ಷೇರುಪೇಟೆ ರಕ್ತದೋಕುಳಿ ಮಧ್ಯೆ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆದ ಬೆಂಗಳೂರಿನ ಇಂಡಿಜೀನ್ ಷೇರು
Indegene listed for higher price at BSE: ಬೆಂಗಳೂರಿನ ಇಂಡಿಜೀನ್ ಸಂಸ್ಥೆ ಐಪಿಒದಲ್ಲಿಗಿಂತ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಬಿಎಸ್ಇಯಲ್ಲಿ ಲಿಸ್ಟ್ ಆಗಿದೆ. ಮೇ 6ರಿಂದ 8ರವರೆಗೆ ನಡೆದಿದ್ದ ಐಪಿಒದಲ್ಲಿ ಅದು 452 ರೂನಂತೆ ಮಾರಾಟವಾಗಿತ್ತು. ಮೇ 13, ಇಂದು ಅದು 659.7 ರೂಗೆ ಲಿಸ್ಟ್ ಆಗಿದೆ. ಶುಕ್ರವಾರ ಮುಕ್ತಾಯಗೊಂಡಿದ್ದ ಆಧಾರ್ ಹೌಸಿಂಗ್ ಫೈನಾನ್ಸ್ ಮತ್ತು ಟಿಬಿಎ ಟೆಕ್ ಐಪಿಒಗಳಿಗೆ ಅರ್ಜಿ ಸಲ್ಲಿಸಿದವರಿಗೆ ಇಂದು ಷೇರು ಅಲಾಟ್ಮೆಂಟ್ ನಡೆಯಲಿದೆ. ಇವೆರಡು ಐಪಿಒಗಳಿಗೂ ಉತ್ತಮ ಪ್ರತಿಕ್ರಿಯೆ ಬಂದಿದೆ.
ಮುಂಬೈ, ಮೇ 13: ಬೆಂಗಳೂರು ಮೂಲದ ಹೆಲ್ತ್ಕೇರ್ ಟೆಕ್ನಾಲಜಿ ಸಂಸ್ಥೆಯಾದ ಇಂಡಿಜೀನ್ (Indegene) ಇಂದು ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. ಬಿಎಸ್ಇ ಷೇರು ವಿನಿಮಯ ಕೇಂದ್ರದಲ್ಲಿ ಇಂಡಿಜೀನ್ ಷೇರು ಲಿಸ್ಟ್ ಆಗಿದೆ. ಐಪಿಒದಲ್ಲಿ 452 ರೂಗೆ ಬಿಕರಿಯಾಗಿದ್ದ ಇಂಡಿಜೀನ್ ಷೇರು ಇಂದು ಸೋಮವಾರ 659.7 ರೂ ಬೆಲೆ ಪಡೆದು ಲಿಸ್ಟ್ ಆಗಿದೆ. ಅಂದರೆ ಐಪಿಒ ಬೆಲೆಗಿಂತ ಶೇ. 45ರಷ್ಟು ಹೆಚ್ಚಿನ ಬೆಲೆ ಪಡೆದಿದೆ. ಅದಾದ ಬಳಿಕ ಅದರ ಷೇರುಬೆಲೆ ಶೇ. 10ರಷ್ಟು ಇಳಿಕೆಯಾಗಿ 594 ರೂ ಬೆಲೆಯಲ್ಲಿ ಮುಂದುವರಿದಿರುವುದು ಗೊತ್ತಾಗಿದೆ. ಕಳೆದ ವಾರದಿಂದ ಷೇರು ಮಾರುಕಟ್ಟೆ ಬಹಳಷ್ಟು ಕುಸಿಯುತ್ತಿದ್ದರೂ ಇಂಡಿಜೀನ್ ಷೇರು ಉತ್ತಮ ಬೇಡಿಕೆ ಪಡೆದದ್ದು ಗಮನಾರ್ಹ ಸಂಗತಿ.
ಲಿಸ್ಟ್ ಆದ ಬಳಿಕ ಷೇರುಬೆಲೆ ಯಾಕೆ ಕುಸಿಯಿತು?
ಹೆಚ್ಚಿನ ಜನರು ಐಪಿಒಗಳಲ್ಲಿ ಷೇರುಗಳನ್ನು ಖರೀದಿಸುವುದು ಲಿಸ್ಟಿಂಗ್ ಲಾಭಕ್ಕಾಗಿ. ಉತ್ತಮ ಜಿಎಂಪಿ ಇರುವ ಯಾವುದೇ ಕಂಪನಿಯ ಐಪಿಒವನ್ನು ಖರೀದಿಸಿದರೆ ಹೆಚ್ಚಿನ ಬೆಲೆಗೆ ಲಿಸ್ಟ್ ಆಗುತ್ತದೆ. ಹೆಚ್ಚಿನ ಷೇರುಗಳನ್ನು ಮಾರಿ ಲಾಭ ಮಾಡಿಕೊಳ್ಳುವ ತಂತ್ರವನ್ನು ಹಲವು ಹೂಡಿಕೆದಾರರು ಮಾಡುತ್ತಾರೆ. ಇಂಡಿಜೀನ್ ವಿಚಾರದಲ್ಲೂ ಅದೇ ಆಗಿರಬಹುದು. ಇನ್ನೂ ಕೆಲ ದಿನ ಷೇರು ಬೆಲೆ ಇಳಿದು ಐಪಿಒ ಬೆಲೆಗೆ ಹೋದರೂ ಅಚ್ಚರಿ ಇಲ್ಲ. ಆದರೆ, ಹೆಚ್ಚಿನ ಬ್ರೋಕರೇಜ್ ಸಂಸ್ಥೆಗಳು ಇಂಡಿಜೀನ್ಗೆ ಪಾಸಿಟಿವ್ ರೇಟಿಂಗ್ ಕೊಟ್ಟಿವೆ.
ಇದನ್ನೂ ಓದಿ: ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ
1,841.75 ಕೋಟಿ ರೂ ಮೊತ್ತದ ಇಂಡಿಜೀನ್ ಐಪಿಒ
ಬೆಂಗಳೂರಿನ ಇಂಡಿಜೀನ್ ಸಂಸ್ಥೆ ಮೇ 6ರಿಂದ 8ರವರೆಗೆ ಸಾರ್ವಜನಿಕ ಆರಂಭಿಕ ಕೊಡುಗೆ ಅಥವಾ ಐಪಿಒ ಆರಂಭಿಸಿತು. ಎರಡು ಕೋಟಿಗೂ ಹೆಚ್ಚು ಷೇರುಗಳನ್ನು 430-452 ರೂ ಶ್ರೇಣಿಯಲ್ಲಿ ಐಪಿಒದಲ್ಲಿ ಮಾರಾಟಕ್ಕಿಡಲಾಯಿತು. ಬರೋಬ್ಬರಿ 69.71 ಪಟ್ಟು ಹೆಚ್ಚು ಜನರು ಇದನ್ನು ಖರೀದಿಸಲು ಪ್ರಯತ್ನಿಸಿದ್ದರು. ಶುಕ್ರವಾರ ಇಂಡಿಜೀನ್ನ ಜಿಎಂಪಿ ಶೇ. 65ರಷ್ಟು ಇತ್ತು. ಅಂದರೆ ಶೇ. 65ರಷ್ಟು ಹೆಚ್ಚಿನ ಬೆಲೆಗೆ ಇದು ಲಿಸ್ಟ್ ಆಗಬಹುದು ಎನ್ನುವ ಸುಳಿವಿತ್ತು. ಅಂತಿಮವಾಗಿ ಶೇ. 45ರಷ್ಟು ಹೆಚ್ಚಿನ ಮೌಲ್ಯ ಪಡೆದು ಲಿಸ್ಟ್ ಆಗಿದೆ ಇಂಡಿಜೀನ್.
ಏನಿದು ಜಿಎಂಪಿ?
ಜಿಎಂಪಿ ಎಂದರೆ ಗ್ರೇ ಮಾರ್ಕೆಟ್ ಪ್ರೀಮಿಯಮ್. ಇದು ಅನಧಿಕೃತ ಮಾರುಕಟ್ಟೆ. ಒಂದು ಕಂಪನಿಯ ಐಪಿಒಗೆ ಎಷ್ಟು ಬೇಡಿಕೆ ಇದೆ ಎಂಬುದರ ಸುಳಿವನ್ನು ಇದು ನೀಡುತ್ತದೆ. ಐಪಿಒ ಎಂಬುದು ಸೆಬಿ ನಿಯಮಾವಳಿಗೆ ಒಳಪಟ್ಟ ಕ್ರಮ. ಆದರೆ, ಐಪಿಒಗೆ ಸಲ್ಲಿಸಲಾಗುವ ಅರ್ಜಿ ಮತ್ತು ಅಲಾಟ್ ಆಗಿರುವ ಷೇರು ಇವುಗಳಿಗೆ ಅನಧಿಕೃತ ಮಾರುಕಟ್ಟೆಯಲ್ಲಿ (ಬ್ಲ್ಯಾಕ್ ಮಾರ್ಕೆಟ್, ಗ್ರೇ ಮಾರ್ಕೆಟ್ ಎನ್ನಲಡ್ಡಿ ಇಲ್ಲ) ಬೇಡಿಕೆ ಎಷ್ಟಿದೆ ಎಂಬುದರ ಮೇಲೆ ಜಿಎಂಪಿ ನಿರ್ಧಾರವಾಗುತ್ತದೆ. ಈ ಗ್ರೇ ಮಾರ್ಕೆಟ್ನಲ್ಲಿ ಷೇರುಗಳನ್ನು ವೈಯಕ್ತಿಕವಾಗಿ ಕ್ಯಾಷ್ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲಿ ಇದು ಎಷ್ಟು ಬೆಲೆ ಪಡೆದುಕೊಳ್ಳುತ್ತದೆ ಎಂಬುದೇ ಜಿಎಂಪಿ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ಗಳನ್ನು ಹೊಂದಿರಬಹುದಾ? ಅನುಕೂಲ, ಅನನುಕೂಲಗಳೇನು?
ಇದು ಅನಧಿಕೃತ ಮಾರುಕಟ್ಟೆಯ ನಾಡಿಯಾದ್ದರಿಂದ ಅಧಿಕೃತ ಷೇರುಪೇಟೆಯಲ್ಲೂ ಅಷ್ಟೇ ಡಿಮ್ಯಾಂಡ್ ಹೊಂದಿರುತ್ತದೆ ಎಂಬುದು ಖಾತ್ರಿ ಇರುವುದಿಲ್ಲ. ಐಪಿಒ ವೇಳೆ ಬಹಳ ಕಡಿಮೆ ಜಿಎಂಪಿ ಇದ್ದ ಭಾರ್ತಿ ಹೆಕ್ಸಾಕಾಮ್ ಮೊದಲಾದ ಕಂಪನಿಗಳ ಷೇರು ಬಹಳ ಅಧಿಕ ಬೆಲೆಗೆ ಲಿಸ್ಟ್ ಆಗಿರುವುದು ಕಣ್ಮುಂದೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ