VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ
IPL 2025: ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಸೋತಿದ್ದ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇದೀಗ ಗೆಲುವಿನ ಖಾತೆ ತೆರೆದಿದೆ. ಅದು ಸಹ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಎಂಬುದು ವಿಶೇಷ. ಇತ್ತ ಕೆಕೆಆರ್ ಮೊದಲ ಗೆಲುವು ಪಡೆದರೆ, ಅತ್ತ ರಾಜಸ್ಥಾನ್ ರಾಯಲ್ಸ್ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಸೋಲನುಭವಿಸಿದೆ.

IPL 2025: ಗುವಾಹಟಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 6ನೇ ಪಂದ್ಯದ ವೇಳೆ ರಿಯಾನ್ ಪರಾಗ್ (Riyan Parag) ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 13 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ರಿಯಾನ್ ಪರಾಗ್ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಯಶಸ್ವಿ ಜೈಸ್ವಾಲ್ 23 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರೆ, ನಿತೀಶ್ ರಾಣಾ 8 ರನ್ಗಳಿಸಲಷ್ಟೇ ಶಕ್ತರಾದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ 28 ಎಸೆತಗಳಲ್ಲಿ 33 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲೇ ಮೊಯೀನ್ ಅಲಿ (5) ವಿಕೆಟ್ ಕಳೆದುಕೊಂಡರೂ, ಮತ್ತೊಂದೆಡೆ ಕ್ವಿಂಟನ್ ಡಿಕಾಕ್ ಅಬ್ಬರಿಸಿದರು. ಅಲ್ಲದೆ ಕೇವಲ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದರು. ಈ ಮೂಲಕ ಕೆಕೆಆರ್ ತಂಡವು 17.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು.
ಮೈದಾನಕ್ಕೆ ನುಗ್ಗಿದ ಅಭಿಮಾನಿ:
ಕೆಕೆಆರ್ ತಂಡದ ಇನಿಂಗ್ಸ್ನ 12ನೇ ಓವರ್ ವೇಳೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದರು. ಅಲ್ಲದೆ ನೇರವಾಗಿ ಬಂದು ಬೌಲಿಂಗ್ ಮಾಡುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ ರಿಯಾನ್ ಪರಾಗ್ ಅವರ ಕಾಲಿಗೆರಗಿದ್ದಾರೆ. ಇದೀಗ ರಿಯಾನ್ ಅವರ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರಾಗ್ ಫ್ಯಾನ್ಸ್ನಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ರಿಯಾನ್ ಪರಾಗ್ ಅಭಿಮಾನಿಯ ವಿಡಿಯೋ:
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಂಜು ಸ್ಯಾಮ್ಸನ್ , ನಿತೀಶ್ ರಾಣಾ , ರಿಯಾನ್ ಪರಾಗ್ (ನಾಯಕ) , ಧ್ರುವ ಜುರೆಲ್ (ವಿಕೆಟ್ ಕೀಪರ್) , ಶಿಮ್ರಾನ್ ಹೆಟ್ಮೆಯರ್ , ವನಿಂದು ಹಸರಂಗ , ಜೋಫ್ರಾ ಆರ್ಚರ್ , ಮಹೇಶ್ ತೀಕ್ಷಣ , ತುಷಾರ್ ದೇಶಪಾಂಡೆ , ಸಂದೀಪ್ ಶರ್ಮಾ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ವೆಂಕಟೇಶ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ) , ರಿಂಕು ಸಿಂಗ್ , ಮೊಯೀನ್ ಅಲಿ , ಆಂಡ್ರೆ ರಸೆಲ್ , ರಮಣದೀಪ್ ಸಿಂಗ್ , ಸ್ಪೆನ್ಸರ್ ಜಾನ್ಸನ್ , ವೈಭವ್ ಅರೋರಾ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ.