AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಅಡ್ಡಾಗೆ ಅಂಬಾನಿ ಎಂಟ್ರಿ; 50 ಕೋಟಿ ರೂಗೆ ಪವರ್ ಕಂಪನಿಯ ಶೇ. 26 ಪಾಲು ಪಡೆದ ರಿಲಾಯನ್ಸ್

Mukesh Ambani vs Gautam Adani: ಅದಾನಿ ಗ್ರೂಪ್​ಗೆ ಸೇರಿದ ಮಹಾನ್ ಎನರ್ಜೆನ್​ನ ಒಂದು ವಿದ್ಯುತ್ ಉತ್ಪಾದನಾ ಘಟಕದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ 50 ಕೋಟಿ ರೂ ಹೂಡಿಕೆ ಮಾಡುತ್ತಿದೆ. ಇದಕ್ಕೆ ಬದಲಾಗಿ ಆ ಯೋಜನೆಯಲ್ಲಿ ಶೇ. 26ರಷ್ಟು ಪಾಲನ್ನು ಅಂಬಾನಿ ಕಂಪನಿ ಪಡೆಯಲಿದೆ. ಈ ಸಂಬಂಧ ಆಗಿರುವ ಒಪ್ಪಂದದ ಪ್ರಕಾರ ಮಧ್ಯಪ್ರದೇಶದಲ್ಲಿರುವ ಮಹಾನ್ ಎನರ್ಜೆನ್ ಘಟಕದಿಂದ ತಯಾರಾಗುವ ಎಲ್ಲಾ ವಿದ್ಯುತ್ ಅನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಖರೀದಿಸಲಿದೆ.

ಅದಾನಿ ಅಡ್ಡಾಗೆ ಅಂಬಾನಿ ಎಂಟ್ರಿ; 50 ಕೋಟಿ ರೂಗೆ ಪವರ್ ಕಂಪನಿಯ ಶೇ. 26 ಪಾಲು ಪಡೆದ ರಿಲಾಯನ್ಸ್
ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 29, 2024 | 10:28 AM

Share

ನವದೆಹಲಿ, ಮಾರ್ಚ್ 29: ಗೌತಮ್ ಅಂಬಾನಿ ಮಾಲಕತ್ವದ ಅದಾನಿ ಪವರ್​ನ ಒಂದು ಘಟಕವಾದ ಮಹಾನ್ ಎನರ್ಜೆನ್ ಲಿ (Mahan Energen Ltd) ಸಂಸ್ಥೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡುತ್ತಿದೆ. ವರದಿಗಳ ಪ್ರಕಾರ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ (RIL) ಸಂಸ್ಥೆಯು ಮಹಾನ್ ಎನರ್ಜೆನ್​ನ ಒಂದು ಘಟಕದಲ್ಲಿ 50 ಕೋಟಿ ರೂ ಹೂಡಿಕೆ ಮಾಡಲಿದೆ. ಇದಕ್ಕೆ ಬದಲಾಗಿ ಆ ಘಟಕದ ಶೇ. 26ರಷ್ಟು ಪಾಲು ಪಡೆಯಲಿದೆ. ಮಹಾನ್ ಎನರ್ಜೆನ್​ನ 10 ರೂ ಫೇಸ್ ವ್ಯಾಲ್ಯೂ ಇರುವ 5 ಕೋಟಿ ಈಕ್ವಿಟಿ ಷೇರುಗಳನ್ನು ಆರ್​ಐಎಲ್​ಗೆ ವರ್ಗಾವಣೆ ಆಗಲಿದೆ. ಈ ಸಂಗತಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ತನ್ನ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ಮಹಾನ್ ಎನರ್ಜೆನ್ ಥರ್ಮಲ್ ಪವರ್ ಪ್ಲಾಂಟ್ ವಿವಿಧೆಡೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರಲ್ಲಿ ಮಧ್ಯಪ್ರದೇಶದಲ್ಲಿರುವ ಒಂದು ಘಟಕದಲ್ಲಿ ಆರ್​​ಐಎಲ್ ಹೂಡಿಕೆ ಮಾಡಿದೆ. ಈ ಘಟಕದಲ್ಲಿ 500 ಮೆಗಾವ್ಯಾಟ್ ವಿದ್ಯುತ್ ತಯಾರಾಗುತ್ತದೆ. ಅಷ್ಟೂ ವಿದ್ಯುತ್ ಅನ್ನು ರಿಲಾಯನ್ಸ್ ಬಳಕೆ ಮಾಡಿಕೊಳ್ಳಲು ಈ ಒಪ್ಪಂದ ಮಾಡಿಕೊಂಡಿದೆ. ಈ ಘಟಕದಲ್ಲಿ ತಯಾರಾಗುವ ವಿದ್ಯುತ್ ಅನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಮಾತ್ರವೇ (captive use) ಪಡೆಯಲಿದೆ. ಯಾವ ಉದ್ದೇಶಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಈ ವಿದ್ಯುತ್ ಸರಬರಾಜು ಪಡೆಯುತ್ತಿದೆ ಎಂಬುದು ಬಹಿರಂಗಗೊಂಡಿಲ್ಲ. ಹಾಗೆಯೇ ಎಷ್ಟು ವರ್ಷಕ್ಕೆ ಈ ಒಪ್ಪಂದ ಆಗಿದೆ ಎಂಬುದು ಗೊತ್ತಾಗಬೇಕು.

ಇದನ್ನೂ ಓದಿ: ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್

ಮಹಾನ್ ಥರ್ಮಲ್ ಪವರ್ ಪ್ಲಾಂಟ್ ಒಟ್ಟಾರೆ 1,200 ಮೆಗಾವ್ಯಾಟ್ ವಿದ್ಯುತ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿಸಲಿದೆ. ಅಂದರೆ ಒಟ್ಟಾರೆ 2,800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಇದೆ.

ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಗುಜರಾತ್ ಮೂಲದ ಉದ್ಯಮಿಗಳೇ ಆಗಿದ್ದು, ಅವರವರ ಉದ್ಯಮ ಕ್ಷೇತ್ರ ಬೇರೆ ಬೇರೆಯೇ ಆಗಿದೆ. ಅಂಬಾನಿ ಉದ್ಯಮಗಳು ತೈಲ ಮತ್ತು ಅನಿಲ ಕ್ಷೇತ್ರದಿಂದ ಹಿಡಿದು ಟೆಲಿಕಾಂ, ರೀಟೇಲ್ ಮಾರುಕಟ್ಟೆಯವರೆಗೆ ಹರಡಿದೆ. ಅದಾನಿ ಉದ್ಯಮಗಳು ಪ್ರಮುಖವಾಗಿ ಏರ್​ಪೋರ್ಟ್, ಬಂದರು ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಗಳು, ಮೈನಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಹರಡಿವೆ. ಅಲಿಖಿತ ಒಪ್ಪಂದವೋ ಎಂದು ಅನುಮಾನ ಮೂಡುವಷ್ಟು ಅವರಿಬ್ಬರು ಪರಸ್ಪರ ಪ್ರತಿಸ್ಪರ್ಧಿಗಳಾಗುವುದನ್ನು ಸಾಧ್ಯವಾದಷ್ಟೂ ತಪ್ಪಿಸುತ್ತಿರುವಂತಿದೆ.

ಇದನ್ನೂ ಓದಿ: ಸೊನಾಟ ಫೈನಾನ್ಸ್ ಅನ್ನು 537 ಕೋಟಿ ರೂಗೆ ಖರೀದಿಸಿದ ಕೋಟಕ್ ಮಹೀಂದ್ರ ಬ್ಯಾಂಕ್

ಇದಕ್ಕೆ ಅಪವಾದ ಎಂಬಂತೆ ಇಬ್ಬರೂ ಕೂಡ ರಿನಿವಬಲ್ ಎನರ್ಜಿ ಅಥವಾ ಮರುಬಳಕೆ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಗುಜರಾತ್​ನ ಜಾಮ್​ನಗರದಲ್ಲಿ ಸೋಲಾರ್ ಪ್ಯಾನಲ್, ಬ್ಯಾಟರಿ, ಗ್ರೀನ್ ಹೈಡ್ರೋಜನ್, ಫುಯೆಲ್ ಸೆಲ್​ಗಳ ತಯಾರಿಕೆಗಾಗಿ ತಲಾ ಒಂದರಂತೆ ನಾಲ್ಕು ಗೀಗಾ ಫ್ಯಾಕ್ಟರಿಗಳನ್ನು ಮುಕೇಶ್ ಅಂಬಾನಿ ನಿರ್ಮಿಸುತ್ತಿದ್ದಾರೆ.

ಗೌತಮ್ ಅದಾನಿ ಅವರು ಸೋಲಾರ್ ಮಾಡ್ಯೂಲ್, ವಿಂಡ್ ಟರ್ಬೈನ್, ಹೈಡ್ರೋಜನ್ ಎಲೆಕ್ಟ್ರೋಲೈಸರ್​ಗಳ ತಯಾರಿಕೆಗಾಗಿ ಮೂರು ಗಿಗಾಫ್ಯಾಕ್ಟರಿಗಳನ್ನು ನಿರ್ಮಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ