Retail Inflation October 2022: ಸತತ ಹತ್ತನೇ ತಿಂಗಳು ಶೇಕಡಾ 6ಕ್ಕಿಂತ ಮೇಲ್ಮಟ್ಟದಲ್ಲಿ ಚಿಲ್ಲರೆ ಹಣದುಬ್ಬರ
ಅಕ್ಟೋಬರ್ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ (Retail Inflation) ಶೇಕಡಾ 6.77ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಜೆ ತಿಳಿಸಿದೆ. ಸೆಪ್ಟೆಂಬರ್ನಲ್ಲಿ ಇದು ಶೇಕಡಾ 7.41ರಷ್ಟಿತ್ತು.
ನವದೆಹಲಿ: ಗ್ರಾಹಕ ದರ ಸೂಚ್ಯಂಕ ಆಧಾರಿತ (CPI) ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ (Retail Inflation) ಶೇಕಡಾ 6.77ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಜೆ ತಿಳಿಸಿದೆ. ಸೆಪ್ಟೆಂಬರ್ನಲ್ಲಿ ಇದು ಶೇಕಡಾ 7.41ರಷ್ಟಿತ್ತು. ಆದಾಗ್ಯೂ, ಹಣದುಬ್ಬರ ಪ್ರಮಾಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನಿಯಂತ್ರಣ ಮಟ್ಟಕ್ಕಿಂತ ಹೆಚ್ಚೇ ಇದೆ. ಇದರೊಂದಿಗೆ ಸತತ ಹತ್ತು ತಿಂಗಳುಗಳಿಂದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡಾ 6ಕ್ಕಿಂತ ಹೆಚ್ಚಿದೆ. 2022ರ ಜನವರಿಯಿಂದ ಚಿಲ್ಲರೆ ಹಣದುಬ್ಬರ ಪ್ರಮಾಣ 6ಕ್ಕಿಂತ ಮೇಲಿದೆ. ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಗ್ರಾಹಕರ ದರ ಸೂಚ್ಯಂಕ ಆಧಾರಿತ ಆಹಾರ ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 7.01ಕ್ಕೆ ಇಳಿಕೆಯಾಗಿದೆ. ಇದು ಸೆಪ್ಟೆಂಬರ್ನಲ್ಲಿ ಶೇಕಡಾ 8.6ರಷ್ಟಿತ್ತು. 2021ರಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡಾ 4.48ರಷ್ಟಿತ್ತು.
ಹಣಕಾಸು ನೀತಿಯನ್ನು ರೂಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಸತತ 9 ತಿಂಗಳುಗಳಿಂದ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗದ ಬಗ್ಗೆ ಇತ್ತೀಚೆಗೆ ವಿಶೇಷ ಸಭೆ ನಡೆಸಿದ್ದ ಆರ್ಬಿಐ ಹಣಕಾಸು ನೀತಿ ಸಮಿತಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಏನಿದು ಚಿಲ್ಲರೆ ಹಣದುಬ್ಬರ?
ವಸ್ತುಗಳ ಚಿಲ್ಲರೆ (ರಿಟೇಲ್) ಮಾರಾಟದ ಅಥವಾ ಗ್ರಾಹಕ ದರವನ್ನು ಗಣನೆಗೆ ತೆಗೆದುಕೊಂಡು ಚಿಲ್ಲರೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ನಿರ್ದಿಷ್ಟ ಸರಕು-ಸೇವೆಗಳ ಗ್ರಾಮೀಣ, ನಗರ ಮತ್ತು ಅಖಿಲ ಭಾರತ ಮಟ್ಟದ ಬೆಲೆ ಹಾಗೂ ಈ ಬೆಲೆಯಲ್ಲಿ ಕಾಲಾವಧಿಯಲ್ಲಿ ಆಗುವ ಬದಲಾವಣೆ (ಏರಿಳಿತ) ಗಣನೆಗೆ ತೆಗೆದುಕೊಂಡು ಚಿಲ್ಲರೆ ಹಣದುಬ್ಬರ ಲೆಕ್ಕಾಚಾರ ಹಾಕಲಾಗುತ್ತದೆ.
ಮತ್ತೊಂದೆಡೆ, ವಸ್ತುಗಳ ಸಗಟು ಮಾರಾಟದ (Wholesale) ದರ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕುವ ಹಣದುಬ್ಬರ ಸಗಟು ಹಣದುಬ್ಬರವಾಗಿದೆ. ಅಂದರೆ, ನಿರ್ದಿಷ್ಟ ಸಗಟು ವಸ್ತುಗಳ ಮಾರಾಟದ ಬೆಲೆಯ ಆಧಾರದಲ್ಲಿ ಹಣದುಬ್ಬರ ಲೆಕ್ಕ ಹಾಕಲಾಗುತ್ತದೆ.
ಸಗಟು, ಆಹಾರ ಹಣದುಬ್ಬರವೂ ಇಳಿಕೆ
ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 8.39ಕ್ಕೆ ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಸೋಮವಾರ ಬೆಳಿಗ್ಗೆ ತಿಳಿಸಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ 10.70ರಷ್ಟು ಇತ್ತು. 2021ರ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಎರಡಂಕಿಯಿಂದ ಕೆಳಗಿಳಿದಿದೆ ಎಂದು ಸಚಿವಾಲಯ ತಿಳಿಸಿತ್ತು. 2021ರ ಮಾರ್ಚ್ನಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ 7.89ರಷ್ಟಿತ್ತು. 2021ರ ಏಪ್ರಿಲ್ ಬಳಿಕ ಸತತ 18 ತಿಂಗಳ ಕಾಲ, ಅಂದರೆ 2022ರ ಸೆಪ್ಟೆಂಬರ್ ವರೆಗೆ ಶೇಕಡಾ 10ಕ್ಕಿಂತ ಮೇಲಿತ್ತು. 2021ರ ಆಗಸ್ಟ್ ತಿಂಗಳಲ್ಲಿ ಶೇಕಡಾ 12.41ರಿಂದ ಶೇಕಡಾ 12.48ಕ್ಕೆ ಏರಿಕೆಯಾಗಿತ್ತು. 2021ರ ಅಕ್ಟೋಬರ್ನಲ್ಲಿ ಗರಿಷ್ಠ ಶೇಕಡಾ 13.83ಕ್ಕೆ ತಲುಪಿತ್ತು.
ಆಹಾರ ಹಣದುಬ್ಬರ ಶೇಕಡಾ 11.03ರಿಂದ ಶೇಕಡಾ 8.33ಕ್ಕೆ ಇಳಿಕೆಯಾಗಿರುವುದಾಗಿಯೂ ಸಚಿವಾಲಯ ತಿಳಿಸಿತ್ತು. ಸೆಪ್ಟೆಂಬರ್ನಲ್ಲಿ ಶೇಕಡಾ 39.66ರಷ್ಟಿದ್ದ ತರಕಾರಿ ಹಣದುಬ್ಬರ ಈ ತಿಂಗಳು ಶೇಕಡಾ 17.61ಕ್ಕೆ ಇಳಿಕೆಯಾಗಿದೆ. ಇಂಧನ, ವಿದ್ಯುತ್ ದರದುಬ್ಬರ ಶೇಕಡಾ 23.17 ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Mon, 14 November 22