ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂದು ಹೆಚ್ಚಿನ ಜನರು ಹಪಿಹಪಿಸುವುದುಂಟು. ಸರ್ಕಾರಿ ನೌಕರಿಯು ಕೆಲಸದ ಅಭದ್ರತೆಯನ್ನು ನೀಗಿಸುವುದಲ್ಲೇ ಉತ್ತಮ ಸಂಬಳವನ್ನೂ ತರುತ್ತದೆ ಎಂಬುದು ನಂಬಿಕೆ. ಇದು ಬಹುತೇಕವಾಗಿ ನಿಜವೇ ಹೌದು. ಆದರೆ, ಉನ್ನತ ಸ್ತರದ ಹುದ್ದೆಗಳ (Executive Job) ವಿಚಾರಕ್ಕೆ ಬಂದರೆ ಇದು ಹೌದಾ ಎಂದು ಅಚ್ಚರಿ ಎನಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಛೇರ್ಮನ್ ದಿನೇಶ್ ಖರ (Dinesh Khara) ಅವರಿಗೆ 2022-23ರ ಹಣಕಾಸು ವರ್ಷದಲ್ಲಿ ಸಿಕ್ಕಿರುವ ಸಂಬಳ 37 ಲಕ್ಷ ರೂ. ಅಂದರೆ ತಿಂಗಳಿಗೆ 3 ಲಕ್ಷ ರೂನಷ್ಟು. ಕೆಲವರಿಗೆ ಇದು ಅಚ್ಚರಿ ಅನಿಸದೇ ಇರಬಹುದು. ಆದರೆ, ಭಾರತದ ಅತಿದೊಡ್ಡ ಬ್ಯಾಂಕ್ನ ಮುಖ್ಯಸ್ಥರಿಗೆ ಸಿಗುವ ಸಂಬಳ ಇದು ಎಂಬುದು ಗೊತ್ತಿರಲಿ. ಎಸ್ಬಿಐ ಸಂಸ್ಥೆ (SBI) 55.17 ಲಕ್ಷ ಕೋಟಿ ರೂ ಮೊತ್ತದ ಹಣಕಾಸು ಆಸ್ತಿಗಳನ್ನು ನಿರ್ವಹಿಸುತ್ತದೆ. ಅದರ ಮುಖ್ಯಸ್ಥರಿಗೆ ಸಂಬಳ ಇಷ್ಟೇನಾ ಎಂದು ಯಾರಿಗಾದರೂ ಅನಿಸದೇ ಇದ್ದರೆ, ಖಾಸಗಿ ವಲಯದ ಬ್ಯಾಂಕ್ವೊಂದರ ಮುಖ್ಯಸ್ಥರ ಸಂಬಳ ಎಷ್ಟೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ಡಿಎಫ್ಇಸಿ. ಇದು ನಿರ್ವಹಿಸುವ ಒಟ್ಟು ಆಸ್ತಿ 27 ಲಕ್ಷ ಕೋಟಿ ರೂಗಿಂತ ಕಡಿಮೆ. ಇದರ ಸಿಇಒ ಶಶಿಧರ್ ಜಗದೀಶನ್ ಅವರು 2021-21ರಲ್ಲಿ ಪಡೆದ ಒಂದು ವರ್ಷದ ಸಂಬಳ 6.51 ಕೋಟಿ ರೂ ಇತ್ತು. ಅಂದರೆ ಎಚ್ಡಿಎಫ್ಸಿ ಬ್ಯಾಂಕ್ನ ಸಿಇಒಗಿಂತ ಎರಡು ಪಟ್ಟು ಹೆಚ್ಚು ಆಸ್ತಿ ನಿಭಾಯಿಸಿದರೂ ಎಸ್ಬಿಐ ಮುಖ್ಯಸ್ಥರಿಗೆ ಸಿಗುವ ಸಂಬಳ 18 ಪಟ್ಟಿಗೂ ಕಡಿಮೆ.
ಅತಿದೊಡ್ಡ ಬ್ಯಾಂಕ್ವೊಂದರ ಮುಖ್ಯಸ್ಥರಿಗೆ ಸಿಗುವ ಸಂಬಳ ಇದು ಬಹಳ ಕಡಿಮೆ ಎಂದು ಯಾರಿಗಾದರೂ ಅನಿಸದೇ ಇರದು. ಹಲವು ಸರ್ಕಾರಿ ಸಂಸ್ಥೆಗಳ ವಿಚಾರಕ್ಕೂ ಇದು ಅನ್ವಯ ಆಗುತ್ತದೆ. ಸರ್ಕಾರಿ ಕಚೇರಿಗಳೆಂದರೆ ಸ್ಲೀಪಿಂಗ್ ಪ್ಲೇಸ್ ಎಂದು ವ್ಯಂಗ್ಯ ಮಾಡುವುದನ್ನು ಕೇಳಿದ್ದೇವೆ. ಆದರೆ, ಅದೆಲ್ಲವೂ ಅರ್ಧಸತ್ಯ ಮಾತ್ರ. ಹೆಚ್ಚಿನ ಸಂಖ್ಯೆಯ ಸರ್ಕಾರಿ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಬಹಳ ನೌಕರರಿಗೆ ಅರೆಕ್ಷಣವೂ ಪುರುಸೊತ್ತು ಇಲ್ಲದಷ್ಟು ಕೆಲಸ ಎಡತಾಕುತ್ತಿರುತ್ತದೆ. ಆದರೆ, ಇವರು ಮಾಡುವ ಕೆಲಸಕ್ಕೆ ತಕ್ಕಷ್ಟು ಸಂಬಳ ಸಿಗುತ್ತದಾ ಎಂದು ಹಲವು ಸರ್ಕಾರಿ ಉದ್ಯೋಗಿಗಳು ವಾದಿಸುವುದುಂಟು.
2-3 ವರ್ಷಗಳ ಹಿಂದೆ ಎಸ್ಬಿಐನ ಅಂದಿನ ಮುಖ್ಯಸ್ಥ ರಜನೀಶ್ ಕುಮಾರ್ ಅವರ ಹೇಳಿಕೆಯೊಂದು ಬಹಳ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಎಸ್ಬಿಐ ಉದ್ಯೋಗಿಗಳ ಸಂಬಳ ಕಡಿತದ ಬಗೆಗಿನ ಸುದ್ದಿ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೊದಲೇ ಇಷ್ಟು ಕಡಿಮೆ ಬರುತ್ತಿದೆ, ಈಗ ಬೀದಿಗೆ ಬೀಳಬೇಕಾಗುತ್ತದೆ’ ಎಂದು ರಜನೀಶ್ ಕುಮಾರ್ ಹೇಳಿದ್ದರು. ಅವರ ಆ ಮಾತಿಗೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದು ಹೌದು. ರಜನೀಶ್ ಕುಮಾರ್ ಮಾತು ವಾಸ್ತವ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರ ಹುದ್ದೆಗೆ ತಕ್ಕಷ್ಟು ಸಂಭಾವನೆ ಇಲ್ಲ ಎನ್ನುವುದು ಸತ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಮತ್ತೆ ಕೆಲವರು, ಒಬ್ಬ ಹಿರಿಯ ಸ್ತರದ ಅಧಿಕಾರಿಗಳಿಗೆ ಈ ಮಾತು ಶೋಭೆ ತರುವುದಿಲ್ಲ ಎಂದು ಹೇಳಿದ್ದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ