Global Award: ಯುವ ಸಂಶೋಧಕರ ಬೆನ್ನು ತಟ್ಟುವ ಬೆಂಗಳೂರು ವಿಜ್ಞಾನಿಗೆ ಅಮೆರಿಕದ ಔಷಧ ವಿಜ್ಞಾನಿಗಳ ಸಂಸ್ಥೆಯಿಂದ ಪುರಸ್ಕಾರ

ಭಾರತದಲ್ಲಿ ನರಸಿಂಹಮೂರ್ತಿ ಮಾಡಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ ಅಮೆರಿಕ ಔಷಧ ವಿಜ್ಞಾನಿಗಳ ಒಕ್ಕೂಟವು ಈ ವರ್ಷದ ಪ್ರತಿಷ್ಠಿತ ‘ಫಾರ್ಮಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್​’ ಘೋಷಿಸಿದೆ.

Global Award: ಯುವ ಸಂಶೋಧಕರ ಬೆನ್ನು ತಟ್ಟುವ ಬೆಂಗಳೂರು ವಿಜ್ಞಾನಿಗೆ ಅಮೆರಿಕದ ಔಷಧ ವಿಜ್ಞಾನಿಗಳ ಸಂಸ್ಥೆಯಿಂದ ಪುರಸ್ಕಾರ
ಔಷಧ ವಿಜ್ಞಾನಿ ಡಾ ನರಸಿಂಹಮೂರ್ತಿ ಮತ್ತು ರಾಜಾಜಿನಗರದ ಐಡಿಬಿಆರ್ ಸಂಸ್ಥೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Sep 12, 2022 | 8:43 AM

ಬೆಂಗಳೂರು: ಯುವ ಔಷಧ ವಿಜ್ಞಾನಿಗಳ ಕನಸಿಗೆ ನೀರೆರೆದು ಪ್ರೋತ್ಸಾಹಿಸುವ ಬೆಂಗಳೂರಿನ ಸಂಶೋಧಕ ಡಾ ನರಸಿಂಹಮೂರ್ತಿ ಅವರಿಗೆ ಈ ವರ್ಷದ ಪ್ರತಿಷ್ಠಿತ ‘ಫಾರ್ಮಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್​’ (Pharmaceutical Global Health Award – 2022) ಘೋಷಣೆಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ನರಸಿಂಹಮೂರ್ತಿ ಅವರು ಅಮೆರಿಕದಲ್ಲಿ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿ ಔಷಧ ಸಂಶೋಧನೆಗೆ ಸಂಬಂಧಿಸಿದ ಸೇವೆ ಒದಗಿಸುವ ಕಂಪನಿಯೊಂದನ್ನು ಮುನ್ನಡೆಸುತ್ತಿದ್ದಾರೆ. ಅದರ ಜೊತೆಜೊತೆಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ‘ಇನ್​ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೊ ಮೆಡಿಕಲ್ ರೀಸರ್ಚ್’ (Institute for Drug Delivery and Biomedical Research – IDBR) ಸಂಸ್ಥೆಯ ಮೂಲಕ ಹಲವು ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಲು ಯುವಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದಲ್ಲಿ ನರಸಿಂಹಮೂರ್ತಿ ಮಾಡಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ ಅಮೆರಿಕ ಔಷಧ ವಿಜ್ಞಾನಿಗಳ ಒಕ್ಕೂಟ ‘ಅಮೆರಿಕನ್ ಅಸೋಸಿಯೇಷನ್ ಫಾರ್ ಫಾರ್ಮಸಿಟಿಕಲ್ ಸೈಂಟಿಸ್ಸ್ಟ್’ (American Association of Pharmaceutical Scientists – AAPS) ಈ ವರ್ಷದ ಪ್ರತಿಷ್ಠಿತ ‘ಫಾರ್ಮಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್​’ ಘೋಷಿಸಿದೆ.

ಅಮೆರಿಕ ಮತ್ತು ಜಗತ್ತಿನ ಹಲವೆಡೆ ಔಷಧ ಉತ್ಪಾದನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 1 ಲಕ್ಷ ಸದಸ್ಯರು ಅಮೆರಿಕದ ಔಷಧ ವಿಜ್ಞಾನಿಗಳ ಒಕ್ಕೂಟದಲ್ಲಿದ್ದಾರೆ. ಈ ಒಕ್ಕೂಟದ ಸಮಾವೇಶದಲ್ಲಿ ಸುಮಾರು 20 ಸಾವಿರ ಜನರು ಸೇರುತ್ತಾರೆ. ಈ ಬಾರಿ ಅಮೆರಿಕದ ಬಾಸ್ಟನ್ ಮೆಸಚುಟಿಸ್​ನಲ್ಲಿ ಅಕ್ಟೋಬರ್ 16ರಂದು ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿಯೇ ಡಾ ನರಸಿಂಹಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ನರಸಿಂಹಮೂರ್ತಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದವರು. ಪ್ರಸ್ತುತ ಬೆಂಗಳೂರಿನ ಎಂ.ಎಸ್.ರಾಮಯ್ಯ ಲೇಔಟ್​ನಲ್ಲಿ ವಾಸವಾಗಿದ್ದಾರೆ. ಇಲ್ಲಿಂದಲೇ ಅಮೆರಿಕದಲ್ಲಿರುವ ತಮ್ಮ ಕಂಪನಿಯನ್ನೂ ನಿರ್ವಹಿಸುತ್ತಿದ್ದಾರೆ.

ಭವಿಷ್ಯದ ಔಷಧ ವಿಜ್ಞಾನಿಗಳಿಗೆ ನೆರವು

ಸಮಾನ ಮನಸ್ಕ ವಿಜ್ಞಾನಿಗಳು ಒಗ್ಗೂಡಿ ಸ್ಥಾಪಿಸಿರುವ, ಲಾಭದ ಉದ್ದೇಶವಿಲ್ಲದ (Non Profit) ಸಂಶೋಧನಾ ಸಂಸ್ಥೆ ‘ಇನ್​ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೊ ಮೆಡಿಕಲ್ ರೀಸರ್ಚ್’. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಬಯಸುವವರಿಗೆ ಹಲವು ರೀತಿಯ ನೆರವು ದೊರಕಿಸಿಕೊಡುತ್ತಿದೆ. ಚಿಕಿತ್ಸಾ ಪದ್ಧತಿ ಇನ್ನೂ ವಿಕಸನಗೊಳ್ಳದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಂತ್ರಗಳು ಹಾಗೂ ಔಷಧಿ ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಮುಖ್ಯ ಧ್ಯೇಯ. 2013ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಹಲವು ಯುವ ಸಂಶೋಧಕರಿಗೆ ನುರಿತ ವಿಜ್ಞಾನಿಗಳು ಉಚಿತವಾಗಿ ಮಾರ್ಗದರ್ಶನ (ಮೆಂಟರ್​ಶಿಪ್) ಮಾಡುತ್ತಾರೆ. ಸ್ವಂತ ಕಂಪನಿ ಸ್ಥಾಪಿಸುವ ಮೂಲಕ ಉದ್ಯಮಿಗಳಾಗಬೇಕು (ಸ್ಟಾರ್ಟಪ್) ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡವರಿಗೂ ವಿಭಿನ್ನ ಹಿನ್ನೆಲೆಯ ಅನುಭವಿಗಳು ಹಲವು ರೀತಿಯಲ್ಲಿ ನೆರವಾಗುತ್ತಾರೆ. ವಿಜ್ಞಾನಿಗಳಾಗಬೇಕು ಎಂಬ ಆಸೆ ಇರುವ ಯುವಜನರನ್ನು ಹೈಸ್ಕೂಲ್ ಮಟ್ಟದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ.

ಈ ಸಂಸ್ಥೆಯು ಅಭಿವೃದ್ಧಿಪಡಿಸಿದ ಹಲವು ಚಿಕಿತ್ಸಾ ಪದ್ಧತಿಗಳು ಹಾಗೂ ಔಷಧಿಗಳಿಗೆ ಸರ್ಕಾರದ ಅನುಮೋದನೆ ಸಿಕ್ಕಿದೆ. ವೈದ್ಯರೂ ಅವನ್ನು ಬಳಸುತ್ತಿದ್ದಾರೆ. ‘ಸಮಾಜಕ್ಕೆ ಅಗತ್ಯವಿರುವ, ಆದರೆ ಈವರೆಗೂ ಲಭ್ಯವಿಲ್ಲದ ಔಷಧ ಅಥವಾ ಚಿಕಿತ್ಸಾ ಕ್ರಮಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಅಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತದೆ. ಸರ್ಕಾರವು ನಮ್ಮ ಪ್ರಸ್ತಾವ ಒಪ್ಪಿಕೊಂಡರೆ ಅನುದಾನ ಸಿಗುತ್ತದೆ. ಅದನ್ನು ಬಳಸಿಕೊಂಡು ನಾವು ಚಿಕಿತ್ಸಾ ಕ್ರಮ ಅಭಿವೃದ್ಧಿಪಡಿಸುತ್ತೇವೆ. ಪ್ರತಿ ಹಂತದಲ್ಲಿಯೂ ನಾನು ಮತ್ತು ಇತರ ಔಷಧ ವಿಜ್ಞಾನಿಗಳು ನಮ್ಮ ಅನುಭವವನ್ನು ಧಾರೆ ಎರೆಯುತ್ತೇವೆ. ಆದರೆ ಇದರಿಂದ ವೈಯಕ್ತಿಕವಾಗಿ ನಮಗೆ ಯಾವುದೇ ಆರ್ಥಿಕ ಲಾಭ ಇರುವುದಿಲ್ಲ’ ಎಂದು ವಿವರಿಸುತ್ತಾರೆ ಡಾ ನರಸಿಂಹಮೂರ್ತಿ.

ಕಲಾಂ ಸ್ಫೂರ್ತಿ

‘ಈಗ ನನಗೆ ಸಿಕ್ಕಿರುವ ಮಾನ್ಯತೆ ಅಥವಾ ಪ್ರಶಸ್ತಿಗೆ ನಾನೊಬ್ಬನೇ ಬಾಧ್ಯಸ್ಥನಲ್ಲ. ಒಂದು ತಂಡವಾಗಿ ನಾವು ಶ್ರಮಿಸುತ್ತಿದ್ದೇವೆ. ನಮಗೆಲ್ಲರಿಗೂ ದಿವಂಗತ ರಾಷ್ಟ್ರಪತಿ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಪ್ರೇರಣೆ. ನಾನು ಇಂಥದ್ದೊಂದು ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಕಲಾಂ ಅವರಿಗೆ ಪತ್ರ ಬರೆದಿದ್ದೆ. ಆಗ ಕಲಾಂ ಅವರು ನನಗೆ ಪ್ರತಿ ಉತ್ತರ ಬರೆದು, ನೀವು ಮುಂದುವರಿಯಿರಿ. ಇಂಥದ್ದೊಂದು ಪ್ರಯತ್ನ ಆಗಬೇಕಿದೆ’ ಎಂದು ಧೈರ್ಯ ತುಂಬಿದ್ದರು. ನನ್ನ ಸಂಶೋಧನೆಗಳಿಗೆ ಕಲಾಂ ಅವರೇ ದೊಡ್ಡ ಸ್ಫೂರ್ತಿ’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

‘ಔಷಧ ಸಂಶೋಧನೆಯ ಬಗ್ಗೆ ಆಸಕ್ತಿ ಇರುವವರು, ಔಷಧ ವಿಜ್ಞಾನಿ ಆಗಬೇಕು ಎಂಬ ಕನಸು ಹೊತ್ತವರು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ಮಾರ್ಗದರ್ಶನ ನೀಡುತ್ತೇವೆ’ ಎಂದು ಡಾ ನರಸಿಂಹಮೂರ್ತಿ ಕಿವಿಮಾತು ಹೇಳುತ್ತಾರೆ. ಆಸಕ್ತರು idbresearch.com ಜಾಲತಾಣಕ್ಕೆ ಭೇಟಿ ನೀಡಬಹುದು.

Published On - 6:00 am, Mon, 12 September 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?