ಫೋರ್ಬ್ಸ್ನ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಶ್ರೇಯಾಂಕ 2021ರ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದ ನಂಬರ್ ಒನ್ ಕಂಪೆನಿಯಾಗಿದೆ. ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದ ಅತಿದೊಡ್ಡ ಕಂಪೆನಿಯಾಗಿದೆ. ಜಾಗತಿಕವಾಗಿ ಶ್ರೇಯಾಂಕ ನೋಡುವುದಾದರೆ, ಕಂಪೆನಿಗಳಾದ ಫಿಲಿಪ್ಸ್, ಸನೋಫಿ, ಫೈಜರ್ ಮತ್ತು ಇಂಟೆಲ್‌ನಂತಹ ಕಾರ್ಪೊರೇಟ್‌ಗಳ ಸಾಲಿನಲ್ಲಿ 52ನೇ ಸ್ಥಾನದಲ್ಲಿತ್ತು. 2020-21ರ ಕೊರೊನಾ ವರ್ಷದಲ್ಲಿ ತೈಲದಿಂದ ರೀಟೇಲ್ ಉದ್ಯಮದ ತನಕ 75,000 ಹೊಸ ಉದ್ಯೋಗಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಸೇರ್ಪಡೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ 588ನೇ ಸ್ಥಾನದಲ್ಲಿದ್ದರೆ, ಟಾಟಾ ಸಮೂಹ 746ರಲ್ಲಿತ್ತು. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) 504ನೇ ಸ್ಥಾನದಲ್ಲಿದೆ.
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ವಿಶ್ವದ ಅತ್ಯುತ್ತಮ ಉದ್ಯೋಗದಾತ ಕಂಪೆನಿಯಾಗಿ ಸ್ಥಾನ ಪಡೆದಿದೆ. ಆ ನಂತರ ಅಮೆರಿಕ ಮೂಲದ ಟೆಕ್ ದೈತ್ಯ ಕಂಪೆನಿಗಳಾದ ಐಬಿಎಂ, ಮೈಕ್ರೋಸಾಫ್ಟ್, ಅಮೆಜಾನ್, ಆಪಲ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್ ಇವೆ. ಚೀನಾದ ಹುವಾವೇ ವಿಶ್ವದ ಎಂಟನೇ ಅತ್ಯುತ್ತಮ ಉದ್ಯೋಗದಾತ ಎಂಬ ಸ್ಥಾನ ಪಡೆದಿದೆ.
ವಿವಿಧ ಮಾನದಂಡಗಳನ್ನು ಆಧರಿಸಿದ ಶ್ರೇಯಾಂಕಗಳು
ಇತರ ಭಾರತೀಯ ಕಂಪೆನಿಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಲಾರ್ಸೆನ್ ಮತ್ತು ಟೂಬ್ರೋ ಕ್ರಮವಾಗಿ 65, 77, 90, 119 ಮತ್ತು 127ನೇ ಸ್ಥಾನದಲ್ಲಿವೆ. ಮತ್ತೊಂದೆಡೆ, ಬಜಾಜ್ 215, ಆಕ್ಸಿಸ್ ಬ್ಯಾಂಕ್ 254, ಇಂಡಿಯನ್ ಬ್ಯಾಂಕ್ 314, ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ) 404, ಅಮರ ರಾಜ ಸಮೂಹ 405, ಕೊಟಕ್ ಮಹೀಂದ್ರ ಬ್ಯಾಂಕ್ 418, ಮತ್ತು ಬ್ಯಾಂಕ್ ಆಫ್ ಇಂಡಿಯಾ 451ರಲ್ಲಿದೆ. ಇನ್ನು ಐಟಿಸಿ, ಬ್ಯಾಂಕ್ ಆಫ್ ಬರೋಡಾ ಮತ್ತು ಸಿಪ್ಲಾ ಕ್ರಮವಾಗಿ 453, 460 ಮತ್ತು 496ನೇ ಸ್ಥಾನದಲ್ಲಿವೆ.
ಶ್ರೇಯಾಂಕಗಳು ಒಂದು ದೊಡ್ಡ-ಪ್ರಮಾಣದ ಸಮೀಕ್ಷೆಯನ್ನು ಆಧರಿಸಿವೆ. ಉದ್ಯೋಗಿಗಳು ತಮ್ಮ ಉದ್ಯೋಗದಾತರನ್ನು ಹಲವಾರು ಮಾನದಂಡಗಳಲ್ಲಿ ರೇಟ್ ಮಾಡಿದ್ದಾರೆ. ಇದು ಇಮೇಜ್ (ವರ್ಚಸ್ಸು), ಆರ್ಥಿಕ ಹೆಜ್ಜೆಗುರುತು, ಪ್ರತಿಭೆ ಅಭಿವೃದ್ಧಿ, ಲಿಂಗ ಸಮಾನತೆ, ಸಾಮಾಜಿಕ ಜವಾಬ್ದಾರಿ ಮತ್ತು ಸ್ನೇಹಿತರು ಹಾಗೂ ಕುಟುಂಬಕ್ಕೆ ತಮ್ಮ ಸ್ವಂತ ಉದ್ಯೋಗದಾತರನ್ನು ಶಿಫಾರಸು ಮಾಡುವ ಇಚ್ಛೆ ಮುಂತಾದ ಅಂಶಗಳ ಮೇಲೆ ಕಂಪನಿಗಳ ರೇಟಿಂಗ್‌ಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ 750 ಕಂಪೆನಿಗಳು ಇದ್ದು, ಹೆಚ್ಚಿನ ಅಂಕಗಳನ್ನು ಪಡೆದಿವೆ. ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿರುವ 58 ದೇಶಗಳ 1,50,000 ಪೂರ್ಣ ಸಮಯದ ಮತ್ತು ಅರೆಕಾಲಿಕ ಕೆಲಸಗಾರರನ್ನು ಫೋರ್ಬ್ಸ್ ಸಮೀಕ್ಷೆ ಮಾಡಿತ್ತು.
ಇದನ್ನೂ ಓದಿ: Top 10 Richest Indians: ಫೋರ್ಬ್ಸ್ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?