Reliance: 1592 ಕೋಟಿಗೆ ಶುಭಲಕ್ಷ್ಮಿ ಪಾಲಿಯಸ್ಟರ್ಸ್ ಖರೀದಿಸಿದ ರಿಲಯನ್ಸ್
ಶುಭಲಕ್ಷ್ಮೀ ಕಂಪನಿಯು ವರ್ಷಕ್ಕೆ 2.52 ಕೋಟಿ ಟನ್ನಷ್ಟು ಪಾಲಿಯೆಸ್ಟರ್ ಎಳೆಗಳನ್ನು ಉತ್ಪಾದಿಸುವ ಸಾಮರ್ಥ್ಯದ ಘಟಕಗಳನ್ನು ಹೊಂದಿದೆ.
ಮುಂಬೈ: ರಿಲಯನ್ಸ್ ಪಾಲಿಯೆಸ್ಟರ್ ಎಂದು ಹೊಸದಾಗಿ ಹೆಸರು ಬದಲಿಸಿಕೊಂಡಿರುವ ರಿಲಯನ್ಸ್ ಪೆಟ್ರೋಲಿಯಂ ರೀಟೇಲ್ ಕಂಪನಿಯು ಶನಿವಾರ ಶುಭಲಕ್ಷ್ಮಿ ಪಾಲಿಯೆಸ್ಟರ್ಸ್ Shubhalakshmi Polyesters – SPL) ಕಂಪನಿಯನ್ನು ₹ 1,522 ಕೋಟಿ ಮತ್ತು ಶುಭಲಕ್ಷ್ಮಿ ಪಾಲಿಟೆಕ್ಸ್ (Shubhlaxmi Polytex – SPTex) ಕಂಪನಿಯನ್ನು ₹ 70 ಕೋಟಿಗೆ ಖರೀದಿಸಿದೆ. ರಿಲಯನ್ಸ್ ಪಾಲಿಯೆಸ್ಟರ್ ಕಂಪನಿಯು ಸಂಪೂರ್ಣವಾಗಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd – RIL) ಅಧೀನದಲ್ಲಿದೆ. ‘ಭಾರತೀಯ ಸ್ಪರ್ಧಾ ಆಯೋಗ’ದ (Competition Commission of India – CCI) ಅನುಮೋದನೆ ದೊರೆತ ನಂತರ ಈ ಖರೀದಿ ಒಪ್ಪಂದವು ಅಂತಿಮವಾಗಿ ಊರ್ಜಿತಕ್ಕೆ ಬರಲಿದೆ.
ಶುಭಲಕ್ಷ್ಮೀ ಕಂಪನಿಯು ವರ್ಷಕ್ಕೆ 2.52 ಕೋಟಿ ಟನ್ನಷ್ಟು ಪಾಲಿಯೆಸ್ಟರ್ ಎಳೆಗಳನ್ನು ಉತ್ಪಾದಿಸುವ ಸಾಮರ್ಥ್ಯದ ಘಟಕಗಳನ್ನು ಹೊಂದಿದೆ. ಗುಜರಾತ್ನ ದಹೆಜ್ ಮತ್ತು ದಾದ್ರಾ ನಗರ್ ಹವೇಲಿಯ ಸಿಲ್ವಸಾ ಪಟ್ಟಣಗಳಲ್ಲಿ ಕಂಪನಿಯ ಘಟಕಗಳಿವೆ. ಇತ್ತೀಚಿನ ದಿನಗಳಲ್ಲಿ ಜವಳಿ ಕ್ಷೇತ್ರದಲ್ಲಿ ರಿಲಯನ್ಸ್ ದೃಢವಾಗಿ ಹೆಜ್ಜೆ ಊರುತ್ತಿದೆ. ಹೊಸ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಉದ್ಯಮ ವಿಸ್ತರಿಸಲು ರಿಲಯನ್ಸ್ ಪ್ರಯತ್ನಿಸುತ್ತಿದೆ. ಶುಭಲಕ್ಷ್ಮೀ ಕಂಪನಿಯ ಘಟಕಗಳನ್ನು ಖರೀದಿಸುವ ಒಪ್ಪಂದವು ಸಹ ಕಂಪನಿಯ ಮಹತ್ವಾಕಾಂಕ್ಷೆಯ ಭಾಗವಾಗಿದೆ.
ಸೋಲಾರ್ ಎನರ್ಜಿಯಲ್ಲಿ ರಿಲಯನ್ಸ್ ದಾಪುಗಾಲು
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ಸೌರವಿದ್ಯುತ್ ಕ್ಷೇತ್ರದಲ್ಲಿ ಅಂಥದ್ದೇ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಸೌರವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಸಾಫ್ಟ್ವೇರ್ ಸೇವೆ ಒದಗಿಸುವ ಅಮೆರಿಕದ ಸೆನ್ಸ್ಹಾಕ್ (SenseHawk) ಕಂಪನಿಯಲ್ಲಿ ಶೇ 79.4ರ ಪಾಲು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ (Reliance Industries – RIL) ಮುಂದಾಗಿದೆ. ಈ ಸಂಬಂಧ ಸೆನ್ಸ್ಹಾಕ್ ಕಂಪನಿಯ ಪ್ರವರ್ತಕರೊಂದಿಗೆ ರಿಯಲನ್ಸ್ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ರಿಲಯನ್ಸ್ 3.2 ಕೋಟಿ ಅಮೆರಿಕನ್ ಡಾಲರ್ ವ್ಯಯಿಸಲಿದೆ. 2018ರಲ್ಲಿ ಆರಂಭವಾದ ಸೆನ್ಸ್ಹಾಕ್ ಕ್ಯಾಲಿಫೋರ್ನಿಯಾ ಮೂಲದ ಸಾಫ್ಟ್ವೇರ್ ಕಂಪನಿ. ಇದು ಸೌರಶಕ್ತಿ ಕಂಪನಿಗಳಿಗೆ ದೈನಂದಿನ ಕಾರ್ಯನಿರ್ವಹಣೆಯ ಸಾಫ್ಟ್ವೇರ್ ಟೂಲ್ಗಳನ್ನು ಒದಗಿಸುತ್ತದೆ.
ಸೆನ್ಸ್ಹಾಕ್ ಕಂಪನಿಯ 2021-2022ನೇ ಆರ್ಥಿಕ ವರ್ಷದ ವಹಿವಾಟು 2.32 ಕೋಟಿ ಅಮೆರಿಕನ್ ಡಾಲರ್ ಇದೆ. 2020-21ರಲ್ಲಿ 1.16 ಕೋಟಿ ಅಮೆರಿಕನ್ ಡಾಲರ್, 2019-20ರಲ್ಲಿ 1.29 ಕೋಟಿ ಅಮೆರಿಕನ್ ಡಾಲರ್ ವಹಿವಾಟು ನಡೆಸಿತ್ತು. ‘ಸೆನ್ಸ್ಹಾಕ್ ಕಂಪನಿಯು ಸೋಲಾರ್ ಯೋಜನೆಗಳನ್ನು ರೂಪಿಸಲು, ಸ್ಥಾಪಿಸಲು ಮತ್ತು ಸೌರವಿದ್ಯುತ್ ಉತ್ಪಾದಿಸಲು ನೆರವಾಗುತ್ತದೆ. ಸೌರಶಕ್ತಿಯು ಉತ್ಪಾದನೆ ಮತ್ತು ಸರಬರಾಜನ್ನು ಸ್ವಯಂಚಾಲಿಕಗೊಳಿಸಲು ಹಲವು ಟೂಲ್ಗಳನ್ನು ಸೆನ್ಸ್ಹಾಕ್ ಒದಗಿಸುತ್ತದೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತ ಸರ್ಕಾರಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
Published On - 10:56 am, Sun, 11 September 22