ಎಸ್.ಎಂ. ಕೃಷ್ಣ ಎಂದರೆ ಥಟ್ಟನೆ ನೆನಪಾಗುವುದು ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ನಗರ. ವಿದೇಶಾಂಗ ಸಚಿವರಾದರೂ ಕೃಷ್ಣರನ್ನು ಬದಲಾವಣೆಗಳ ಹರಿಕಾರ ಎಂದೇ ಬೆಂಗಳೂರಿಗರು ನೆನಪಿಸಿಕೊಳ್ಳುತ್ತಾರೆ. ಹಲವು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ ಎಸ್.ಎಂ. ಕೃಷ್ಣ ಮಾಸ್ ಲೀಡರ್ ಎಂದನಿಸಿದ್ದು ಮುಖ್ಯಮಂತ್ರಿ ಅದ ಬಳಿಕವೇ. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಎಂ ಹುದ್ದೆ ನಿರ್ವಹಿಸತೊಡಗಿದ ಅವರು, ಸಿಂಗಾಪುರದ ರೀತಿಯಲ್ಲಿ ಬೆಂಗಳೂರನ್ನು ಮಾರ್ಪಡಿಸಲು ಆಗದೇ ಇದ್ದರೂ ಆ ನಿಟ್ಟಿನಲ್ಲಿ ಕಾಯಕಲ್ಪಗಳನ್ನು ನಿರ್ಮಿಸುವ ಕೆಲಸ ಮಾಡಿದ್ದು ಹೌದು.
ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಎಸ್.ಎಂ. ಕೃಷ್ಣ ಉಪಮುಖ್ಯಮಂತ್ರಿಯಾಗಿದ್ದರು. ಆದರೆ, ಅವರು ಹೆಚ್ಚಾಗಿ ನೆನಪಾಗುವುದು ಸಿಎಂ ಆಗಿ ಮಾಡಿದ ಕಾರ್ಯಗಳಿಂದ. 1999ರಿಂದ 2004ರವರೆಗೆ ಅವರು ಸಿಎಂ ಆಗಿದ್ದಾಗ ರಾಜ್ಯದ ಅಭಿವೃದ್ಧಿ ಕಾರ್ಯ ಚುರುಕುಗೊಂಡಿತು. ಅದರಲ್ಲೂ ಬೆಂಗಳೂರಿಗೆ ಕೃಷ್ಣ ಹೆಚ್ಚು ಮುತುವರ್ಜಿ ತೋರಿದರು. ಅದರ ಪರಿಣಾಮವಾಗಿ ಇಂದು ಬೆಂಗಳೂರು ನಗರವು ಸಿಲಿಕಾನ್ ಸಿಟಿ, ಐಟಿ-ಬಿಟಿ ಸಿಟಿ ಎನಿಸಿದೆ.
ಮದ್ದೂರಿನಲ್ಲಿ ಹುಟ್ಟಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ಡಲ್ಲಾಸ್ ಮತ್ತು ವಾಷಿಂಗ್ಟನ್ನಲ್ಲಿ ಉನ್ನತ ವ್ಯಾಸಂಗ ಮಾಡಿದವರಾಗಿದ್ದರು. ಹೀಗಾಗಿ, ಅವರ ಆಡಳಿತದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆ ಉಳಿಸಿಕೊಳ್ಳಲು ಅವರು ತಮ್ಮ ಕೈಲಾದ ಕಾರ್ಯಗಳನ್ನು ಮಾಡಿದ್ದರು. ಅವರ ಕಾರ್ಯಗಳಲ್ಲಿ ಹೆಚ್ಚಾಗಿ ನೆನಪುಳಿಯುವುದು ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಕೆಲಸ.
ಇದನ್ನೂ ಓದಿ: ಎಸ್ಎಂ ಕೃಷ್ಣ ಸುದೀರ್ಘ ರಾಜಕೀಯ ಜೀವನದ ಹಿನ್ನೋಟ
ಉದ್ಯಮಗಳಿಗೆ ಇದ್ದ ನಿಯಮಗಳನ್ನು ಸಡಿಲಿಸಿದರು. ಟ್ಯಾಕ್ಸ್ ಇನ್ಸೆಂಟಿವ್ಗಳನ್ನು ನೀಡಿದರು. ಈ ನೀತಿಗಳಿಗೆ ಉದ್ಯಮ ವಲಯದಲ್ಲಿ ಮನ್ನಣೆ ಸಿಕ್ಕಿತು. ಹಲವು ಐಟಿ ಬಿಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆ ಕಾಣಲು ಈ ನೀತಿಗಳೇ ಕಾರಣವಾದವು. ಈ ಮೂಲಕ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Tue, 10 December 24