Karun Nair: ಟೀಮ್ ಇಂಡಿಯಾದಲ್ಲಿ ಕರುಣ್ ನಾಯರ್ಗೆ ಸ್ಥಾನ?
Karun Nair: ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ತ್ರಿಶತಕದೊಂದಿಗೆ ಒಟ್ಟು 374 ರನ್ ಕಲೆಹಾಕಿದ್ದಾರೆ. 2017 ರಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ ಕರುಣ್ ನಾಯರ್ಗೆ ಆ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆತಿರಲಿಲ್ಲ. ಇದೀಗ ದೇಶೀಯ ಅಂಗಳದಲ್ಲಿ ಮಿಂಚುವ ಮೂಲಕ ಕರುಣ್ ಮತ್ತೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಸಜ್ಜಾಗಲಿದೆ. ಈ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ತಂಡದಲ್ಲಿ ಟೀಮ್ ಇಂಡಿಯಾದ ಕೆಲ ಹಿರಿಯ ಆಟಗಾರರು ಹಾಗೂ ಹೊಸ ಪ್ಲೇಯರ್ಸ್ ಕಾಣಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಕರುಣ್ ನಾಯರ್ (Karun Nair) ಹೆಸರು ಮುಂಚೂಣಿಯಲ್ಲಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ಎ ತಂಡವು ಇಂಗ್ಲೆಂಡ್ ಲಯನ್ಸ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗುವ ತಂಡದಲ್ಲಿ ಕರುಣ್ ನಾಯರ್ಗೆ ಸ್ಥಾನ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಅಲ್ಲದೆ ಈ ಪಂದ್ಯಗಳಲ್ಲಿ ಕರುಣ್ ಮಿಂಚಿದರೆ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಸಿಗುವುದು ಖಚಿತ.
ಕರುಣ್ ನಾಯರ್ ಸಿಡಿಲಬ್ಬರ:
ದೇಶೀಯ ಅಂಗಳದಲ್ಲಿ ಈ ಬಾರಿ ಕರುಣ್ ನಾಯರ್ ಭರ್ಜರಿ ಪ್ರದರ್ಶನ ನೀಡಿದ್ದರು. ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳನ್ನಾಡಿದ್ದ ಕರುಣ್ 54 ಸರಾಸರಿಯಲ್ಲಿ 863 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್ನಿಂದ 4 ಶತಕಗಳು ಮತ್ತು 2 ಅರ್ಧಶತಕಗಳು ಮೂಡಿಬಂದಿದ್ದವು.
ಅಲ್ಲದೆ ಕರುಣ್ ನಾಯರ್ ಅವರ ಈ ಏಕಾಂಗಿ ಹೋರಾಟದ ಪರಿಣಾಮ ರಣಜಿ ಟ್ರೋಫಿ ಫೈನಲ್ನಲ್ಲಿ ಕೇರಳವನ್ನು ಸೋಲಿಸಿ ವಿದರ್ಭ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪ್ರದರ್ಶನವನ್ನು ಪರಿಗಣಿಸಿ 33 ವರ್ಷದ ಕರುಣ್ ನಾಯರ್ಗೆ ಮತ್ತೆ ಭಾರತ ಎ ತಂಡದಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಅದರಂತೆ ಮೇ 30 ರಂದು ಕ್ಯಾಂಟರ್ಬರಿಯ ಸ್ಪಿಟ್ಫೈರ್ ಮೈದಾನದಲ್ಲಿ ಮತ್ತು ಜೂನ್ 6 ರಂದು ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಭಾರತ ಎ ತಂಡದ ಪರ ಕರುಣ್ ನಾಯರ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಇನ್ನು ಈ ಎರಡು ಪಂದ್ಯಗಳ ಬಳಿಕವಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಭಾರತ ಎ ತಂಡದ ಪರ ಕರುಣ್ ಮಿಂಚಿದರೆ ಮತ್ತೆ ಟೀಮ್ ಇಂಡಿಯಾದ ಬಾಗಿಲು ತೆರೆಯುವುದು ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
- 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
- 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
- 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್