ಅಮೆರಿಕಾ ‘ಮಗಾ’ ಮಾಡಲು ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಕ್ರಾಂತಿಕಾರಿ ಕ್ರಮಗಳು…
Trump actions to MAGA: ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದು, ಅವರು ಅಧಿಕಾರಕ್ಕೆ ಬಂದ ಕೂಡಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅವರ ಹೆಚ್ಚಿನ ನಿರ್ಧಾರಗಳು ನಿರೀಕ್ಷಿತವೇ ಆಗಿವೆ. ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ತೆಗೆದುಕೊಂಡ ಕೆಲ ಪ್ರಮುಖ ನಿರ್ಧಾರಗಳ ವಿವರ ಈ ಲೇಖನದಲ್ಲಿದೆ. ಮೇಕ್ ಅಮೆರಿಕ ಗ್ರೇಟ್ ಎಗೇನ್ ಎನ್ನುವ ಅಭಿಯಾನದ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಹೆಜ್ಜೆಗಳನ್ನು ಇಡಲಾಗಿದೆ.
ವಾಷಿಂಗ್ಟನ್, ಜನವರಿ 21: ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಮೆರಿಕವನ್ನು ಮತ್ತೆ ವೈಭವ ದೇಶವಾಗಿ ಮಾಡುವ MAGA ಘೋಷವಾಕ್ಯ ಬಹಳ ಪ್ರಸಿದ್ಧಿ ಪಡೆದಿದೆ. MAGA ವನ್ನು ಸಾಕಾರಗೊಳಿಸಲು ಡೊನಾಲ್ಡ್ ಟ್ರಂಪ್ ಕ್ಷಿಪ್ರಗತಿಯಲ್ಲಿ ಆರಂಭಿಕ ಹೆಜ್ಜೆಗಳನ್ನು ಇರಿಸಿದ್ದಾರೆ. ಕೆಲ ಹೊಸ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕದ ಹೊರತರುವುದು, ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಿಲ್ಲಿಸುವುದು ಇತ್ಯಾದಿ ಕ್ರಮಗಳನ್ನು ಟ್ರಂಪ್ ತಮ್ಮ ಅಧಿಕಾರದ ಮೊದಲ ದಿನವೇ ತೆಗೆದುಕೊಂಡಿದ್ದಾರೆ. ನಿರೀಕ್ಷೆಯಂತೆ ಅಮೆರಿಕದ ವಲಸೆ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಪರಿವರ್ತಿಸುವ ನಿಟ್ಟಿನಲ್ಲೂ ಹೆಜ್ಜೆಗಳನ್ನು ಇಡಲಾಗಿದೆ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಿನ ತೆಗೆದುಕೊಂಡ ಕೆಲ ಪ್ರಮುಖ ಕ್ರಮಗಳ ವಿವರ ಮುಂದಿದೆ….
ಸಂಸತ್ ದಾಳಿ ಘಟನೆ: ಆರೋಪಿಗಳಿಗೆ ಕ್ಷಮಾದಾನ…
2021ರ ಜನವರಿ 6ರಂದು ಅಮೆರಿಕದ ಸಂಸತ್ತಿನ (ಯುಎಸ್ ಕ್ಯಾಪಿಟಾಲ್) ಮೇಲೆ ದೊಡ್ಡ ಸಂಖ್ಯೆಯಲ್ಲಿದ್ದ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ್ದರು. ಟ್ರಂಪ್ ಅವರನ್ನು ಮೋಸದಿಂದ ಸೋಲಿಸಲಾಯಿತು ಎಂದು ಭಾವಿಸಿ ಬೆಂಬಲಿಗರು ಉದ್ರಿಕ್ತಗೊಂಡು ದಾಳಿ ಮಾಡಿದ್ದರು. ಆಗ ಅಧಿಕಾರಕ್ಕೆ ಬಂದಿದ್ದ ಬೈಡನ್ ನೇತೃತ್ವದ ಸರ್ಕಾರ 1,580ಕ್ಕೂ ಹೆಚ್ಚಿನ ಜನರ ಮೇಲೆ ಪ್ರಕರಣ ದಾಖಲಿಸಿತ್ತು. ಇದೀಗ ಇವರಲ್ಲಿ ಬಹುತೇಕರಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಸಂಪೂರ್ಣ ಕ್ಷಮಾದಾನ ನೀಡಿದೆ. ಇದು ಟ್ರಂಪ್ ಸರ್ಕಾರದ ಮೊದಲ ಕ್ರಮಗಳಲ್ಲಿ ಒಂದು.
ಟಿಕ್ಟಾಕ್ ನಿಷೇಧ ಮತ್ತಷ್ಟು ವಿಳಂಬ
ಚೀನಾ ಮೂಲದ ಬೈಡ್ಡ್ಯಾನ್ಸ್ ಎನ್ನುವ ಸಂಸ್ಥೆಯ ಟಿಕ್ಟಾಕ್ ಅಮೆರಿಕದಲ್ಲಿ ಅಗ್ರಮಾನ್ಯ ಶಾರ್ಟ್ವಿಡಿಯೋ ಪ್ಲಾಟ್ಫಾರ್ಮ್ ಆಗಿದೆ. ಚೀನೀ ಕಂಪನಿಯ ಮಾಲಕತ್ವ ಇದ್ದರೆ ಟಿಕ್ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧಿಸಲು ಅಲ್ಲಿನ ಸಂಸತ್ತಿನಲ್ಲಿ ಕಾಯ್ದೆ ಮಾಡಲಾಗಿತ್ತು. ಅಮೆರಿಕದ ಟಿಕ್ಟಾಕ್ ಬಿಸಿನೆಸ್ ಅನ್ನು ಸಂಪೂರ್ಣವಾಗಿ ಅಮೆರಿಕದ ಕಂಪನಿಯೊಂದಕ್ಕೆ ಅಥವಾ ಅಮೆರಿಕ ಸ್ನೇಹಿ ರಾಷ್ಟ್ರವೊಂದರ ಕಂಪನಿಗೆ ಮಾರಬೇಕು ಎನ್ನುವುದು ಷರತ್ತು. ಇದು ಆಗದಿದ್ದರೆ ಜನವರಿ 19ರೊಳಗೆ ಟಿಕ್ಟಾಕ್ ಅನ್ನು ನಿಷೇಧಿಸಲು ನಿರ್ಧರಿಸಲಾಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಅವರು ಟಿಕ್ಟಾಕ್ ನಿಷೇಧಕ್ಕೆ ಇದ್ದ ಡೆಡ್ಲೈನ್ ಅನ್ನು ವಿಸ್ತರಿಸಿದ್ದಾರೆ. ಟಿಕ್ಟಾಕ್ಗೆ ಹೊಸ ಮಾಲಕರನ್ನು ಹುಡುಕು ಹೆಚ್ಚಿನ ಕಾಲಾವಕಾಶಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೆ ಟ್ರಂಪ್ ದರ್ಬಾರ್, ಸರ್ಕಾರ ರಚನೆಯಾಗುತ್ತಿದ್ದಂತೆ ಮಾಡಿದ ಘೋಷಣೆಗಳಿವು
ಬೈಡನ್ ಸರ್ಕಾರದ ಪ್ರಮುಖ ಆದೇಶಗಳು ವಾಪಸ್…
ಜೋ ಬೈಡನ್ ನೇತೃತ್ವದ ಹಿಂದಿನ ಸರ್ಕಾರ ತೆಗೆದುಕೊಂಡ 78 ಕ್ರಮಗಳನ್ನು ಟ್ರಂಪ್ ಸರ್ಕಾರ ಅನೂರ್ಜಿತಗೊಳಿಸಿದೆ. ಪ್ಯಾಲಸ್ಟೀನ್ನಲ್ಲಿ ಹಿಂಸಾಚಾರಕ್ಕೆ ಕಾರಣರಾದರೆನ್ನಲಾದ ಯಹೂದಿ ವಲಸಿಗರ ಮೇಲೆ ನಿಷೇಧ, ಅಮೆರಿಕ ಮಿಲಿಟರಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ, ಇವೇ ಮುಂತಾದ ಬೈಡನ್ ಸರ್ಕಾರದ ಕ್ರಮಗಳನ್ನು ಟ್ರಂಪ್ ರದ್ದುಗೊಳಿಸಿದ್ದಾರೆ.
ಟ್ರಂಪ್ ಸರ್ಕಾರದ ವಲಸೆ ನೀತಿ…
ಬೈಡನ್ ಸರ್ಕಾರದ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ ಜನರು ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಆ ಬಳಿಕ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದರು. ಇದೀಗ ಟ್ರಂಪ್ ಸರ್ಕಾರ ವಲಸೆ ನೀತಿಯನ್ನು ಬಿಗಿಗೊಳಿಸಿದೆ.
ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಸ್ಥಗಿತ
ಅಮೆರಿಕ ಸರ್ಕಾರದ ವೆಚ್ಚಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಸರ್ಕಾರವು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಸದ್ಯಕ್ಕೆ ನಿಲ್ಲಿಸಿದೆ. ಖಾಲಿ ಇರುವ ಯಾವುದೇ ಸ್ಥಾನಕ್ಕೂ ಈಗ ನೇಮಕಾತಿ ಮಾಡಲಾಗುವುದಿಲ್ಲ ಎಂದು ಹೇಳಿದೆ. ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿ ಅಥವಾ ಡೋಜೆ ಇಲಾಖೆ ಈ ಹಿಂದೆಯೇ ಈ ವಿಚಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಸರ್ಕಾರಿ ನೌಕರವರ್ಗದ ಸಂಖ್ಯೆ ಕಡಿಮೆ ಮಾಡುವುದು, ಮತ್ತು ಈ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುವುದು ಡೋಜೆ ಇಲಾಖೆಯ ಆದ್ಯತೆಯಾಗಿದೆ.
ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬಂದ ಅಮೆರಿಕ
ಈಗ ಇರುವ ಯಾವುದೇ ಸರ್ಕಾರಿ ನೌಕರರು ವರ್ಕ್ ಫ್ರಂ ಹೋಮ್ ಮಾಡುವಂತಿಲ್ಲ. ಕೆಲ ಅನಿವಾರ್ಯ ಸಂದರ್ಭ ಹೊರತುಪಡಿಸಿ, ಎಲ್ಲರೂ ಕಚೇರಿಗೆ ಬಂದೇ ಕೆಲಸ ಮಾಡಬೇಕು ಎಂದು ಆದೇಶಿಸಲಾಗಿದೆ.
ಹೆಸರುಗಳ ಬದಲಾವಣೆ…
ಭಾರತದಲ್ಲಿ ಐತಿಹಾಸಿಕ ಸ್ಥಳಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಅಮೆರಿಕದಲ್ಲೂ ಕೆಲ ಪ್ರಮುಖ ಸ್ಥಳಗಳ ಹೆಸರು ಬದಲಾವಣೆ ಮಾಡುವುದುಂಟು. ಟ್ರಂಪ್ ಸರ್ಕಾರ ಕೆಲ ಪ್ರಮುಖ ಸ್ಥಳಗಳ ಹೆಸರು ಬದಲಾವಣೆ ಮಾಡಿದೆ. ಅದರಲ್ಲಿ ಅಲಾಸ್ಕ ರಾಜ್ಯದ ಡೆನಾಲಿಯದ್ದು ಒಂದು. 2015ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಮೌಂಟ್ ಮೆಕಿನ್ಲೀ ಎನ್ನುವ ಪರ್ವತದ ಹೆಸರನ್ನು ಡೆನಾಲಿ ಎಂದು ಬದಲಿಸಿದ್ದರು. ಮೆಕಿನ್ಲೀ ಅವರು ಅಮೆರಿಕದ ಮಾಜಿ ಅಧ್ಯಕ್ಷರು. ಇದೀಗ ಡೊನಾಲ್ಡ್ ಟ್ರಂಪ್ ಅವರು ಡೆನಾಲಿ ಹೆಸರನ್ನು ಮರಳಿ ಮೌಂಟ್ ಮೆಕಿನ್ಲೀ ಎಂದು ಬದಲಿಸಿದ್ದಾರೆ.
ಹಾಗೆಯೇ, ಗಲ್ಫ್ ಆಫ್ ಮೆಕ್ಸಿಕೋದ ಹೆಸರನ್ನು ಇನ್ಮುಂದೆ ಗಲ್ಫ್ ಆಫ್ ಅಮೆರಿಕ ಎಂದು ಕರೆಯುವಂತೆಯೂ ಆದೇಶಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೊದಲ ದಿನ ತೆಗೆದುಕೊಂಡ ಇನ್ನಷ್ಟು ಆರಂಭಿಕ ಕ್ರಮಗಳ ಮತ್ತೊಂದು ಸುದ್ದಿಯ ಲಿಂಕ್ ಇಲ್ಲಿದೆ….
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ