Sam Bankman: ವರ್ಷದ ಹಿಂದೆ ಬಿಸಿನೆಸ್ ಜೀನಿಯಸ್; ಇವತ್ತು 25 ವರ್ಷ ಜೈಲುಶಿಕ್ಷೆ; ಅಮೆರಿಕ ಇತಿಹಾಸದಲ್ಲೇ ಮಹಾವಂಚಕ ಎಂದ ಜಡ್ಜ್

|

Updated on: Mar 29, 2024 | 5:25 PM

The Great fall of Crypto king: ವಿಶ್ವದಲ್ಲಿ ಅನೇಕ ಉದ್ಯಮ ಸಾಮ್ರಾಜ್ಯಗಳು ಹೇಳ ಹೆಸರಿಲ್ಲದಂತೆ ಹೋಗಿವೆ. ಬಹಳಷ್ಟು ಉದ್ಯಮಗಳು ವಂಚನೆಯ ಪಾಪಕ್ಕೆ ಸಿಕ್ಕು ನಶಿಸಿವೆ. ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಅವರ ಪತನದ ಕಥೆ ಇದಕ್ಕೊಂದು ಸೇರ್ಪಡೆ. ಒಂದು ಕಾಲದಲ್ಲಿ ಕ್ರಿಪ್ಟೋ ಲೋಕದ ಡಾರ್ಲಿಂಗ್ ಎನಿಸಿದ್ದ ಸ್ಯಾಮ್ ಇವತ್ತು ವಿವಿಧ ವಂಚನೆ ಆರೋಪದಲ್ಲಿ 25 ವರ್ಷ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅಮೆರಿಕದ ಇತಿಹಾಸದಲ್ಲೇ ಈತ ಅತಿದೊಡ್ಡ ಹಣಕಾಸು ವಂಚಕ ಎಂದು ಜಡ್ಜ್ ಬಣ್ಣಿಸಿದ್ದಾರೆ.

Sam Bankman: ವರ್ಷದ ಹಿಂದೆ ಬಿಸಿನೆಸ್ ಜೀನಿಯಸ್; ಇವತ್ತು 25 ವರ್ಷ ಜೈಲುಶಿಕ್ಷೆ; ಅಮೆರಿಕ ಇತಿಹಾಸದಲ್ಲೇ ಮಹಾವಂಚಕ ಎಂದ ಜಡ್ಜ್
ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್
Follow us on

ಕಾಲಾನುಕ್ರಮದಲ್ಲಿ ಯಾವೆಲ್ಲಾ ಬಣ್ಣಗಳು ಬದಲಾಗುತ್ತವೆ, ಮಾಸಿ ಹೋಗುತ್ತವೆ ನೋಡಿ. ನಿನ್ನೆಯವರೆಗೂ ವಾರೆವ್ಹಾ ಎಂದು ನಮ್ಮ ಹೊಗಳಿಕೆ ಪಡೆಯುತ್ತಿದ್ದವರು, ನಾಳೆ ನಮ್ಮಿಂದಲೇ ಛೀ ಥೂ ಎಂದು ಉಗಿಸಿಕೊಳ್ಳಬಹುದು. ಇಂಥ ಅದೆಷ್ಟೋ ಹೀರೋ ಟು ಝೀರೋ, ಝೀರೋ ಟು ಹೀರೋ ಸ್ಟೋರಿಗಳು ರಿಯಲ್ ಲೈಫ್​ನಲ್ಲಿ ಬಂದು ಹೋಗುತ್ತಿರುತ್ತವೆ. ಅಮೆರಿಕದ ಕ್ರಿಪ್ಟೋ ಲೋಕದ ಜೀನಿಯಸ್ ಎಂದು ಪರಿಗಣಿತವಾಗಿದ್ದ ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ (Sam Bankman-fried) ಇದೀಗ 25 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನೂ 32 ವರ್ಷದ ಈ ಯುವ ಉದ್ಯಮಿಯು ಜವಾಬ್ದಾರಿಯುತವಲ್ಲದ ಬುದ್ಧಿವಂತಿಕೆಗೆ ನಿದರ್ಶನವಾಗಿ ನಿಂತಿದ್ದಾರೆ.

ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ 8 ಬಿಲಿಯಲ್ ಡಾಲರ್ ಹಣಕಾಸು ವಂಚನೆಯ ಆರೋಪದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ. ಇವರ ಮೇಲೆ ಇದ್ದ ಎಲ್ಲಾ ಎಂಟು ದೂರುಗಳಲ್ಲೂ ಆರೋಪ ಸಾಬೀತಾಗಿದೆ. ತೀರ್ಪು ನೀಡಿದ ನ್ಯಾಯಾಧೀಶರು, ಎಸ್​ಬಿಎಫ್ ಅವರನ್ನು ಅಮೆರಿಕದ ಹಣಕಾಸು ಇತಿಹಾಸದಲ್ಲೇ ಅತಿದೊಡ್ಡ ವಂಚಕ ಎಂದು ಬಣ್ಣಿಸಿದ್ದಾರೆ. ಅಷ್ಟು ಕಠೋರ ಟೀಕೆ ಕಾಣುವಷ್ಟು ಈತ ಅಪರಾಧ ಎಸಗಿದ್ದಾದರೂ ಏನು?

ಸ್ಯಾಮ್ ಬ್ಯಾಂಕ್ಮನ್ ಕ್ರಿಪ್ಟೋ ಜಗತ್ತಿನ ವಂಡರ್​ಕಿಡ್

ಅಮೆರಿಕದ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ 2019ರಲ್ಲಿ ಎಫ್​ಟಿಎಕ್ಸ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್ ಅನ್ನು ತೆರೆದಿದ್ದರು. ಆಗ ಕ್ರಿಪ್ಟೋಕರೆನ್ಸಿ ಬಹಳ ದೊಡ್ಡ ಭರವಸೆ ಹುಟ್ಟಿಸಿದ ಕ್ಷೇತ್ರ. ಕಡಿಮೆ ಶುಲ್ಕ ಹಾಗೂ ವೇಗದ ವಹಿವಾಟು ಇವೆರಡನ್ನೂ ಕೊಡುತ್ತಿದ್ದರಿಂದ ಎಫ್​ಟಿಎಕ್ಸ್ ಬಹಳ ವೇಗದಲ್ಲಿ ಬೆಳೆಯಿತು. ಬಹಳ ಬೇಗ ಇದು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋ ಎಕ್ಸ್​ಚೇಂಜ್ ಎನಿಸಿತು.

ಇದನ್ನೂ ಓದಿ: ಭಾರತದ ಆಂತರಿಕ ವಿಷಯಗಳ ಬಗ್ಗೆ ಮತ್ತೆ ಮಾತಾಡಿದ ಅಮೆರಿಕ, ಕೇಜ್ರಿವಾಲ್ ಬಂಧನ, ಕಾಂಗ್ರೆಸ್​ ಖಾತೆ ಸ್ಥಗಿತ ಪ್ರಸ್ತಾಪ

ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ನೋಡನೋಡುತ್ತಿದ್ದಂತೆಯೇ ಅತಿಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದರು. ಅವರ ಸಂಪತ್ತು ಮೌಲ್ಯ 26.5 ಬಿಲಿಯನ್ ಡಾಲರ್​ಗೆ ಹೋಯಿತು. ಬಿಂದಾಸ್ ಜೀವನಶೈಲಿಯ ಈತ ಒಂದು ರೀತಿಯಲ್ಲಿ ಕಲ್ಟ್ ಸ್ಟೇಟಸ್ ಗಿಟ್ಟಿಸಿದ್ದ. ವೈಯಕ್ತಿಕವಾಗಿ ಈತನಿಗೆ ಅಭಿಮಾನಿ ಬಳಗವೇ ಇತ್ತು. ಅಮೆರಿಕದ ಟಿವಿ ಶೋಗಳಲ್ಲಿ ದೊಡ್ಡ ದೊಡ್ಡ ಸೆಲಬ್ರಿಟಿ ಕಾರ್ಯಕ್ರಮಗಳಲ್ಲಿ ಈತ ಆಕರ್ಷಣೆಯಾಗಿದ್ದ.

ಗಾಳಿ ಗೋಪುರ ಬೀಳಲು ಇದೊಂದು ಸಾಕು…

ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಎಫ್​ಟಿಎಕ್ಸ್ ಅಲ್ಲದೇ ಇನ್ನೂ ಹಲವು ಕಂಪನಿಗಳನ್ನು ಹೊಂದಿದ್ದರು. ಅದರಲ್ಲಿ ಅಲಮೇಡಾ ರಿಸರ್ಚ್ ಒಂದು. ಎಫ್​ಟಿಎಕ್ಸ್​ನಿಂದ ಹೊರಡಿಸಲಾಗಿದ್ದ ಎಫ್​ಟಿಟಿ ಎಂಬ ಕ್ರಿಪ್ಟೋ ಟೋಕನ್​ನಲ್ಲಿ ಅಲಮೇಡಾ ಕಂಪನಿ ಬಹಳ ದೊಡ್ಡ ಮೊತ್ತದ ಹೂಡಿಕೆ ಮಾಡಿತ್ತು. ಇದು ಹಿತಾಸಕ್ತಿ ಘರ್ಷಣೆಗೆ ಎಡೆ ಮಾಡಿಕೊಟ್ಟಿತು. ಇಲ್ಲಿಂದ ಎಫ್​ಟಿಎಕ್ಸ್​ನ ಪತನ ಆರಂಭವಾಗುತ್ತದೆ.

ಇದನ್ನೂ ಓದಿ: ಬೈಜುಸ್ ಮಾಲೀಕರ ಭರ್ಜರಿ ಅಸ್ತ್ರ; ಹೂಡಿಕೆದಾರರಿಗೆ ಮಾಡು ಇಲ್ಲ ಮಡಿ ಸ್ಥಿತಿ?

2022ರ ನವೆಂಬರ್ ತಿಂಗಳಲ್ಲಿ ಎದುರಾಳಿ ಕಂಪನಿಯ ಸಿಇಒವೊಬ್ಬರು ಎಫ್​ಟಿಎಕ್ಸ್​ನ ಹಣಕಾಸು ಸ್ಥಿತಿ ಬಗ್ಗೆ ಅನುಮಾನ ಮೂಡಿಸುವಂತೆ ಟ್ವೀಟ್ ಮಾಡುತ್ತಾರೆ. ಇದು ಬಹಳಷ್ಟು ಹೂಡಿಕೆದಾರರನ್ನು ಕಂಗಾಲಾಗಿಸುತ್ತದೆ. ಎಫ್​ಟಿಎಕ್ಸ್ ಎಕ್ಸ್​ಚೇಂಜ್​ನಲ್ಲಿ ತಾವಿರಿಸಿದ್ದ ಕ್ರಿಪ್ಟೋವನ್ನು ಹಿಂಪಡೆಯಲು ಎಲ್ಲರೂ ಮುಗಿಬೀಳುತ್ತಾರೆ. ಆದರೆ, ಅಷ್ಟು ಹೊರಹರಿವಿಗೆ ಸಾಕಾವಷ್ಟು ಫಂಡಿಂಗ್ ಎಫ್​ಟಿಎಕ್ಸ್​ನಲ್ಲಿ ಇರಲಿಲ್ಲ. ಆಗ ಎಫ್​ಟಿಎಕ್ಸ್​ನಿಂದ ಸಾಕಷ್ಟು ಮೊತ್ತದ ಹೂಡಿಕೆದಾರರ ಹಣ ನಾಪತ್ತೆಯಾಗಿರುವುದು ಬಹಿರಂಗವಾಗುತ್ತದೆ.

ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್​ನನ್ನು ಬಹಾಮಾಸ್​ನಲ್ಲಿ ಬಂಧಿಸಲಾಗುತ್ತದೆ. ತನ್ನದೇನೂ ತಪ್ಪಿಲ್ಲ ಎಂದು ಈತ ಹೇಳಿಕೊಂಡರೂ ಎಂಟು ಸಂಗತಿಗಳಲ್ಲಿ ಇವರ ಮೇಲಿನ ಆರೋಪ ಕೋರ್ಟ್​ನಲ್ಲಿ ಸಾಬೀತಾಗಿದೆ. ಈಗ ಬರೋಬ್ಬರಿ 25 ವರ್ಷ ಜೈಲುಶಿಕ್ಷೆ ಅನುಭವಿಸುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Fri, 29 March 24