ನವದೆಹಲಿ, ಮೇ 13: ಷೇರು ಮಾರುಕಟ್ಟೆ (stock market) ಇತ್ತೀಚೆಗೆ ಸತತವಾಗಿ ಕುಸಿಯುತ್ತಿದೆ. ಬಹಳಷ್ಟು ಜನರು ಈ ಇಳಿಕೆಯ ಟ್ರೆಂಡ್ ಅನ್ನು ಲೋಕಸಭಾ ಚುನಾವಣೆಗೆ ಲಿಂಕ್ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದು ಇದಕ್ಕೆ ಕಾರಣ ಇರಬಹುದು ಎಂಬುದು ಕೆಲವರ ಭಾವನೆ. ಎನ್ಡಿಎ ಮೈತ್ರಿಕೂಟ 300ಕ್ಕಿಂತ ಕಡಿಮೆ ಸ್ಥಾನ ಪಡೆಯುವ ಸಾಧ್ಯತೆ ಎನ್ನುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಕುಸಿತವಾಗುತ್ತಿರಬಹುದು ಎನ್ನಲಾಗುತ್ತಿದೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಈ ಷೇರು ಕುಸಿತಕ್ಕೂ ಲೋಕಸಭಾ ಚುನಾವಣೆಗೂ ಲಿಂಕ್ ಮಾಡಲು ನಿರಾಕರಿಸಿದ್ದಾರೆ. ಈ ಹಿಂದೆ ಷೇರು ಮಾರುಕಟ್ಟೆ ಇದಕ್ಕಿಂತ ಹೆಚ್ಚು ಕುಸಿತ ಕಂಡಿದ್ದಿದೆ. ಈಗ ಕುಸಿಯುತ್ತಿರುವುದು ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ಅಮಿತ್ ಶಾ, ಹೂಡಿಕೆದಾರರಿಗೆ ಟಿಪ್ಸ್ ಕೊಡಲು ಮರೆಯಲಿಲ್ಲ.
ವದಂತಿಗಳು ಏನೇ ಇರಲಿ. ಷೇರುಬೆಲೆ ಕುಸಿಯುತ್ತಿರುವ ಹೊತ್ತಿನಲ್ಲಿ ಖರೀದಿಸಿರಿ. ಜೂನ್ 4ರ ಬಳಿಕ ಷೇರುಬೆಲೆ ಭರ್ಜರಿಯಾಗಿ ಏರಲಿದೆ ಎಂದು ಅಮಿತ್ ಶಾ ಹೇಳಿದರೆಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ
ಈ ಮೇ ತಿಂಗಳಲ್ಲಿ ನಿನ್ನೆಯವರೆಗೂ ಸೆನ್ಸೆಕ್ಸ್ ಶೇ. 4ರಷ್ಟು ಕುಸಿತ ಕಂಡಿತ್ತು. ನಿಫ್ಟಿ ಕೂಡ ಗಣನೀಯವಾಗಿ ಇಳಿದಿತ್ತು. ಇವತ್ತು ಬೆಳಗ್ಗೆಯೂ ವಿವಿಧ ಸೂಚ್ಯಂಕಗಳು ಪ್ರಪಾತಕ್ಕೆ ಹೋಗುವ ಕುರುಹು ತೋರಿದ್ದವರಾದರೂ ದಿನಾಂತ್ಯದ ವೇಳೆಗೆ ಬಹಳಷ್ಟು ಚೇತರಿಸಿಕೊಂಡಿವೆ.
‘ಬೇರೆ ಬೇರೆ ಕಾರಣಗಳಿಗೆ ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳಾಗುತ್ತಿರುತ್ತವೆ. ಆದರೆ, ನನ್ನ ಈ ಮಾತನ್ನು ಗಮನಿಸಿ. ಜೂನ್ 4ರಂದು ಷೇರು ಮಾರುಕಟ್ಟೆ ಮತ್ತೊಮ್ಮೆ ಹೊಸ ದಾಖಲೆ ಬರೆಯಲಿದೆ,’ ಎಂದು ಕೇಂದ್ರ ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
‘ಕೇಂದ್ರದಲ್ಲಿ ಸ್ಥಿರ ಸರ್ಕಾರ ಬಂದಾಗೆಲ್ಲಾ ಮಾರುಕಟ್ಟೆ ಉತ್ತಮವಾಗಿರುತ್ತದೆ. ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಮರಳುತ್ತಿದ್ದಾರೆ. ಇದು ನಾನು ನುಡಿಯುತ್ತಿರುವ ಭವಿಷ್ಯ.
ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ ಮಧ್ಯೆ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆದ ಬೆಂಗಳೂರಿನ ಇಂಡಿಜೀನ್ ಷೇರು
‘ಇವತ್ತು ನಾಲ್ಕನೇ ಹಂತದ ಚುನಾವಣೆ ಇದೆ. ಮೂರು ಹಂತದ ಚುನಾವಣೆಗಳಲ್ಲಿ ಬಿಜೆಪಿ 190ಕ್ಕೂ ಹೆಚ್ಚು ಸ್ಥಾನ ಗಳಿಸಬಹುದು ಎಂದು ಭಾವಿಸಿದ್ದೇನೆ. ಇವತ್ತಿನ ನಾಲ್ಕನೇ ಹಂತದ ಚುನಾವಣೆಯಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ಸಿಗಬಹುದು. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಬಹುದು ಎಂದು ಎಣಿಸಿದ್ದೇನೆ. ಈಶಾನ್ಯದಲ್ಲೂ ಉತ್ತಮ ಫಲಿತಾಂಶ ಸಿಗಬಹುದು,’ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ