
ನವದೆಹಲಿ, ಮೇ 15: ಗಗನಯಾನ, ಚಂದ್ರಯಾನ ಹೀಗೆ ಆಗಸದ ಶೋಧದಲ್ಲಿ ಪಳಗುತ್ತಿರುವ ಭಾರತ ಈಗ ಸಮುದ್ರಯಾನ (Samudrayaan) ಕೈಗೊಳ್ಳುತ್ತಿದೆ. ಸಾಗರದೊಳಗೆ 6,000 ಮೀಟರ್ (ಆರು ಕಿಲೋಮಿಟರ್) ಆಳಕ್ಕೆ ಮನುಷ್ಯರನ್ನೊಳಗೊಂಡ ನೌಕೆಯನ್ನು ಕಳುಹಿಸಲು ಹೊರಟಿದೆ. ಇದು ಭಾರತದ ಮೊದಲ ಮಾನವ ಸಹಿತ ಸಾಗರದಾಳ ಅನ್ವೇಷಣೆ ಯೋಜನೆ (Manned deep sea mission) ಎನಿಸಿದೆ. 2026ರ ಕೊನೆಯಲ್ಲಿ ಇದು ಆರಂಭವಾಗಬಹುದು ಎಂದು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಬಾಲಾಜಿ ರಾಮಕೃಷ್ಣನ್ ಹೇಳಿದ್ದಾರೆ.
ನೀರೊಳಗೆ ಸಾಗಬಲ್ಲ ಮತ್ಸ್ಯ ಹೆಸರಿನ ನೌಕೆಯು ಸಾಗರದ 6 ಕಿಮೀ ಆಳದವರೆಗೂ ಅನ್ವೇಷಿಸಲಿದೆ. ಇದರಲ್ಲಿ ಮೂವರು ವಿಜ್ಞಾನಿಗಳು ಇರಲಿದ್ದಾರೆ. ಹೊಸ ತಲೆಮಾರಿನ ಈ ನೌಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಇದು 25 ಟನ್ ಭಾರದ್ದಾಗಿದ್ದು ಹೆಚ್ಚಿನ ಭಾಗವನ್ನು ಟೈಟೇನಿಯಂ ಲೋಹದಿಂದ ಮಾಡಲಾಗಿದೆ. ಆರು ಕಿಮೀ ನೀರಿನಾಳದಲ್ಲಿ ವಿಪರೀತ ಒತ್ತಡ ಇರುತ್ತದೆ. ಸಿಕ್ಕಾಪಟ್ಟೆ ಶೀತ ಇರುತ್ತದೆ. ಇದನ್ನು ತಡೆದುಕೊಳ್ಳಬಲ್ಲಷ್ಟು ಶಕ್ತಿಯುತವಾಗಿರುವಂತೆ ನೌಕೆಯನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ… ಇಲ್ಲಿದೆ ಅನುಕೂಲಗಳ ವಿವರ
ಮನುಷ್ಯ ಸಮೀಪದ ಗ್ರಹಗಳವರೆಗೂ ಹೋಗಿ ಬಂದಿದ್ದಾನೆ. ದೂರ ದೂರದ ಗೆಲಾಕ್ಸಿಗಳನ್ನು ದುರ್ಬೀನು ಹಾಕಿಕೊಂಡು ನೋಡುತ್ತಾನೆ. ಆದರೆ, ಭೂಮಿಯ ಗರ್ಭದಲ್ಲಿ ಏನಿದೆ ಎಂದು ಸಂಪೂರ್ಣವಾಗಿ ತಿಳಿಯಲು ಆಗಿಲ್ಲ. ಈಗಲೂ ಕೂಡ ಅಲ್ಲಲ್ಲಿ ಆಳ ಸಮುದ್ರ ಅನ್ವೇಷಣೆ ನಡೆಯುತ್ತಲೇ ಇದೆ. ಭಾರತವು ಮಂಗಳಯಾನದಲ್ಲಿ ನೀರಿನ ಸುಳಿವು ಪತ್ತೆ ಮಾಡಿದಂತೆ ಸಮುದ್ರಯಾನದಲ್ಲೂ ಹೊಸ ಸಂಪನ್ಮೂಲಗಳನ್ನು ಪತ್ತೆ ಮಾಡಬಲ್ಲುದಾ ಎನ್ನುವ ಕುತೂಹಲ ಇದೆ.
6,000 ಮೀಟರ್ ಆಳಕ್ಕೆ ಒಮ್ಮೆಗೇ ಇಳಿಯಲಾಗುವುದಿಲ್ಲ. ಹಂತ ಹಂತವಾಗಿ ಆ ಮಟ್ಟಕ್ಕೆ ಹೋಗಲಿದೆ. ಮೊದಲಿಗೆ 500 ಮೀಟರ್ ಆಳಕ್ಕೆ ಇಳಿಯುವ ಪ್ರಯೋಗ ನಡೆಯಲಿದೆ ಎಂದು ರಾಮಕೃಷ್ಣನ್ ಹೇಳುತ್ತಾರೆ.
ಆಳ ಸಮುದ್ರಕ್ಕೆ ಮನುಷ್ಯರನ್ನು ಕಳುಹಿಸಿರುವ ದೇಶಗಳ ಸಂಖ್ಯೆ ಐದು ಮಾತ್ರ. ಇದು ಸಾಕಷ್ಟು ಪರಿಣಿತಿ ಬೇಡುತ್ತದೆ. ಸಾಗರದಾಳದಲ್ಲಿ ಇರುವ ಜೀವಿಗಳು ಮತ್ತು ನಿರ್ಜೀವಿ ಸಂಪನ್ಮೂಲಗಳು ಎಷ್ಟೆಂಬುದನ್ನು ತಿಳಿಯುವುದು ಈ ಮಿಷನ್ನ ಪ್ರಮುಖ ಉದ್ದೇಶ.
ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಕೆಗೆ ಕಲ್ಲು ಹಾಕುತ್ತಿದ್ದಾರಾ ಟ್ರಂಪ್; ಭಾರತದಿಂದ ಹೊರಬರುವಂತೆ ಆ್ಯಪಲ್ಗೆ ತಿಳಿಸಿದ ಅಮೆರಿಕ ಅಧ್ಯಕ್ಷ
ಸಿಐಒಬಿ ಅಥವಾ ಸೆಂಟ್ರಲ್ ಇಂಡಿಯನ್ ಓಷನ್ ಬೇಸ್ನಲ್ಲಿ ಭಾರತದ ಹಿಡಿತದಲ್ಲಿ 75,000 ಚದರ ಕಿಮೀ ಸಾಗರಪ್ರದೇಶ ಇದೆ. ಇಲ್ಲಿ ಸಾಕಷ್ಟು ಸರ್ವೇಕ್ಷಣೆ ನಡೆಸಲಾಗಿದೆ. ಕಾಪರ್, ನಿಕಲ್, ಕೊಬಾಲ್ಟ್, ಮ್ಯಾಂಗನೀಸ್ ಇತ್ಯಾದಿ ಒಳಗೊಂಡ ಪಾಲಿಮೆಟಾಲಿಕ್ ನೋಡ್ಯೂಲ್ಗಳು 380 ಮಿಲಿಯನ್ ಮೆಟ್ರಿಕ್ ಟನ್ಗಳಿರಬಹುದು. ಇವುಗಳ ಈಗಿನ ಮಾರುಕಟ್ಟೆ ಮೌಲ್ಯ 110 ಬಿಲಿಯನ್ ಡಾಲರ್ ಆಗುತ್ತದೆ. ಅಂದರೆ, ಸುಮಾರು ಒಂದು ಲಕ್ಷ ಕೋಟಿ ರೂನಷ್ಟು ಮೌಲ್ಯದ ಸಂಪತ್ತು ಈ ಸಮುದ್ರದಲ್ಲಿ ಇದೆ.
ಒಂದು ಅಂದಾಜು ಪ್ರಕಾರ, ಇಲ್ಲಿರುವ ಶೇ. 10ರಷ್ಟು ಸಂಪನ್ಮೂಲಗಳನ್ನು ಬಳಸಿಕೊಂಡರೂ ಭಾರತಕ್ಕೆ 100 ವರ್ಷಗಳಿಗೆ ಅಗತ್ಯವಾದ ಶಕ್ತಿ ಮೂಲ ಸಿಕ್ಕಂತಾಗಿ ಹೋಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ