
ಮುಂಬೈ, ಜೂನ್ 17: ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ (Mukesh Ambani) ಅವರು ಏಷ್ಯನ್ ಪೇಂಟ್ಸ್ (Asian Paints) ಕಂಪನಿಯಲ್ಲಿನ ತಮ್ಮೆಲ್ಲಾ ಷೇರುಗಳನ್ನು ಮಾರಿದ್ದಾರೆ. ಇದರಿಂದ ಅವರು 9,580 ಕೋಟಿ ರೂ ಗಳಿಸಿದ್ದಾರೆ. ತಮ್ಮ ಮಾಲಕತ್ವದ ಸಂಸ್ಥೆಯೊಂದರ ಮೂಲಕ ಅಂಬಾನಿ ಅವರು 17 ವರ್ಷದ ಹಿಂದೆ ಏಷ್ಯನ್ ಪೇಂಟ್ಸ್ನಲ್ಲಿ ಶೇ. 4.9ರಷ್ಟು ಷೇರುಗಳನ್ನು 500 ರೂ ಮೊತ್ತಕ್ಕೆ ಖರೀದಿಸಿದ್ದರು. ಈ 17 ವರ್ಷದಲ್ಲಿ ಅವರಿಗೆ ಸಿಕ್ಕ ಲಾಭ 9,080 ಕೋಟಿ ರೂ. ಒಟ್ಟಾರೆ ಶೇ. 2,200ರಷ್ಟು ರಿಟರ್ನ್ ಗಿಟ್ಟಿಸಿದ್ದಾರೆ.
ರಿಲಾಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ಸಿದ್ಧಾಂತ್ ಕಮರ್ಷಿಯಲ್ಸ್ (Siddhant Commericals) ಏಷ್ಯನ್ ಪೇಂಟ್ಸ್ನ 4.37 ಕೋಟಿ ಈಕ್ವಿಟಿ ಷೇರುಗಳನ್ನು ಹೊಂದಿತ್ತು. ಕಳೆದ ವಾರ ಬ್ಲಾಕ್ ಡೀಲ್ನಲ್ಲಿ 3.50 ಕೋಟಿ ಷೇರುಗಳನ್ನು ಎಸ್ಬಿಐ ಮ್ಯೂಚುವಲ್ ಫಂಡ್ಗೆ ಮಾರಿತ್ತು. ಪ್ರತೀ ಷೇರಿಗೆ 2,201 ರೂ ಬೆಲೆಗೆ ಅದು ಮಾರಿತು.
ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಕಾದಿದೆಯಾ ಸಂಕಷ್ಟ? ಟಿಸಿಎಸ್, ಇನ್ಫೋಸಿಸ್ ಕಂಪನಿಗಳ ಬ್ಯುಸಿನೆಸ್ ಇಳಿಮುಖ?
ಈಗ ಉಳಿದ 87 ಲಕ್ಷ ಷೇರುಗಳನ್ನು ಪ್ರತೀ ಷೇರಿಗೆ 2,207.65 ರೂನಂತೆ ಐಸಿಐಸಿಐ ಲೈಫ್ ಮ್ಯೂಚುವಲ್ ಫಂಡ್ಗೆ ಮಾರಿದೆ. ಇವೆರಡು ಬ್ಲಾಕ್ ಡೀಲ್ಗಳಿಂದ ಸಿದ್ಧಾಂತ್ ಕಮರ್ಷಿಯಲ್ಸ್ ಗಳಿಸಿದ ಆದಾಯ 9,580 ಕೋಟಿ ರೂ. ಈ ವಿಚಾರವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ನಿನ್ನೆ ಸೋಮವಾರ ಬಹಿರಂಗಗೊಳಿಸಿದೆ. ಕಳೆದ ಎರಡು ದಿನಗಳಿಂದ ಏಷ್ಯನ್ ಪೇಂಟ್ಸ್ ಷೇರುಬೆಲೆ ಹೆಚ್ಚಿದೆ. ಇವತ್ತು ದಿನಾಂತ್ಯದಲ್ಲಿ ಬೆಲೆ 2,264 ರೂ ಆಗಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ 2008ರಲ್ಲಿ ಏಷ್ಯನ್ ಪೇಂಟ್ಸ್ನಲ್ಲಿ ಹೂಡಿಕೆ ಮಾಡಿತ್ತು. ಆಗ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಮಾರುಕಟ್ಟೆ ಕುಸಿದಿತ್ತು. ಒಳ್ಳೆಯ ಮೌಲ್ಯಕ್ಕೆ ಏಷ್ಯನ್ ಪೇಂಟ್ಸ್ ಷೇರುಗಳು ಸಿಕ್ಕವು. ಶೇ. 4.9ರಷ್ಟು ಷೇರುಗಳನ್ನು ಖರೀದಿ ಮಾಡಿತು. ಆಗ ಏಷ್ಯನ್ ಪೇಂಟ್ಸ್ ತನ್ನ ಮಾರುಕಟ್ಟೆಯಲ್ಲಿ ಪೈಪೋಟಿ ಕಾಣದ ಸ್ಪರ್ಧಿ ಎನಿಸಿತ್ತು.
ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?
ಏಷ್ಯನ್ ಪೇಂಟ್ಸ್ ಸಂಸ್ಥೆ ಈಗ ಮಾರುಕಟ್ಟೆ ಮುಖಂಡ ಎಂದು ಗಟ್ಟಿಯಾಗಿ ಹೇಳಲು ಆಗೊಲ್ಲ. ಬಿರ್ಲಾ ಗ್ರೂಪ್ಗೆ ಸೇರಿದ ಬಿರ್ಲಾ ಓಪಸ್ ಪೇಂಟ್ಸ್ ಮೊದಲಾದ ಕಂಪನಿಗಳು ಮಾರುಕಟ್ಟೆಯನ್ನು ಆಕ್ರಮಿಸುತ್ತಿವೆ. ಏಷ್ಯನ್ ಪೇಂಟ್ಸ್ನ ಮಾರುಕಟ್ಟೆ ಪಾಲು ಶೇ. 52ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಅದರ ಸ್ಥಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸರಿಯಾದ ಸಂದರ್ಭದಲ್ಲಿ ಏಷ್ಯನ್ ಪೇಂಟ್ಸ್ನಿಂದ ಹೊರಬಂದಿದೆ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ