ಏಪ್ರಿಲ್​ನಲ್ಲಿ ಹಣದುಬ್ಬರ ಶೇ. 4.83ರಲ್ಲಿ; ಮಾರ್ಚ್​ಗಿಂತ ಅಲ್ಪ ಇಳಿಕೆ

|

Updated on: May 13, 2024 | 6:34 PM

Retail Inflation of 4.83pc in April 2024: ಮಾರ್ಚ್ ತಿಂಗಳಲ್ಲಿ ಶೇ. 4.85ರಷ್ಟಿದ್ದ ರೀಟೇಲ್ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಶೇ. 4.83ಕ್ಕೆ ಇಳಿದಿದೆ. ಹಲವು ಆರ್ಥಿಕ ತಜ್ಞರು ಮಾಡಿದ ಅಂದಾಜಿಗಿಂತಲೂ ಇದು ತುಸು ಹೆಚ್ಚಳವಾಗಿದೆ. ಆದರೆ, ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಆಗದಂತೆ ತಡೆಯಾಗಿದೆ. ಆದರೆ, ಕಳೆದ ಎಂಟು ತಿಂಗಳಿಂದಲೂ ರೀಟೇಲ್ ಹಣದುಬ್ಬರು ಆರ್​ಬಿಐ ನಿಗದಿ ಮಾಡಿದ ಶೇ. 2ರಿಂದ 6ರ ತಾಳಿಕೆ ಮಿತಿಯೊಳಗೆಯೇ ಮುಂದುವರಿದಿದೆ.

ಏಪ್ರಿಲ್​ನಲ್ಲಿ ಹಣದುಬ್ಬರ ಶೇ. 4.83ರಲ್ಲಿ; ಮಾರ್ಚ್​ಗಿಂತ ಅಲ್ಪ ಇಳಿಕೆ
ಹಣದುಬ್ಬರ
Follow us on

ನವದೆಹಲಿ, ಮೇ 13: ಭಾರತದ ರೀಟೇಲ್ ಹಣದುಬ್ಬರ (Retail Inflation) ಏಪ್ರಿಲ್ ತಿಂಗಳಲ್ಲಿ ಶೇ. 4.83ರಷ್ಟಿದೆ ಎಂದು ಕೇಂದ್ರ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಅಲ್ಪ ಇಳಿಕೆ ಆಗಿದೆ. ಕಳೆದ ತಿಂಗಳು ಹಣದುಬ್ಬರ ಶೇ. 4.85ರಷ್ಟಿತ್ತು. ಆದರೆ, ಏಪ್ರಿಲ್ ತಿಂಗಳ ಹಣದುಬ್ಬರ ನಿರೀಕ್ಷಿಸಿದ್ದಕ್ಕಿಂತ ತುಸು ಹೆಚ್ಚಿದೆ. ಹತ್ತಾರು ಆರ್ಥಿಕ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯಗಳ ಸರಾಸರಿ ನೋಡಿದಾಗ ಏಪ್ರಿಲ್​ನಲ್ಲಿ ಹಣದುಬ್ಬರ ಶೇ. 4.80ರಷ್ಟಿರಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕಿಂತ ತುಸು ಹೆಚ್ಚಿದೆ. ಆದರೆ, ಮಾರ್ಚ್​ಗಿಂತ ತುಸು ಕಡಿಮೆ ಇದೆ. ಹಾಗೆಯೇ, ಆರ್​ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ಕ್ಕಿಂತ ಕಡಿಮೆ ಇದೆ. ಕಳೆದ ಎಂಟು ತಿಂಗಳಿಂದಲೂ ಹಣದುಬ್ಬರ ದರವು ಈ ತಾಳಿಕೆಯ ಮಿತಿಯೊಳಗೆಯೇ ಇರುವುದು ಗಮನಾರ್ಹ.

ಆದರೆ, ಏಪ್ರಿಲ್​ನಲ್ಲಿ ಹಣದುಬ್ಬರ ಹೆಚ್ಚು ಇಳಿಯಲು ಪ್ರಮುಖವಾಗಿ ತಡೆಯಾಗಿದ್ದು ಆಹಾರ ವಸ್ತುಗಳ ಬೆಲೆ ಏರಿಕೆ. ಆಹಾರ ಮತ್ತು ಪಾನೀಯ ಬೆಲೆಗಳು ಮಾರ್ಚ್​ನಲ್ಲಿ ಶೇ. 7.68ರಷ್ಟು ಇದ್ದದ್ದು ಏಪ್ರಿಲ್​ನಲ್ಲಿ ಶೇ. 7.87ರಷ್ಟಕ್ಕೆ ಏರಿವೆ. ಆದರೆ, ಇಂಧನ ಹಣದುಬ್ಬರ ಕಡಿಮೆ ಆಗಿದ್ದರಿಂದ ಒಟ್ಟಾರೆ ರೀಟೇಲ್ ಹಣದುಬ್ಬರ ಮಾರ್ಚ್​ನದಕ್ಕಿಂತ ತುಸು ಕಡಿಮೆಗೊಳ್ಳಲು ಸಹಾಯಕವಾಗಿದೆ.

ತರಕಾರಿ ವಿಭಾಗದಲ್ಲಿ ಹಣದುಬ್ಬರ ತುಸು ಕಡಿಮೆ ಆಗಿದೆ. ಮಾರ್ಚ್​ನಲ್ಲಿ ಶೇ. 28.30ರಷ್ಟು ಇದ್ದದ್ದು ಶೇ. 27.80ಕ್ಕೆ ಇಳಿದಿದೆ. ಬೇಳೆ ಮತ್ತು ಕಾಳುಗಳ ಹಣದುಬ್ಬರ ಶೇ. 8.63 ಮತ್ತು ಶೇ. 16.84ರಷ್ಟಿರುವುದು ದಾಖಲಾಗಿದೆ.

ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ

ಮಾರ್ಚ್​ನಲ್ಲಿ ಶೇ. 6.36ರಷ್ಟಿದ್ದ ಮಾಂಸ ಮತ್ತು ಮೀನಿನ ಹಣದುಬ್ಬರ ಏಪ್ರಿಲ್​ನಲ್ಲಿ ಶೇ. 8.17ಕ್ಕೆ ಏರಿದೆ. ಹಣ್ಣಿನ ಬೆಲೆ ಶೇ. 3.07ರಷ್ಟು ಇದ್ದದ್ದು ಶೇ. 5.22ಕ್ಕೆ ಏರಿದೆ. ಒಟ್ಟಾರೆ, ಆಹಾರ ಬೆಲೆ ಹೊರತಪಡಿಸಿ ಬಹುತೇಕ ಉಳಿದ ಬೆಲೆಸೂಚಿಗಳು ನಿಯಂತ್ರಣಕ್ಕೆ ಬಂದಿವೆ.

ಸರ್ಕಾರ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಗುರಿ ಹೊಂದಿದೆ. ಆರ್​ಬಿಐ ಈ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ 6ರೊಳಗೆ ಹಣದುಬ್ಬರ ಇರಬೇಕೆಂದು ಗುರಿ ಇಟ್ಟಿದೆ. ಈ ತಾಳಿಕೆ ಮಿತಿಯಿಂದ ಹಣದುಬ್ಬರ ಹೊರಹೋಗದಂತೆ ಎಚ್ಚರ ವಹಿಸಲಾಗುತ್ತಿದೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಬಡ್ಡಿದರ ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ