ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ
Watch the stocks that Amit Shah has shareholding: ಅಮಿತ್ ಶಾ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಷನ್ ಕಮಿಷನ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ಆಸ್ತಿಪಾಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಅಮಿತ್ ಶಾ 180 ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಅವರ 17.46 ಕೋಟಿ ರೂ ಷೇರು ಸಂಪತ್ತು ಇದೆ. ಅವರ ಪತ್ನಿ ಸೋನಾಲ್ 80 ಕಂಪನಿಗಳ ಷೇರುಗಳಲ್ಲಿ ಮಾಡಿರುವ ಹೂಡಿಕೆ 20 ಕೋಟಿ ರೂನಷ್ಟಿದೆ. ಇಬ್ಬರೂ ಸೇರಿ 250ಕ್ಕೂ ಹೆಚ್ಚು ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಪೈಕಿ ಅವರ ಹೆಚ್ಚಿನ ಸಂಪತ್ತು ಸುಮಾರು 20 ಕಂಪನಿಗಳಲ್ಲಿ ಎಂಬುದು ಅಫಿಡವಿಟ್ನಿಂದ ತಿಳಿದುಬರುತ್ತದೆ.
ನವದೆಹಲಿ, ಏಪ್ರಿಲ್ 22: ರಾಹುಲ್ ಗಾಂಧಿ ಅವರ ಹೂಡಿಕೆ ವಿವರ ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿಯಾಗಿತ್ತು. ಬಿಜೆಪಿಯ ತೇಜಸ್ವಿ ಸೂರ್ಯ ಕೂಡ ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಬಹಳಷ್ಟು ಜನರ ಗಮನ ಸೆಳೆದಿರುವುದು ಅಮಿತ್ ಶಾ ಅವರ ಹೂಡಿಕೆ. ಅಮಿತ್ ಶಾ ಹಾಗೂ ಅವರ ಪತ್ನಿ (Sonal and Amit Shah) ಇಬ್ಬರೂ ಸೇರಿ 250ಕ್ಕೂ ಹೆಚ್ಚು ಷೇರುಗಳನ್ನು ಬಹಳ ಯೋಚಿಸಿ ಹೂಡಿಕೆಗೆ ಆಯ್ದುಕೊಂಡಂತಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಅಮಿತ್ ಶಾ ತಾನು 180 ಕಂಪನಿಗಳ ಷೇರುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಪತ್ನಿ ಸೋನಾಲ್ ಷಾ ಸುಮಾರು 80 ಕಂಪನಿಗಳ ಷೇರುಗಳನ್ನು ಖರೀದಿಸಿದ್ದಾರೆ. ಅಮಿತ್ ಶಾ ಅವರ ಷೇರು ಸಂಪತ್ತಿನ ಇವತ್ತಿನ ಮೌಲ್ಯ 17.46 ಕೋಟಿ ರೂ ಆಗುತ್ತದೆ. ಅವರ ಪತ್ನಿಯ ಷೇರುಸಂಪತ್ತು ಅಂದಾಜು 20 ಕೋಟಿ ಆಗುತ್ತದೆ. ಇಬ್ಬರೂ ಸೇರಿ ಹೊಂದಿರುವ ಷೇರುಸಂಪತ್ತು 40 ಕೋಟಿ ರೂ ಸಮೀಪ ಇದೆ.
ಅಮಿತ್ ಶಾ ದಂಪತಿ ಒಟ್ಟು ಸುಮಾರು 250 ಕಂಪನಿಗಳ ಷೇರುಗಳ ಮೇಲೆ ಹಣ ತೊಡಗಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಷೇರುಗಳೆಂದು ಸುಮಾರು 20 ಕಂಪನಿಗಳನ್ನು ಗುರುತಿಸಬಹುದು. ಇವರು ಒಂದು ಕೋಟಿ ರೂಗೂ ಹೆಚ್ಚು ಷೇರು ಸಂಪತ್ತು ಹೊಂದಿರುವ ಕಂಪನಿಗಳು ಹತ್ತು ಇವೆ.
ಸೋನಾಲ್ ಮತ್ತು ಅಮಿತ್ ಶಾ ಷೇರುಪಾಲು ಹೊಂದಿರುವ ಪ್ರಮುಖ 10 ಕಂಪನಿಗಳು
- ಕೆನರಾ ಬ್ಯಾಂಕ್
- ಪ್ರಾಕ್ಟರ್ ಅಂಡ್ ಗ್ಯಾಂಬಲ್
- ಕರೂರ್ ವೈಸ್ಯ ಬ್ಯಾಂಕ್
- ಗುಜರಾತ್ ಫ್ಲೋರೋಕೆಮಿಕಲ್ಸ್
- ಲಕ್ಷ್ಮೀ ಮೆಷಿನ್ ವರ್ಕ್ಸ್
- ಹಿಂದೂಸ್ತಾನ್ ಯುನಿಲಿವರ್ ಲಿ
- ಎಂಆರ್ಎಫ್
- ಭಾರ್ತಿ ಏರ್ಟೆಲ್
- ಕೋಲ್ಗೇಟ್ ಪಾಲ್ಮೋಲಿವ್
- ಸನ್ ಫಾರ್ಮಾ
ಇದನ್ನೂ ಓದಿ: ಡಿವಿಡೆಂಡ್ನಿಂದಲೇ 4 ಕೋಟಿ ರೂ ಗಳಿಸಿದ ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರ
ಈ ಮೇಲಿನವು ಅಮಿತ್ ಶಾ ಮತ್ತು ಸೋನಾಲ್ ಶಾ ಇಬ್ಬರೂ ಸೇರಿ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಕಂಪನಿಗಳ ಪಟ್ಟಿ. ಅಮಿತ್ ಶಾ ಅವರ ಹೂಡಿಕೆಯನ್ನು ವೈಯಕ್ತಿಕವಾಗಿ ಗಮನಿಸಿದರೆ ಹಿಂದೂಸ್ತಾನ್ ಯುನಿಲಿವರ್, ಎಂಆರ್ಎಫ್, ಪ್ರಾಕ್ಟರ್ ಅಂಡ್ ಗ್ಯಾಂಬಲ್, ಎಬಿಬಿ ಇಂಡಿಯಾ ಕಂಪನಿಯ ಷೇರುಗಳಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಹಣ ಇರಿಸಿದ್ದಾರೆ.
ಐಟಿಸಿ, ವಿಐಪಿ ಇಂಡಸ್ಟ್ರೀಸ್, ಇನ್ಫೋಸಿಸ್, ಗ್ರೈಂಡ್ವೆಲ್ ನಾರ್ಟನ್, ಕಮಿನ್ಸ್ ಇಂಡಿಯಾ, ಕಾನ್ಸಾಯ್ ನೆರೋಲಾಕ್ ಪೈಂಟ್ಸ್ ಕಂಪನಿಗಳ ಷೇರಿನ ಮೇಲೂ ಹಣ ಇರಿಸಿದ್ದಾರೆ.
ಕುತೂಹಲ ಎಂದರೆ ಸೋನಾಲ್ ಮತ್ತು ಅಮಿತ್ ಶಾ ಅವರ ಅತಿಹೆಚ್ಚು ಹೂಡಿಕೆ ಇರುವ ಪ್ರಮುಖ ಷೇರುಗಳೆಲ್ಲವೂ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿವೆ. ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿವೆ.
ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಅಮಿತ್ ಶಾ ಅವರ ಇತರ ಆಸ್ತಿ ವಿವರ
ಅಮಿತ್ ಶಾ ಬಳಿ ಇರುವ ಚರಾಸ್ತಿ 20.23 ಕೋಟಿ ರೂ. ಅವರ ಪತ್ನಿ ಸೋನಾಲ್ ಬಳಿ ಇರುವ ಚರಾಸ್ತಿ 22.5 ಕೋಟಿ ರೂ. ಇದರಲ್ಲಿ ಬ್ಯಾಂಕ್ ಡೆಪಾಸಿಟ್, ಚಿನ್ನ, ಬೆಳ್ಳಿ, ಪಿತ್ರಾರ್ಜಿತ ಆಸ್ತಿಗಳು ಸೇರಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Mon, 22 April 24