IPL 2025: ಬೌಲರ್ಗಳಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ: ಅಶ್ವಿನ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ 5 ಪಂದ್ಯಗಳಲ್ಲಿ 6 ತಂಡಗಳು ಇನ್ನೂರಕ್ಕೂ ಅಧಿಕ ರನ್ ಕಲೆಹಾಕಿದೆ. ಅಂದರೆ ಈ ಬಾರಿಯ ಐಪಿಎಲ್ನಲ್ಲೂ ಬ್ಯಾಟ್ಸ್ಮನ್ಗಳ ಅಬ್ಬರ ಜೋರಾಗಿದೆ. ಟಿ20 ಕ್ರಿಕೆಟ್ ಸಂಪೂರ್ಣ ಬ್ಯಾಟರ್ಗಳ ಆಟವಾಗಿ ಮಾರ್ಪಡುತ್ತಿರುವ ಬಗ್ಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಕ್ರಿಕೆಟ್‌ಗೆ ಸಂಬಂಧಿಸಿದಂತೆ ಏನೇ ಹೇಳಿದರೂ ಅದು ಚರ್ಚಾ ವಿಷಯವಾಗುತ್ತದೆ. ಇದೀಗ ಐಪಿಎಲ್ ನಡುವೆ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಹೀಗೆ ಚರ್ಚೆಗೀಡಾಗಲು ಮುಖ್ಯ ಕಾರಣ ರವಿಚಂದ್ರನ್ ಅಶ್ವಿನ್ ಬೌಲರ್ಗಳ ಮಾನಸಿಕ ಸ್ಥಿತಿ ಬಗ್ಗೆ ಮಾತನಾಡಿರುವುದು.
ಐಪಿಎಲ್ 2025ರ ಆರಂಭದ ಬೆನ್ನಲ್ಲೇ ಬ್ಯಾಟರ್ಗಳ ಅಬ್ಬರ ಜೋರಾಗಿದೆ. ಇದನ್ನೇ ಪ್ರಸ್ತಾಪಿಸಿರುವ ಅಶ್ವಿನ್, ಐಪಿಎಲ್‌ನಲ್ಲಿ ಬ್ಯಾಟಿಂಗ್ ನಡೆಯುತ್ತಿರುವ ರೀತಿ ನೋಡಿದರೆ, ಶೀಘ್ರದಲ್ಲೇ ಪ್ರತಿಯೊಬ್ಬ ಬೌಲರ್‌ಗಳು ವೈಯಕ್ತಿಕ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಬೇಕಾಗಿ ಬರಬಹುದು ಎಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸ್ಫೋಟಕ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಟಿ20 ಲೀಗ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ರೀತಿಯ ನಿಯಮಗಳು ಬಂದಿವೆ. ಆದರೆ ಇವೆಲ್ಲವೂ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗುತ್ತಿದೆ. ವಿಶೇಷವಾಗಿ ಐಪಿಎಲ್‌ನಲ್ಲಿ, ಕಳೆದ ಸೀಸನ್ನಿಂದ ಬೃಹತ್ ಸ್ಕೋರ್‌ಗಳು ಮೂಡಿ ಬರುತ್ತಿವೆ.
ಐಪಿಎಲ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 277 ಮತ್ತು 287 ರನ್ ಗಳಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಸೀಸನ್ನ ಎರಡನೇ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು 286 ರನ್ ಗಳಿಸುವ ಮೂಲಕ ಮತ್ತೊಮ್ಮೆ ಅಬ್ಬರಿಸಿದೆ. ಅಲ್ಲದೆ ಐಪಿಎಲ್‌ನಲ್ಲಿ ಈಗ 300 ರನ್ಗಳ ಗುರಿ ಮುಟ್ಟುವವರು ಯಾರು ಎಂಬುದರ ಚರ್ಚೆ ನಡೆಯುತ್ತಿದೆ.
ಅತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ಗಳು ನಮ್ಮ ಮುಂದಿನ ಗುರಿ 300 ರನ್ಗಳು ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಅದನ್ನು ಸಾಧಿಸಿ ತೋರಿಸುವ ರಣ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ 286 ರನ್ ಚಚ್ಚಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ಬೌಲರ್‌ಗಳು.
ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ:
ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್ಗಳ ಪರಾಕ್ರಮವು ಬೌಲರ್ಗಳ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಶ್ವಿನ್, ಟಿ20 ಕ್ರಿಕೆಟ್ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಲು ನಾನು ಬಯಸುತ್ತೇನೆ. ಏಕೆಂದರೆ ಬೌಲರ್ಗಳಿಗೆ ರನ್ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಮಾನಸಿಕವಾಗಿ ಒತ್ತಡಕ್ಕೀಡು ಮಾಡುತ್ತದೆ.
ಇಂತಹ ಒತ್ತಡಗಳಿಂದಾಗಿ ಬೌಲರ್ಗಳಿಗೆ ಶೀಘ್ರದಲ್ಲೇ ವೈಯಕ್ತಿಕ ಮನಃಶಾಸ್ತ್ರಜ್ಞರು ಬೇಕಾಗಿ ಬರಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈಗ ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ ಅಕ್ಷರಶಃ ಅಸಾಧ್ಯವಾಗಿದೆ. ಕೆಲವು ಪಿಚ್ಗಳು ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿ ಮಾರ್ಪಟ್ಟಿದೆ. ಇದರಿಂದ ಬೌಲರ್‌ಗಳು ನಿಷ್ಪ್ರಯೋಜಕರಾಗುತ್ತಿದ್ದಾರೆ ಎಂಬುದು ನನ್ನ ಭಾವನೆ. ಹೀಗಾಗಿ ಬೌಲರ್ಗಳ ಪಾಲಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಇದನ್ನೂ ಓದಿ: VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ
ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸೌತ್ ಆಫ್ರಿಕಾ ಕಗಿಸೊ ರಬಾಡ ಕೂಡ ಐಪಿಎಲ್‌ನಲ್ಲಿ ಬಳಸಲಾಗುತ್ತಿರುವ ಫ್ಲಾಟ್ ಪಿಚ್ಗಳ ಬಗ್ಗೆ ಧ್ವನಿಯೆತ್ತಿದ್ದರು. ಕೇವಲ ಬ್ಯಾಟರ್ಗಳಿಗೆ ಸಹಕಾರಿಯಾಗುವ ಪಿಚ್ ನಿರ್ಮಿಸಿ ಆಡಿಸಿದರೆ, ಅದನ್ನು ಕ್ರಿಕೆಟ್ ಎಂದು ಕರೆಯಲಾಗುವುದಿಲ್ಲ. ಬದಲಾಗಿ ಬ್ಯಾಟಿಂಗ್ ಎನ್ನಬೇಕಾಗುತ್ತದೆ ಎಂದು ರಬಾಡ ಅಸಮಾಧಾನ ಹೊರಹಾಕಿದ್ದರು. ಇದೀಗ ರವಿಚಂದ್ರನ್ ಅಶ್ವಿನ್ ಕೂಡ ಟಿ20 ಕ್ರಿಕೆಟ್ ಬ್ಯಾಟಿಂಗ್ ಪರವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Published On - 2:26 pm, Thu, 27 March 25