ಜಾನ್ ಅಬ್ರಹಾಂ, ಗೌರಿ ಖಾನ್, ನಿಖಿಲ್ ಕಾಮತ್ ಮೊದಲಾದವರಿಂದ ಫಂಡಿಂಗ್ ಪಡೆದ ಸಬ್ಕೋ ಕಾಫಿ; ಏನದರ ವೈಶಿಷ್ಟ್ಯ

Subko Coffee Gets Investment of 10 Million Dollar: ಮುಂಬೈನ ಸ್ಟಾರ್ಟಪ್ ಸಬ್​ಕೋ ಕಾಫಿ ಇದೀಗ 10 ಮಿಲಿಯನ್ ಡಾಲರ್ (83 ಕೋಟಿ ರೂ) ಬಂಡವಾಳ ಕಲೆಹಾಕಿದೆ. ಇದರೊಂದಿಗೆ ಅದರ ಅಂದಾಜು ಮೌಲ್ಯ 300 ಕೋಟಿ ರೂ ಸಮೀಪಕ್ಕೆ ಹೋಗಿದೆ. ಝೀರೋಧ ಸಂಸ್ಥೆಯ ನಿಖಿಲ್ ಕಾಮತ್ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಗೌರಿ ಖಾನ್ ಫ್ಯಾಮಿಲಿ ಟ್ರಸ್ಟ್, ಶ್ರೀನಿವಾಸ್ ಅಂಡ್ ಪಲ್ಲವಿ ಡೆಂಪೋ, ಜಾನ್ ಅಬ್ರಹಾಂ ಮೊದಲಾದ ಸೆಲಬ್ರಿಟಿಗಳು ಮತ್ತು ಉದ್ಯಮಿಗಳೂ ಕೂಡ ಸಬ್ಕೋ ಕಾಫಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಜಾನ್ ಅಬ್ರಹಾಂ, ಗೌರಿ ಖಾನ್, ನಿಖಿಲ್ ಕಾಮತ್ ಮೊದಲಾದವರಿಂದ ಫಂಡಿಂಗ್ ಪಡೆದ ಸಬ್ಕೋ ಕಾಫಿ; ಏನದರ ವೈಶಿಷ್ಟ್ಯ
ಸಬ್ಕೋ ಕಾಫಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 28, 2024 | 11:46 AM

ನವದೆಹಲಿ, ಮಾರ್ಚ್ 28: ತನ್ನ ಅಮೋಘ ಹಾಗೂ ರುಚಿಕರ ಕಾಫಿಗೆ ಹೆಸರುವಾಸಿಯಾಗಿರುವ ಸಬ್​ಕೋ ಕಾಫಿ (Subko Coffee) ಇತ್ತೀಚಿನ ದಿನಗಳಲ್ಲಿ ಬೇರೆ ಕಾರಣಕ್ಕೂ ಗಮನ ಸೆಳೆಯುತ್ತಿದೆ. ಹಲವು ಸೆಲಬ್ರಿಟಿಗಳು ಹಾಗೂ ಉದ್ಯಮಿಗಳಿಂದ ಇದು ಫಂಡಿಂಗ್ ಆಕರ್ಷಿಸುತ್ತಿದೆ. ಇತ್ತೀಚೆಗೆ ಇದು 10 ಮಿಲಿಯನ್ ಡಾಲರ್​ನಷ್ಟು ಫಂಡಿಂಗ್ ಸಂಗ್ರಹಿಸಲು ಯಶಸ್ವಿಯಾಗಿದೆ. ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಪ್ರಮುಖವಾಗಿ ಫಂಡ್ ನೀಡಿದ್ದಾರೆ. ಶಾರುಖ್ ಖಾನ್ ಕುಟುಂಬದ ಗೌರಿ ಖಾನ್ ಫ್ಯಾಮಿಲಿ ಟ್ರಸ್ಟ್, ಜಾನ್ ಅಬ್ರಹಾಂ, ಸಂಗೀತಾ ಜಿಂದಾಲ್, ಪಲ್ಲವಿ ಡೆಂಪೋ, ಮೆಹ್ತಾ ಇಂಟರ್ನ್ಯಾಷನಲ್ ಮಾರಿಷಸ್ ಲಿ ಗ್ರೂ, ಬ್ರೂಮೆ ಫೌಂಡರ್ಸ್ ಫಂಡ್ ಮೊದಲಾದವರಿಂದ ಒಟ್ಟು 10 ಮಿಲಿಯನ್ ಡಾಲರ್ (83 ಕೋಟಿ ರೂ) ಹಣವನ್ನು ಸಬ್​ಕೋ ಕಾಫಿ ಕಲೆಹಾಕಿದೆ. ನಾಲ್ಕು ವರ್ಷದ ಹಿಂದಷ್ಟೇ ಆರಂಭವಾದ ಮುಂಬೈನ ಈ ಸ್ಟಾರ್ಟಪ್​ನ ಈಗಿನ ಮೌಲ್ಯ 34 ಮಿಲಿಯನ್ ಡಾಲರ್ (283 ಕೋಟಿ ರೂ) ಎಂದು ಅಂದಾಜಿಸಲಾಗಿದೆ.

ಈಗ ಬಂದಿರುವ ಹೊಸ ಫಂಡಿಂಗ್​ನಿಂದ ವಿನ್ಯಾಸ ಸಂಶೋಧನೆ, ಉತ್ಪನ್ನ ಗುಣಮಟ್ಟ ಹೆಚ್ಚಳ, ಕುಡಿಯಲು ಸಿದ್ಧವಿರುವ ಹೊಸ ಕಾಫಿ ಉತ್ಪನ್ನಗಳ ಆರಂಭಕ್ಕೆ ಸಹಾಯವಾಗಲಿದೆ ಎನ್ನುವ ಕಂಪನಿ, ನಿಖಿಲ್ ಕಾಮರ್ ಅವರಿಂದ ಫಂಡಿಂಗ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ.

‘ನಿಖಿಲ್ ಪಾಲ್ಗೊಳ್ಳುತ್ತಿರುವುದು ಕೇವಲ ಹೂಡಿಕೆಯಷ್ಟೇ ಅಲ್ಲ, ನಮ್ಮ ಬ್ರ್ಯಾಂಡ್​ನ ಶಕ್ತಿಗೆ ಒಂದು ಮನ್ನಣೆ ಸಿಕ್ಕಂತೆ. ಭಾರತೀಯ ಬ್ರ್ಯಾಂಡ್​ಗಳಿಗೆ ನೆರವು ನೀಡುವ ಅವರ ಕಾಳಜಿ ಹಾಗೂ ಗ್ರಾಹಕ ಮಾರುಕಟ್ಟೆಯಲ್ಲಿ ಅವರ ಅನಿಸಿಕೆಗಳು ನಮ್ಮ ಯೋಜನೆಗೆ ಸರಿಯಾಗಿ ಹೊಂದಿಕೆ ಆಗುತ್ತವೆ. ನಿಖಿಲ್ ಬರುವ ಮುನ್ನ ನಮಗೆ ಬೆಂಬಲ ನೀಡಿದ ಎಲ್ಲಾ ಹೂಡಿಕೆದಾರರಿಗೂ ನಾನು ಋಣಿಯಾಗಿದ್ದೇನೆ,’ ಎಂದು ಸಬ್ಕೋ ಕಾಫಿ ರೋಸ್ಟರ್ಸ್ ಸಂಸ್ಥೆಯ ಸಿಇಒ ರಾಹುಲ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಟೋಲ್ ಬೂತ್ ರಗಳೆ ಇಲ್ಲ; ಶೀಘ್ರದಲ್ಲೇ ಬರಲಿದೆ ಸೆಟಿಲೈಟ್ ಸಿಸ್ಟಂ: ನಿತಿನ್ ಗಡ್ಕರಿ

ಕುತೂಹಲವೆಂದರೆ ಸಬ್ಕೋ ಕಾಫಿಯ ಪ್ರತಿಸ್ಪರ್ಧಿ ಎನಿಸಿರುವ ಥರ್ಡ್ ವೇವ್ ಕಾಫಿ ಸಂಸ್ಥೆಗೂ ನಿಖಿಲ್ ಕಾಮತ್ ಬಂಡವಾಳ ಒದಗಿಸಿದ್ದಾರೆ. ಆದರೆ, ಸಬ್ಕೋ ಕಾಫಿಯ ಗ್ರಾಹಕನಾಗಿ ಈಗ ಹೂಡಿಕೆದಾರನಾಗುವ ಹಂತಕ್ಕೆ ಬಂದ ಪ್ರಯಾಣದಲ್ಲಿ ನಾನು ಈ ಕಂಪನಿಯ ಬೆಳವಣಿಗೆ ಮತ್ತು ಪರಿವರ್ತನೆಯನ್ನು ಕಂಡಿದ್ದೇನೆ ಎಂದು ಸಬ್ಕೋ ಬಗ್ಗೆ ನಿಖಿಲ್ ಕಾಮತ್ ಉದಾರವಾಗಿ ಮಾತನಾಡಿದ್ದಾರೆ.

ಸಬ್​ಕೋ ಶರುವಾಗಿ ಮೂರೇ ದಿನಕ್ಕೆ ದೇಶಾದ್ಯಂತ ಲಾಕ್​​ಡೌನ್

ಸಬ್ಕೋ ಕಾಫಿ ಮುಂಬೈನಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಆರಂಭವಾಯಿತು. ಕುತೂಹಲ ಎಂದರೆ ಇದು ಶುರುವಾಗಿ ಮೂರೇ ದಿನಕ್ಕೆ ಕೊರೋನಾ ಕಾರಣಕ್ಕೆ ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಯಿತು. ಲಾಕ್ ಡೌನ್ ತೆರವುಗೊಂಡ ಬಳಿಕ ಸಬ್ಕೋ ಕಾಫಿಯ ಅಂಗಡಿಗೆ ಜನರು ಮುತ್ತಿಕೊಳ್ಳಲು ಆರಂಭಿಸಿದರಂತೆ.

ಇದನ್ನೂ ಓದಿ: ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು

ಸಬ್ಕೋ ಎಂಬುದು ಹಿಂದಿಯ ಪದ. ಎಲ್ಲರಿಗೂ ಎಂದರ್ಥ. ಎಲ್ಲರಿಗೂ ಪ್ರಿಯವಾಗುವ ಕಾಫಿಯನ್ನು ಒದಗಿಸುವುದು ಇದರ ಸಂಸ್ಥಾಪಕ ರಾಹುಲ್ ರೆಡ್ಡಿಯ ಇಚ್ಛೆ. ಈ ಸಬ್ಕೋ ಔಟ್​ಲೆಟ್​ನಲ್ಲಿ ಕಾಫಿ ಉತ್ಪನ್ನಗಳು ಮಾತ್ರವಲ್ಲ, ಅಲ್ಲಿ ಗ್ರಾಹಕರ ಕಣ್ಮುಂದೆಯೇ ಕಾಫಿ ಬೀಜ ಹುರಿದು ಪುಡಿ ತಯಾರಿಸುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ವಿಶ್ವಾದ್ಯಂತ ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ತರಿಸಿ ಕಾಫಿ ಪುಡಿ ತಯಾರಿಸಲಾಗುತ್ತದೆ. ಆ ಕಾಫಿಯ ಅರೋಮಾ ಅಥವಾ ಸುಗಂಧವು ಗ್ರಾಹಕರಿಗೆ ಪ್ರಿಯವಾಗುತ್ತದೆ. ಬೆಂಗಳೂರಿನಲ್ಲೂ ಸಬ್ಕೋ ಔಟ್​ಲೆಟ್​ಗಳಿವೆ.

ರಾಹುಲ್ ರೆಡ್ಡಿ ಅವರು ಸಬ್ಕೋ ಕಾಫಿಯ ಸಹ-ಸಂಸ್ಥಾಪಕರಲ್ಲಿ ಒಬ್ಬರು. ಅಮೆರಿಕದಲ್ಲಿ ಓದಿ ಬೆಳೆದ ರಾಹುಲ್ ರೆಡ್ಡಿ ಅಪ್ಪಟ ಕಾಫಿ ಪ್ರಿಯರು. ವಿಶ್ವಾದ್ಯಂತ ಅತ್ಯುತ್ತಮ ಕಾಫಿ ರುಚಿ ಸವಿದು, ಈಗ ತಮ್ಮದೇ ಕಾಫಿ ಕಂಪನಿಯನ್ನು ಹುಟ್ಟುಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ