ಮುಂಬೈ: ರಷ್ಯಾ-ಉಕ್ರೇನ್ ಯುದ್ಧವು (Russia Ukraine War) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರುವುದು ಮುಂದುವರಿದಿದೆ. ಯೂರೋಪ್ಗೆ ಇಂಧನ ಪೂರೈಸುವ ಪ್ರಮುಖ ಗ್ಯಾಸ್ ಪೈಪ್ಲೈನ್ (Gas Pipline) ಒಂದನ್ನು ರಷ್ಯಾ ಸ್ಥಗಿತಗೊಳಿಸಿರುವುದರಿಂದ ಐರೋಪ್ಯ ಒಕ್ಕೂಟದ ಕರೆನ್ಸಿ ಯೂರೊ ಮೌಲ್ಯವು ಕುಸಿತದತ್ತ ಸಾಗಿದೆ. ಇದರ ಪರಿಣಾಮವಾಗಿ ಭಾರತದ ಕರೆನ್ಸಿ ರೂಪಾಯಿಯೂ 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಭಾರತದ ಕರೆನ್ಸಿಯು ಸೋಮವಾರ (ಸೆಪ್ಟೆಂಬರ್ 5) ಬೆಳಿಗ್ಗೆ ಒಂದು ಡಾಲರ್ ಎದುರು ₹ 79.8138ಕ್ಕೆ ವಹಿವಾಟು ಆಯಿತು ಎಂದು ಬ್ಲೂಮ್ಬರ್ಗ್ ಜಾಲತಾಣವು ವರದಿ ಮಾಡಿದೆ. ಶುಕ್ರವಾರದ (ಸೆಪ್ಟೆಂಬರ್ 2) ಅಂತ್ಯಕ್ಕೆ ಭಾರತದ ಕರೆನ್ಸಿಯು ₹ 79.8025ಕ್ಕೆ ವಹಿವಾಟು ಮುಗಿಸಿತ್ತು. ಇದು ಗುರುವಾರದ (ಸೆಪ್ಟೆಂಬರ್ 1) ವಹಿವಾಟು ಮೊತ್ತಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿತ್ತು. ಕಳೆದ ವಾರಾಂತ್ಯದ ವಹಿವಾಟು ಗಮನಿಸಿದರೆ ಇದು ಶೇ 0.1ರಷ್ಟು ಹೆಚ್ಚಾಗಿತ್ತು.
ರೂಪಾಯಿ ಮೌಲ್ಯವು ಸತತ ಕುಸಿತ ಕಾಣುತ್ತಿರುವುದು ಭಾರತದ ವಿದೇಶಿ ಮೀಸಲು ಅನುಪಾತದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸ್ತುತ ಭಾರತದ ವಿದೇಶಿ ಮೀಸಲು ನಿಧಿಯು ಕಳೆದ ವರ್ಷದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ 80 ಶತಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಳೆದ ವಾರ ಭಾರತದ ಕರೆನ್ಸಿಯು ಡಾಲರ್ ಎದುರು ₹ 70.30 ಮತ್ತು ₹ 80.12ರ ನಡುವೆ ವಹಿವಾಟು ನಡೆಸಿತು. ಭಾರತೀಯ ರಿಸರ್ವ್ ಬ್ಯಾಂಕ್ನ ಮಧ್ಯಪ್ರವೇಶ ಮತ್ತು ಅಮೆರಿಕದ ಡಾಲರ್ ಸದೃಢಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದೆ.
ಕಳೆದ ವಾರದ ವಹಿವಾಟಿನಲ್ಲಿ ರೂಪಾಯಿ-ಡಾಲರ್ ಹೊಯ್ದಾಟುವ ಹೊಸ ಸಪೋರ್ಟ್ ಮತ್ತು ರೆಸಿಸ್ಟೆನ್ಸ್ ಮಟ್ಟ ಮುಟ್ಟಿದೆ. ₹ 80 ಎನ್ನುವುದು ಬಹಳ ಮುಖ್ಯವಾದ ಮಟ್ಟವಾಗಿದ್ದು ಈ ಹಂತದಲ್ಲಿ ರೂಪಾಯಿ ಉಳಿದರೆ ಒಳ್ಳೆಯದು. ಹಲವು ರಫ್ತುದಾರರು ಮತ್ತು ದಲ್ಲಾಳಿಗಳು ಇದೇ ಮಟ್ಟದಲ್ಲಿ ವಹಿವಾಟು ನಡೆಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಮನಿಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.
ಯೂರೋಪ್ಗೆ ಇಂಧನ ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಸ್ಥಗಿತಗೊಳಿಸಲು ರಷ್ಯಾ ಮುಂದಾದ ಹಿನ್ನೆಲೆಯಲ್ಲಿ ‘ಯೂರೊ’ ಸಹ ಡಾಲರ್ ಎದುರು ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಯೂರೋಪ್ನ ಕೈಗಾರಿಕಾ ಪ್ರಗತಿ ಮತ್ತು ಆರ್ಥಿಕ ಸ್ಥಿತಿಗತಿಯ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.