PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ

| Updated By: Srinivas Mata

Updated on: Jan 04, 2022 | 5:12 PM

ಆಧಾರ್ ಜೊತೆಗೆ ಪ್ಯಾನ್ ಜೋಡಣೆ ಮಾಡಲು ವಿಫಲವಾದಲ್ಲಿ 10 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇದಕ್ಕೆ ಗಡುವು ಯಾವುದು ಎಂಬ ಮಾಹಿತಿ ಇಲ್ಲಿದೆ.

PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ
ಪ್ರಾತಿನಿಧಿಕ ಚಿತ್ರ
Follow us on

ಪರ್ಮನೆಂಟ್ ಅಕೌಂಟ್ ನಂಬರ್ (PAN) ಕಾರ್ಡ್ ಹೊಂದಿರುವವರು ಮಾರ್ಚ್ 31, 2022ರೊಳಗೆ ಆ ಸಂಖ್ಯೆಯನ್ನು (PAN) ತಮ್ಮ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಸೂಚಿಸಲಾಗಿದೆ. ಹೀಗೆ ನೀಡಿದ ಗಡುವಿನೊಳಗೆ ಇದನ್ನು ಮಾಡಲು ವಿಫಲವಾದರೆ ಅವರ PAN ಕಾರ್ಡ್ ಅಮಾನ್ಯ ಆಗಲು ಕಾರಣ ಆಗುತ್ತದೆ. ಆ ನಂತರ ಪ್ಯಾನ್- ಆಧಾರ್ ಲಿಂಕ್ ಮಾಡಲು ರೂ. 1,000 ಶುಲ್ಕ ತೆರಬೇಕಾಗುತ್ತದೆ. ಪ್ಯಾನ್ ಕಾರ್ಡ್ ಹೊಂದಿರುವವರ ಸಮಸ್ಯೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಏಕೆಂದರೆ ಆ ವ್ಯಕ್ತಿಯು ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬ್ಯಾಂಕ್ ಖಾತೆ ತೆರೆಯಲು ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯ ಆಗುವುದಿಲ್ಲ. ಅಲ್ಲಿ PAN ಕಾರ್ಡ್ ಒದಗಿಸುವುದು ಅವಶ್ಯಕ. ಇದರ ಹೊರತಾಗಿ, ವ್ಯಕ್ತಿಯು ಪ್ಯಾನ್ ಕಾರ್ಡ್ ಅನ್ನು ಒದಗಿಸಿದರೆ ಅಷ್ಟಕ್ಕೆ ಮಾತ್ರ ಮಾನ್ಯವಾಗಲ್ಲ. ಆ ನಂತರ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272N ಅಡಿಯಲ್ಲಿ ಅಂತಹ ವ್ಯಕ್ತಿಯು ದಂಡದ ಮೂಲಕ ಹತ್ತು ಸಾವಿರ ರೂಪಾಯಿ ಮೊತ್ತವನ್ನು ಪಾವತಿಸಲು ಅಸೆಸಿಂಗ್ ಆಫೀಸರ್ ನಿರ್ದೇಶಿಸಬಹುದು.

ಪ್ಯಾನ್- ಆಧಾರ್ ಜೋಡಣೆ ಗಡುವಿನ ಮಹತ್ವದ ಕುರಿತು ಮಾತನಾಡಿರುವ ಸೆಬಿ-ನೋಂದಾಯಿತ ಆದಾಯ ತೆರಿಗೆ ಪರಿಹಾರ ಪೂರೈಕೆದಾರ ಕಂಪೆನಿ SAG ಇನ್ಫೋಟೆಕ್‌ನ ಎಂ.ಡಿ. ಅಮಿತ್ ಗುಪ್ತಾ, “ಹಿಂದೆ, ಆಧಾರ್- ಪ್ಯಾನ್ ಜೋಡಣೆಗೆ ಸಂಬಂಧಿಸಿದ ನಿಯಮಗಳಿಗೆ ಯಾವುದೇ ದಂಡದ ಅವಕಾಶವಿರಲಿಲ್ಲ. ಹೊಸ ಕಾನೂನಿನ ಪ್ರಕಾರ, ಎರಡು ಐಡಿಗಳನ್ನು (ಪ್ಯಾನ್ ಹಾಗೂ ಆಧಾರ್) ಜೋಡಣೆ ಮಾಡಲು ವಿಫಲವಾದರೆ PAN ಅಮಾನ್ಯವಾಗಲು ಕಾರಣವಾಗುತ್ತದೆ. ಇದರರ್ಥ PAN ವಿವರಗಳ ಅಗತ್ಯವಿರುವ ಹಣಕಾಸಿನ ವಹಿವಾಟುಗಳನ್ನು ಮಾಡಲು ಸಾಧ್ಯವಿಲ್ಲ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು ಇದರಲ್ಲಿ ಸೇರಿವೆ. ಅಲ್ಲದೆ, ಆ ವ್ಯಕ್ತಿಯು ಹೆಚ್ಚಿನ TDS ಮೊತ್ತವನ್ನು ಪಾವತಿಸಬೇಕಾಗಬಹುದು, ಜೊತೆಗೆ ಆ ವ್ಯಕ್ತಿಯು ಅಗತ್ಯವಿದ್ದಾಗ ಮತ್ತು ಪ್ಯಾನ್ ಅನ್ನು ನಮೂದಿಸಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಪ್ರಕಾರ ರೂ. 10,000 ದಂಡ ವಿಧಿಸಲಾಗುವುದು,” ಎಂದಿದ್ದಾರೆ.

ಅಮಾನ್ಯವಾದ ಪ್ಯಾನ್ ಅನ್ನು ಒದಗಿಸಿದರೆ ರೂ. 10,000 ದಂಡವನ್ನು ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದ್ದರಿಂದ ಪ್ಯಾನ್ ಕಾರ್ಡ್ ಹೊಂದಿರುವವರು ಅದರ ಆಧಾರ್ ಕಾರ್ಡ್‌ನೊಂದಿಗೆ ಜೋಡಣೆ ಮಾಡುವುದು ಮತ್ತು ಪ್ಯಾನ್- ಆಧಾರ್ ಜೋಡಣೆ ಮಾಡುವ ಗಡುವನ್ನು ಪೂರ್ತಿಗೊಳಿಸಲು ವಿಫಲವಾದ ನಂತರ ಯಾವುದೇ ರೀತಿಯ ದಂಡವನ್ನು ತಪ್ಪಿಸುವುದು ಮುಖ್ಯವಾಗಿದೆ.

ಪ್ಯಾನ್ ಕಾರ್ಡ್ ಹೊಂದಿರುವವರು ಪ್ಯಾನ್ ಆಧಾರ್ ಲಿಂಕ್ ಮಾಡುವ ಗಡುವನ್ನು ಪೂರೈಸಲು ವಿಫಲವಾದರೆ, ಆಧಾರ್‌ನೊಂದಿಗೆ ಪ್ಯಾನ್ ಅನ್ನು ತಡವಾಗಿ ಜೋಡಣೆ ಮಾಡಲು ರೂ. 1,000 ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಹೊಸದಾಗಿ ಸೇರಿಸಲಾದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234H (2021ರ ಮಾರ್ಚ್​ನಲ್ಲಿ ಹಣಕಾಸು ಮಸೂದೆ ಮೂಲಕ), “ಈ ಕಾಯ್ದೆಯ ನಿಬಂಧನೆಗಳಿಗೆ ಯಾವುದೇ ಪೂರ್ವಗ್ರಹವಿಲ್ಲದೆ, ಒಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ಸೆಕ್ಷನ್ 139AA ಸಬ್​ ಸೆಕ್ಷನ್ (2) ಅಡಿಯಲ್ಲಿ ತಿಳಿಸುವ ಅಗತ್ಯವಿದೆ. ಮತ್ತು ಅಂತಹ ವ್ಯಕ್ತಿಯು ನಿಯಮಿಸಬಹುದಾದ ದಿನಾಂಕದಂದು ಅಥವಾ ಮೊದಲು ಹಾಗೆ ಮಾಡಲು ವಿಫಲರಾದರೆ, ಸೆಕ್ಷನ್ 139AA ಸಬ್​ ಸೆಕ್ಷನ್ (2) ಅಡಿಯಲ್ಲಿ ದಿನಾಂಕದ ನಂತರ ತಿಳಿಸುವ ಸಮಯದಲ್ಲಿ ಸೂಚಿಸಬಹುದಾದಂತಹ ಶುಲ್ಕವನ್ನು ಒಂದು ಸಾವಿರ ರೂಪಾಯಿಗಳಿಗೆ ಮೀರದಂತೆ ಪಾವತಿಸಲು ಹೊಣೆಗಾರರಾಗಿರುತ್ತಾರೆ.”

ಇದನ್ನೂ ಓದಿ: ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ

Published On - 2:42 pm, Tue, 4 January 22