕಟ್ಟೆ ಬಂಡವಾಳ 14 ಬಿಲಿಯನ್ ಡಾಲರ್ ಗಡಿ ದಾಟಿತ್ತು.
ಇದನ್ನೂ ಓದಿ: ಅಮೆರಿಕಾ ‘ಮಗಾ’ ಮಾಡಲು ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಕ್ರಾಂತಿಕಾರಿ ಕ್ರಮಗಳು…
ಮಿಲಾನಿಯಾ ಟ್ರಂಪ್ ಅವರು ತಮ್ಮದೇ ಕ್ರಿಪ್ಟೋವನ್ನು ಭಾನುವಾರ 7 ಡಾಲರ್ಗೆ ಆರಂಭಿಸಿದರು. ಅದಾದ ಬಳಿಕ $TRUMP ಕಾಯಿನ್ನ ಮೌಲ್ಯ 40 ಡಾಲರ್ಗೆ ಬಂದಿತು.
I am extremely proud of what we continue to accomplish in crypto. $Trump is currently the hottest digital meme on earth and I truly believe that @WorldLibertyFi will revolutionize DeFi/Cefi and will be the future of finance. We are just getting started! 🚀🚀 https://t.co/YzdxoCWrKV
— Eric Trump (@EricTrump) January 18, 2025
$TRUMP ಕಾಯಿನ್ನ ಮಾಲೀಕರು ಯಾರು?
ಇಂಟರ್ನೆಂಟ್ ಮೀಮ್ ಆಧಾರಿತವಾಗಿ ಆರಂಭವಾಗಿರುವ $TRUMP ಕ್ರಿಪ್ಟೋಕಾಯಿನ್ನ ಮಾಲೀಕರು ಟ್ರಂಪ್ ಕುಟುಂಬದವರೇ ಆಗಿದ್ದಾರೆ. ಡೊನಾಲ್ಡ್ ಟ್ರಂಪ್ ಕುಟುಂಬದವರಿಗೆ ಸೇರಿದ ಸಿಐಸಿ ಡಿಜಿಟಲ್ ಎನ್ನುವ ಸಂಸ್ಥೆಯು ಶೇ. 80ರಷ್ಟು $TRUMP ಕಾಯಿನ್ಗಳನ್ನು ಹೊಂದಿದೆ.
ಮೀಮ್ ಕಾಯಿನ್ ಎಂದರೇನು?
$TRUMP ಅನ್ನು ಅಧಿಕೃತ ಮೀಮ್ ಕಾಯಿನ್ (Meme coin) ಎಂದು ಕರೆಯಲಾಗುತ್ತಿದೆ. ಮೀಮ್ ಎಂದರೆ ಒಂದು ವಿಷಯದ ಬಗ್ಗೆ ಅಂತರ್ಜಾಲದಲ್ಲಿ ಹರಡುವ ಭಿನ್ನ ಭಿನ್ನ ರೂಪಗಳಾಗಿರುತ್ತವೆ. ಟ್ರಂಪ್ ಅವರನ್ನು ಆಧರಿಸಿ ಕಳೆದ ಕೆಲ ವರ್ಷಗಳಲ್ಲಿ ಇಂಟರ್ನೆಟ್ನಲ್ಲಿ ಸಾಕಷ್ಟು ಮೀಮ್ಗಳು ಸೃಷ್ಟಿಯಾಗಿದ್ದವು. ಮೇಕ್ ಅಮೆರಿಕ ಗ್ರೇಟ್ ಎಗೇನ್, ಫೈಟ್ ಫೈಟ್ ಫೈಟ್ ಇತ್ಯಾದಿ ಸ್ಲೋಗನ್ಗಳನ್ನು ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರದ ವೇಳೆ ಸಾಕಷ್ಟು ಬಳಸಿ ಜನಪ್ರಿಯಗೊಳಿಸಿದ್ದರು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸಮಾರಂಭ, ಮೊದಲ ಸಾಲಿನಲ್ಲೇ ಕಾಣಿಸಿಕೊಂಡ ಸಚಿವ ಜೈಶಂಕರ್
ತಮ್ಮನ್ನು ಕೊಲ್ಲಲು ಆದ ವಿಫಲ ಯತ್ನದ ಬಳಿಕ ಟ್ರಂಪ್ ಅವರ ಸುತ್ತ ‘ಫೈಟ್ ಫೈಟ್ ಫೈಟ್’ ಎನ್ನುವ ಮೀಮ್ ಜನಪ್ರಿಯವಾಗಿತ್ತು. $TRUMP ಕರೆನ್ಸಿಯಲ್ಲಿ ಇದೇ ಘೋಷವಾಕ್ಯ ಸೇರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ