ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದ ರೂಪಾಯಿ ಮೌಲ್ಯ (Rupee Value) ಮತ್ತೆ ಕುಸಿಯತೊಡಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಹಣದುಬ್ಬರ ತಡೆಯಲು ಬಡ್ಡಿ ದರ ಹೆಚ್ಚಿಸಿದ ಹಾಗೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ಡಾಲರ್ ಮೇಲೆ ಪರಿಣಾಮ ಬೀರಿದೆ. ಇದರ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲಿ ಸೋಮವಾರ ತೀವ್ರ ಕುಸಿತವಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಒಂದೇ ದಿನ 48 ಪೈಸೆ ಇಳಿಕೆಯಾಗಿ 81.26 ಆಯಿತು.
ಶುಕ್ರವಾರದ ವಹಿವಾಟಿನ ಮುಕ್ತಾಯದ ಸಂದರ್ಭದಲ್ಲಿ ರೂಪಾಯಿ ಮೌಲ್ಯ 80.8100 ಆಗಿತ್ತು. ಸೋಮವಾರದ ವಹಿವಾಟಿನ ಆರಂಭದಲ್ಲಿ 80.5350 ಆಗಿತ್ತು. ಇಂದು 80.5125 ರಿಂದ 81.2838 ರ ಮಧ್ಯೆ ವಹಿವಾಟು ನಡೆಸಿತು. ಇದರೊಂದಿಗೆ, ಕಳೆದ ವಾರದ ರೂಪಾಯಿ ಮೌಲ್ಯ ವೃದ್ಧಿಯ ಓಟಕ್ಕೆ ತಡೆಬಿದ್ದಂತಾಯಿತು.
ಎಂಎಸ್ಸಿಐ (ಅಮೆರಿಕದ ಈಕ್ವಿಟಿ ಕಂಪನಿ) ಹೂಡಿಕೆ ಹೊರಹರಿವು, ತೈಲ ಕಂಪನಿಗಳು ಮತ್ತು ರಕ್ಷಣಾ ಸಂಸ್ಥೆಗಳ ನಿರ್ಧಾರಗಳು ಡಾಲರ್ ಮೌಲ್ಯ ವರ್ಧನೆಗೆ ಕಾರಣವಾಯಿತು ಎಂದು ಫಿನ್ರೆಕ್ಸ್ ಟ್ರೆಷರಿ ಅಡ್ವೈರ್ಸ್ನ ಖಜಾಂಚಿ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ.
ಇದನ್ನೂ ಓದಿ: LIC Shares: ಎಲ್ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ
ಅಮೆರಿಕದ ಹಣದುಬ್ಬರ ಸಂಬಂಧಿತ ವರದಿಯು ಕಳೆದ ವಾರ ಡಾಲರ್ ಮೌಲ್ಯದಲ್ಲಿ ಶೇಕಡಾ 4ರ ಕುಸಿತಕ್ಕೆ ಕಾರಣವಾಗಿತ್ತು. ಇದು ಕಳೆದ 50 ವರ್ಷಗಳಲ್ಲೇ ಅತಿದೊಡ್ಡ ಕುಸಿತ ಎನ್ನಲಾಗಿತ್ತು.
ಷೇರುಪೇಟೆ ವಹಿವಾಟಿನಲ್ಲಿಯೂ ಕುಸಿತ
ವಾರದ ಆರಂಭದ ದಿನದ ವಹಿವಾಟಿನಲ್ಲೇ ಭಾರತೀಯ ಷೇರುಪೇಟೆಗಳಲ್ಲಿ ಕುಸಿತ ಕಂಡುಬಂದಿದೆ. ಬಿಎಸ್ಇ ಸೆನ್ಸೆಕ್ಸ್ 170.89 ಅಂಶ ಕುಸಿದು, 61,624.15ರಲ್ಲಿ ವಹಿವಾಟು ಮುಗಿಸಿದೆ. ಎನ್ಎಸ್ಇ ನಿಫ್ಟಿ 20.55 ಅಂಶ ಕುಸಿದು 18,329.15ರಲ್ಲಿ ವಹಿವಾಟು ಕೊನೆಗೊಳಿಸಿದೆ. ಹಿಂಡಾಲ್ಕೊ, ಅಪೋಲೊ ಹಾಸ್ಪಿಟಲ್, ಟಾಟಾ ಮೋಟರ್ಸ್, ಕೋಟಕ್ ಮಹೀಂದ್ರಾ ಉತ್ತಮ ಗಳಿಕೆ ದಾಖಲಿಸಿದರೆ, ಡಾ. ರೆಡ್ಡೀಸ್ ಲ್ಯಾಬ್ಸ್, ಐಟಿಸಿ, ಕೋಲ್ ಇಂಡಿಯಾ, ಎಚ್ಯುಎಲ್, ಎಸ್ಬಿಐ ಷೇರು ಮೌಲ್ಯದಲ್ಲಿ ಕುಸಿತವಾಯಿತು. ಇಂದಿನ ವಹಿವಾಟಿನಲ್ಲಿ ಎಚ್ಡಿಎಫ್ಸಿ ಬ್ಯಾಂಕ್, ಹಿಂಡಾಲ್ಕೊ, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಎಚ್ಡಿಎಫ್ಸಿ ಷೇರುಗಳು ಉತ್ತಮ ವಹಿವಾಟು ನಡೆಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ