TCS: ಟ್ರಾನ್ಸಮೆರಿಕಾದ 16,000 ಕೋಟಿ ರೂ ಗುತ್ತಿಗೆ ಕಳೆದುಕೊಂಡ ಟಿಸಿಎಸ್; ಅಮೆರಿಕನ್ ಕಂಪನಿಯ ಈ ನಿರ್ಧಾರಕ್ಕೆ ಏನು ಕಾರಣ?
Transamerica Cancels Deal With TCS: 2018ರ ಜನವರಿಯಲ್ಲಿ ಅಮೆರಿಕದ ಟ್ರಾನ್ಸಮಿರಕಾ ಲೈಫ್ ಇನ್ಷೂರೆನ್ಸ್ ಸಂಸ್ಥೆ ಭಾರತದ ಟಿಸಿಎಸ್ಗೆ 10 ವರ್ಷಗಳ ಹಾಗೂ 2ಬಿಲಿಯನ್ ಡಾಲರ್ ಮೊತ್ತದ ಹೊರಗುತ್ತಿಗೆ ನೀಡಿತ್ತು. ಈಗ ಅವಧಿಗೆ ಮುನ್ನವೇ ಗುತ್ತಿಗೆ ರದ್ದು ಮಾಡಿದೆ.
ಮುಂಬೈ: ಅಮೆರಿಕದ ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಜೊತೆಗೆ ಮಾಡಿಕೊಂಡಿದ್ದ 10 ವರ್ಷದ ಗುತ್ತಿಗೆಯನ್ನು ರದ್ದು ಮಾಡಿದೆ. ಇದು ಬರೋಬ್ಬರಿ 2 ಬಿಲಿಯನ್ ಡಾಲರ್ (ಸುಮಾರು 16,000 ಕೋಟಿ ರೂ) ಮೊತ್ತದ ಗುತ್ತಿಗೆಯಾಗಿದ್ದು 2018ರ ಜನವರಿಯಲ್ಲಿ ಎರಡೂ ಸಂಸ್ಥೆಗಳು ಇದಕ್ಕೆ ಸಹಿಹಾಕಿದ್ದವು. ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ (Transamerica Life Insurance) ಕಂಪನಿಯ ಪಾಲಿಸಿಗಳ ಡಿಜಿಟೀಕರಣ (Digitization) ಸೇರಿದಂತೆ ವಿವಿಧ ಸೇವೆಗಳನ್ನು ಟಿಸಿಎಸ್ ಒದಗಿಸುತ್ತಿತ್ತು. ಈ ಗುತ್ತಿಗೆ ರದ್ದಾಗುವುದರೊಂದಿಗೆ ಟಿಸಿಎಸ್ ಸಂಸ್ಥೆಗೆ ಅತಿದೊಡ್ಡ ಕ್ಲೈಂಟ್ ಕಳೆದುಹೋದಂತಾಗಿದೆ. ಆದರೆ, ಏಕಾಏಕಿ ಸೇವೆ ನಿಲ್ಲುವುದಿಲ್ಲ. ಇನ್ನೂ ಎರಡೂವರೆ ವರ್ಷದವರೆಗೆ ಹಂತ ಹಂತವಾಗಿ ಈ ಗುತ್ತಿಗೆಯನ್ನು ನಿಲ್ಲಿಸಲಾಗುತ್ತದೆ. ಅಂದರೆ 2025-26ರವರೆಗೂ ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ ಕಂಪನಿಗೆ ಟಿಸಿಎಸ್ ಸೇವೆ ಮುಂದುವರಿಯಲಿದೆ. ಅಲ್ಲಿಗೆ 10 ವರ್ಷದ ಗುತ್ತಿಗೆಯಲ್ಲಿ 2 ವರ್ಷದ ಅವಧಿಯ ಸೇವೆಯನ್ನು ಟಿಸಿಎಸ್ ಕಳೆದುಕೊಳ್ಳಲಿದೆ.
ಟ್ರಾನ್ಸಮೆರಿಕಾ ಮತ್ತು ಟಿಸಿಎಸ್ ನಡುವಿನ ಗುತ್ತಿಗೆ ಏಕಾಏಕಿ ರದ್ದಾಗಲು ಏನು ಕಾರಣ?
ಸಂಸ್ಥೆಯ ವೆಚ್ಚ ಕಡಿತದ ಉದ್ದೇಶದಿಂದ ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ ಕಂಪನಿ ಈ ಗುತ್ತಿಗೆ ರದ್ದು ಮಾಡಿರುವುದು ಸದ್ಯಕ್ಕೆ ತಿಳಿದುಬಂದ ಸಂಗತಿ. ಟಿಸಿಎಸ್ಗೆ ಕೊಟ್ಟಿದ್ದ ಬಹುತೇಕ ಐಟಿ ಸರ್ವಿಸ್ ಅನ್ನು ತಾನೇ ಸ್ವಂತವಾಗಿ ನಿಭಾಯಿಸಲು ಟ್ರಾನ್ಸಮೆರಿಕಾ ಸಂಸ್ಥೆ ನಿರ್ಧರಿಸಿದೆ. ಅಂದರೆ ಐಟಿ ಸೇವೆಗಳನ್ನು ನಿಭಾಯಿಸಲು ಟ್ರಾನ್ಸಮೆರಿಕಾ ಸಂಸ್ಥೆ ತಾನೇ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಆದರೆ, ಇದರಿಂದ ಈ ಅಮೆರಿಕನ್ ಕಂಪನಿಯ ವೆಚ್ಚ ಎಷ್ಟರಮಟ್ಟಿಗೆ ಕಡಿಮೆ ಆಗುತ್ತದೆ ಎಂಬುದು ಗೊತ್ತಿಲ್ಲ.
ಇದನ್ನೂ ಓದಿ: K Krithivasan: ಟಿಸಿಎಸ್ ಹೊಸ ಸಿಇಒ ಕೆ ಕೃತಿವಾಸನ್ ಸಂಬಳ, ಅನುಭವ ಇತ್ಯಾದಿ ವಿವರ
ನೆದರ್ಲೆಂಡ್ಸ್ ಮೂಲಕ ಏಗಾನ್ ಗ್ರೂಪ್ನ (Aegon Group) ಅಂಗ ಸಂಸ್ಥೆಯಾಗಿರುವ ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ ಕಂಪನಿ ತನ್ನ ಆಡಳಿತ, ಆನ್ಯೂಟಿ, ಸಪ್ಲಿಮೆಂಟರಿ ಹೆಲ್ತ್ ಇನ್ಷೂರೆನ್ಸ್ ಬ್ಯುಸಿನೆಸ್ ಇತ್ಯಾದಿ ಸೇವೆಯನ್ನು ಟಿಸಿಎಸ್ಗೆ ಹೊರಗುತ್ತಿಗೆ ನೀಡಿತ್ತು. ಇದರಲ್ಲಿ ಟ್ರಾನ್ಸಮೆರಿಕಾದ 1 ಕೋಟಿಗೂ ಹೆಚ್ಚು ಇನ್ಷೂರೆನ್ಸ್ ಪಾಲಿಸಿಯನ್ನು ಒಂದೇ ಇಂಟಿಗ್ರೇಟೆಡ್ ಪ್ಲಾಟ್ಫಾರ್ಮ್ಗೆ ಸೇರಿಸಲು ಡಿಜಿಟೀಕರಣ ಕಾರ್ಯವೂ ಈ ಗುತ್ತಿಗೆಯಲ್ಲಿ ಸೇರಿಕೊಂಡಿದೆ. ಅವಧಿಗೆ ಮುನ್ನವೇ ಗುತ್ತಿಗೆ ರದ್ದು ಮಾಡಿರುವ ಟ್ರಾನ್ಸಮಿರಕಾ ಲೈಫ್ ಇನ್ಷೂರೆನ್ಸ್ ಸಂಸ್ಥೆ ಟಿಸಿಎಸ್ಗೆ ಪರಿಹಾರ ಕಟ್ಟಿಕೊಡಬೇಕಾಗಬಹುದು. ಆದರೆ, ಎಷ್ಟು ಮೊತ್ತದ ಪರಿಹಾರ ಎಂಬುದು ಗೊತ್ತಿಲ್ಲ.
ಟ್ರಾನ್ಸಮೆರಿಕ ಗುತ್ತಿಗೆ ರದ್ದತಿಯಿಂದ ಟಿಸಿಎಸ್ಗೆ ಏನು ನಷ್ಟ?
ಕಾಗ್ನೈಜೆಂಟ್ ಇತ್ಯಾದಿ ಕಂಪನಿಗಳ ಪೈಪೋಟಿ ಮಧ್ಯೆ ಟಿಸಿಎಸ್ ಈ ಗುತ್ತಿಗೆ ಪಡೆದಿತ್ತು. 10 ವರ್ಷದ ಈ ಗುತ್ತಿಗೆಯಲ್ಲಿ 2 ವರ್ಷದ ಅವಧಿ ಮಾತ್ರ ಟಿಸಿಎಸ್ ಕಳೆದುಕೊಳ್ಳಲಿದೆ. ಹಾಗೆ ನೋಡಿದರೆ ಟಿಸಿಎಸ್ಗೆ ಇದು ಹೇಳಿಕೊಳ್ಳುವ ಹಣಕಾಸು ನಷ್ಟ ತರುವುದಿಲ್ಲ. ಆದರೆ, ಇದು ಒಟ್ಟಾರೆ ಭಾರತೀಯ ಐಟಿ ಉದ್ಯಮಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಜಾಗತಿಕವಾಗಿ ಆರ್ಥಿಕ ಹಿನ್ನಡೆ ಉದ್ಭವಿಸುತ್ತಿರುವುದರಿಂದ ಅನೇಕ ದೈತ್ಯ ಕಂಪನಿಗಳು ವೆಚ್ಚ ಕಡಿತ ಹೆಚ್ಚು ಮಾಡಲಿವೆ. ಉದ್ಯೋಗಕಡಿತದ ಜೊತೆಗೆ ಡಿಜಿಟಲ್ ಸರ್ವಿಸ್ ಇತ್ಯಾದಿಗೆ ಮಾಡುವ ವೆಚ್ಚವನ್ನೂ ಕಂಪನಿಗಳು ಕಡಿಮೆ ಮಾಡುವ ಸಾಧ್ಯತೆ ಇದೆ. ಭಾರತೀಯ ಐಟಿ ಕಂಪನಿಗಳ ಬಹುತೇಕ ಬ್ಯುಸಿನೆಸ್ ನಿಂತಿರುವುದೇ ಇಂಥ ಡಿಜಿಟಲ್ ಸರ್ವಿಸ್ಗಳಿಂದಲೇ. ಹೀಗಾಗಿ, ಟ್ರಾನ್ಸಮೆರಿಕಾ ಲೈಫ್ ಇನ್ಷೂರೆನ್ಸ್ ಸಂಸ್ಥೆ ಟಿಸಿಎಸ್ ಜೊತೆಗಿನ ಗುತ್ತಿಗೆಯನ್ನು ಅವಧಿಗೆ ಮುನ್ನವೇ ಕೈಬಿಡುತ್ತಿರುವುದು ಒಟ್ಟಾರೆ ಭಾರತೀಯ ಐಟಿ ಉದ್ಯಮಕ್ಕೆ ಬೇರೆಯೇ ಮುನ್ಸೂಚನೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ