ಲಂಡನ್: ಎಲಾನ್ ಮಸ್ಕ್ ಅವರನ್ನೂ ಮೀರಿಸಿ ವಿಶ್ವದ ಅತಿಶ್ರೀಮಂತ ವ್ಯಕ್ತಿ ಎನಿಸಿರುವ ಫ್ರೆಂಚ್ ಉದ್ಯಮಿ ಬರ್ನಾಡ್ ಆರ್ನಾಲ್ಟ್ (Bernard Arnault) ಒಂದೇ ದಿನದಲ್ಲಿ 11.2 ಬಿಲಿಯನ್ ಡಾಲರ್ ಸಂಪತ್ತು ನಷ್ಟ ಕಳೆದುಕೊಂಡಿದ್ದಾರೆ. ಅಂದರೆ 92,000 ಕೋಟಿ ರುಪಾಯಿಗೂ ಹೆಚ್ಚು. ಇದು ಪಾಕಿಸ್ತಾನಕ್ಕೆ ಐಎಂಎಫ್ ಕೊಡಬೇಕೆಂದಿರುವ ಸಾಲದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಎನ್ನಲಡ್ಡಿ ಇಲ್ಲ. ಭಾರತದ ಗೌತಮ್ ಅದಾನಿ ಹಿಂಡನ್ಬರ್ಗ್ ವರದಿ ಬಳಿಕ ಕಳೆದುಕೊಂಡ ಸಂಪತ್ತಿಗೆ ಹೋಲಿಸಿದರೆ ಆರ್ನಾಲ್ಟ್ಗೆ ಆದ ನಷ್ಟ ಕಡಿಮೆ ಆದರೂ ಲಕ್ಷ ಕೋಟಿ ಸಮೀಪದ ಹಣ ಎಂದರೆ ಸಾಧಾರಣ ಮೊತ್ತವಲ್ಲ.
ಅಮೆರಿಕದಲ್ಲಿ ಶೀತ ಆದರೆ ವಿಶ್ವದ ವಿವಿಧೆಡೆ ನೆಗಡಿ ಆಗುತ್ತದೆ. ಹಾಗೆಯೇ, ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಅವರು 11.2 ಬಿಲಿಯನ್ ಡಾಲರ್ ಸಂಪತ್ತು ಕರಗಿಹೋಗಲು ಕಾರಣವಾಗಿದ್ದು ಅಮೆರಿಕದಲ್ಲಿನ ಬೆಳವಣಿಗೆ. ಅಮೆರಿಕದ ಆರ್ಥಿಕತೆಯ ಬೆಳವಣಿಗೆ ಮಂದಗೊಂಡಿರುವುದರಿಂದ ಲಕ್ಷುರಿ ವಸ್ತುಗಳಿಗೆ ಬೇಡಿಕೆ ಕಡಿಮೆ ಆಗಬಹುದು ಎನ್ನುವಂತಹ ಆತಂಕ ಇದೆ. ಆರ್ನಾಲ್ಟ್ ಅವರದ್ದು ಫ್ಯಾಷನ್ ವಸ್ತುಗಳ ಬಹುದೊಡ್ಡ ಉದ್ಯಮವೇ ಇದೆ. ಇವರದ್ದು ವಿಶ್ವದ ಅತಿದೊಡ್ಡ ಲಕ್ಷುರಿ ವಸ್ತುಗಳ ಕಂಪನಿ. ಭೋಗ ದೇಶವಾದ ಅಮೆರಿಕವು ಆರ್ನಾಲ್ಟ್ ಅವರ ಲೂಯಿಸ್ ವ್ಯೂಟನ್ ಇತ್ಯಾದಿ ವಸ್ತುಗಳ ಬಹುದೊಡ್ಡ ಮಾರುಕಟ್ಟೆ. ಹೀಗಾಗಿ, ಅಲ್ಲಿ ಆರ್ಥಿಕ ಹಿಂಜರಿತವಾದರೆ ಮೊದಲು ಹೊಡೆತ ಬೀಳುವುದು ಐಷಾರಾಮಿ ವಸ್ತುಗಳಿಗೆ. ಹೀಗಾಗಿ, ಎಲ್ವಿಎಂಎಚ್ನ ಷೇರು ಮೌಲ್ಯ ನಿನ್ನೆ (ಮೇ 23) ಒಂದೇ ದಿನದಲ್ಲಿ ತೀರಾ ಕುಸಿದುಹೋಗಿದೆ.
ಇದನ್ನೂ ಓದಿ: Wistron: ಐಫೋನ್ ಸಹವಾಸ ಬಿಟ್ಟ ವಿಸ್ಟ್ರಾನ್; ಕೋಲಾರದಲ್ಲಿ ಘಟಕ ಹೊಂದಿದ್ದ ತೈವಾನೀ ಕಂಪನಿ ದೇಶ ಬಿಟ್ಟು ಹೋಗಿದ್ಯಾಕೆ?
ಎಲ್ವಿಎಂಎಚ್ ಮಾತ್ರವಲ್ಲ ಯೂರೋಪ್ನ ಲಕ್ಷುರಿ ವಸ್ತುಗಳ ಇಡೀ ಉದ್ಯಮವೇ ಷೇರುಪೇಟೆಯಲ್ಲಿ ಹಿನ್ನಡೆ ಅನುಭವಿಸಿದೆ. ಈ ವಲಯವು ಕಳೆದುಕೊಂಡ ಒಟ್ಟಾರೆ ಷೇರು ಸಂಪತ್ತು ಬರೋಬ್ಬರಿ 30 ಬಿಲಿಯನ್ ಡಾಲರ್. ಅಂದರೆ ಸುಮಾರು 2.5 ಲಕ್ಷ ಕೋಟಿ ರೂ.
ಈಗ 11.2 ಬಿಲಿಯನ್ ಡಾಲರ್ ಮೌಲ್ಯದ ಷೇರುಸಂಪತ್ತು ಕರಗಿಹೋದರೂ ಬರ್ನಾರ್ಡ್ ಆರ್ನಾಲ್ಟ್ ಅವರ ಶ್ರೀಮಂತಿಕೆ ಸ್ಥಾನಕ್ಕೆ ಸದ್ಯಕ್ಕೆ ಚ್ಯುತಿ ಇಲ್ಲ. ಇವರ ಒಟ್ಟು ಷೇರುಸಂಪತ್ತು 191.6 ಬಿಲಿಯನ್ ಡಾಲರ್ ಇದೆ. ಈ ವರ್ಷ ಹೆಚ್ಚೂಕಡಿಮೆ 30 ಬಿಲಿಯನ್ ಡಾಲರ್ನಷ್ಟು ಷೇರುಸಂಪತ್ತು ಹೆಚ್ಚಿದ್ದರಿಂದ ಬರ್ನಾರ್ಡ್ಗೆ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ.
ಬಹಳ ದಿನ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೂ ಮತ್ತು ಬರ್ನಾರ್ಡ್ಗೂ ಇರುವ ಷೇರುಸಂಪತ್ತಿನ ಅಂತರ ಕೇವಲ 11.4 ಬಿಲಿಯನ್ ಡಾಲರ್ ಮಾತ್ರ. ಹೀಗಾಗಿ, ಟಾಪ್ನಲ್ಲಿ ಸ್ಪರ್ಧೆ ಈಗ ಕುತೂಹಲ ಮೂಡಿಸಿದೆ.