AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rs.2000 Note Exchange: ಏಪ್ರಿಲ್ 1ರಂದು ಇರಲ್ಲ 2,000 ರೂ ನೋಟುಗಳ ವಿನಿಮಯ ಸೇವೆ

April 1, Annual Closing of Accounts: ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ನೋಟುಗಳನ್ನು ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಆದರೆ, ಏಪ್ರಿಲ್ 1ರಂದು ಆರ್​ಬಿಐ ಕಚೇರಿಗಳಲ್ಲಿ ಈ ಸೇವೆ ಇರುವುದಿಲ್ಲ. ಅಂದು ರಜಾ ದಿನ ಅಲ್ಲವಾದರೂ ವಾರ್ಷಿಕ ಲೆಕ್ಕ ಸಲ್ಲಿಕೆ ಪ್ರಕ್ರಿಯೆ ಇರುವುದರಿಂದ ಆರ್​ಬಿಐ ಸೇರಿದಂತೆ ಬಹುತೇಕ ಬ್ಯಾಂಕುಗಳು ಸಾರ್ವಜನಿಕರಿಗೆ ಲಭ್ಯ ಇರುವುದಿಲ್ಲ.

Rs.2000 Note Exchange: ಏಪ್ರಿಲ್ 1ರಂದು ಇರಲ್ಲ 2,000 ರೂ ನೋಟುಗಳ ವಿನಿಮಯ ಸೇವೆ
2,000 ರೂ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 29, 2024 | 11:05 AM

Share

ನವದೆಹಲಿ, ಮಾರ್ಚ್ 29: ಸಾರ್ವಜನಿಕವಾಗಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು (Rs 2,000 notes) ಏಪ್ರಿಲ್ 1ರಂದು ವಿನಿಮಯಕ್ಕೆ ಅವಕಾಶ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿನ್ನೆ ಗುರುವಾರ ಹೇಳಿದೆ. ಆರ್​ಬಿಐನ 19 ಕಚೇರಿಗಳಲ್ಲಿ (RBI Issue offices) ಈ ನೋಟುಗಳನ್ನು ವಿನಿಮಯ ಮಾಡುವ ಅವಕಾಶ ಇದೆ. ಏಪ್ರಿಲ್ 1ರಂದು ಬ್ಯಾಂಕ್ ರಜಾ ದಿನ ಅಲ್ಲವಾದರೂ ಅಂದು ವಾರ್ಷಿಕ ಲೆಕ್ಕಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಹೀಗಾಗಿ, ಅಂದು ಆರ್​ಬಿಐ ಮಾತ್ರವಲ್ಲ ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಲಭ್ಯ ಇರುವುದಿಲ್ಲ. ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮರಳಿಸುವ ಸೇವೆಯೂ ಅಂದು ಇರುವುದಿಲ್ಲ. ಏಪ್ರಿಲ್ 2ರಂದು, ಹಾಗು ನಂತರ ವರ್ಕಿಂಗ್ ದಿನಗಳಂದು ಆರ್​ಬಿಐ ಕಚೇರಿಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಬಹುದು.

ಹತ್ತು ತಿಂಗಳ ಹಿಂದೆ, 2023ರ ಮೇ 19ರಂದು ಆರ್​ಬಿಐ 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ಘೋಷಿಸಿತು. ಆಗ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಸಾರ್ವಜನಿಕರಲ್ಲಿ ಇತ್ತು ಎನ್ನಲಾಗಿದೆ. ವಿವಿಧ ಬ್ಯಾಂಕುಗಳ ಮೂಲಕ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮ ಅಕೌಂಟ್​​ಗೆ ಡೆಪಾಸಿಟ್ ಮಾಡಲು ಆರ್​ಬಿಐ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಇದೀಗ ಕೆಲ ತಿಂಗಳಿಂದ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರ ಈ ನೋಟುಗಳ ಎಕ್ಸ್​ಚೇಂಜ್​ಗೆ ಅವಕಾಶ ಮುಂದುವರಿದಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯಲ್ಲೂ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಂಚೆ ಮೂಲಕ ಆರ್​ಬಿಐ ಕಚೇರಿ ವಿಳಾಸಕ್ಕೆ ನೋಟು ಕಳುಹಿಸಿ ಆ ಮೂಲಕವೂ ಆ ಹಣವನ್ನು ತಮ್ಮ ಖಾತೆಗಳಿಗೆ ಡೆಪಾಸಿಟ್ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ

ಎಷ್ಟು 2,000 ರೂ ನೋಟುಗಳು ಮರಳಿವೆ?

ಆರ್​ಬಿಐ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ 2024ರ ಮಾರ್ಚ್ 1ರವರೆಗೆ ಶೇ. 97.62ರಷ್ಟು 2,000 ರೂ ನೋಟುಗಳು ಮರಳಿವೆಯಂತೆ. ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂದು 10 ತಿಂಗಳ ಹಿಂದೆ ಘೋಷಿಸಿದಾಗ 3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದವು. ಇದೀಗ ಚಲಾವಣೆಯಲ್ಲಿ ಉಳಿದಿರುವುದು, ಅಂದರೆ ನೋಟುಗಳು ಆರ್​ಬಿಐಗೆ ಇನ್ನೂ ಮರಳದೇ ಇರುವುದು 8,470 ಕೋಟಿ ರೂ ಮೊತ್ತದ್ದು ಎನ್ನಲಾಗಿದೆ.

2016ರಲ್ಲಿ ಆರ್​ಬಿಐ ಅಂದಿನ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ನಗದು ಹಣಕ್ಕೆ ಕೊರತೆ ಬೀಳಬಾರದೆಂಬ ಉದ್ದೇಶಕ್ಕೆ ಸರ್ಕಾರ ತಾತ್ಕಾಲಿಕವಾಗಿ 2,000 ರೂ ಮುಖಬೆಲೆಯ ನೋಟುಗಳನ್ನು ಮೊದಲ ಬಾರಿಗೆ ಪರಿಚಯಿಸಿತು. ಬಳಿಕ 500 ರೂ ಮುಖಬೆಲೆಯ ಹೊಸ ನೋಟುಗಳನ್ನೂ ಮುದ್ರಿಸಿ ಬಿಡುಗಡೆ ಮಾಡಲಾಯಿತು. ಈಗ 2,000 ರೂ ನೋಟುಗಳ ಕಾಲಾವಧಿ ಮುಗಿದ ಕಾರಣಕ್ಕೆ ಅದನ್ನು ಹಿಂಪಡೆಯಲಾಗಿದೆ ಎಂದು ಆರ್​ಬಿಐ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ