ನವದೆಹಲಿ, ಡಿಸೆಂಬರ್ 9: ಭಾರತೀಯ ರಿಸರ್ವ್ ಬ್ಯಾಂಕ್ಗೆ ನೂತನ ಗವರ್ನರ್ ನೇಮಕವಾಗಿದೆ. ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ಆರ್ಬಿಐನ ಗವರ್ನರ್ ಆಗಿ ಸರ್ಕಾರ ನೇಮಕ ಮಾಡಿದೆ. ಪ್ರಸಕ್ತ ಆರ್ಬಿಐ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರ ಸೇವಾವಧಿ ಡಿಸೆಂಬರ್ 10, ನಾಳೆ ಮಂಗಳವಾರ ಅಂತ್ಯವಾಗುತ್ತಿದೆ. ಡಿಸೆಂಬರ್ 11ಕ್ಕೆ ಸಂಜಯ್ ಮಲ್ಹೋತ್ರಾ ಆರ್ಬಿಐ ಗವರ್ನರ್ ಆಗಿ ಪದಗ್ರಹಣ ಮಾಡಲಿದ್ದಾರೆ. ಮೂರು ವರ್ಷ ಕಾಲ ಅವರ ಸೇವಾವಧಿ ಇದೆ.
ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್ನ 1990ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಐಟಿ ಕಾನ್ಪುರ್ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಪ್ರಿನ್ಸ್ಟನ್ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ಪಾಲಿಸಿಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ರೆವೆನ್ಯೂ ಕಾರ್ಯದರ್ಶಿಯಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್ಇಸಿಯ ಛೇರ್ಮನ್ ಮತ್ತು ಎಂಡಿಯಾಗಿ ಕೆಲಸ ಮಾಡಿದ್ದರು. ಜಿಎಸ್ಟಿ ಮಂಡಳಿಯಲ್ಲೂ ಅವರಿದ್ದರು. ವಿದ್ಯುತ್, ಹಣಕಾಸು, ತೆರಿಗೆ, ಐಟಿ, ಗಣಿ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಂಜಯ್ ಮಲ್ಹೋತ್ರಾ ಕೆಲಸ ಮಾಡಿದ ಅನುಭವಿ ಎನಿಸಿದ್ದಾರೆ.
ವಿದ್ಯುತ್ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿಯಾಗಿದ್ದ ಅವರು 3 ಲಕ್ಷ ಕೋಟಿ ರೂ ಮೊತ್ತದ ವಿದ್ಯುತ್ ವಿತರಣೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದಾರೆ. ತೆರಿಗೆ, ಪಬ್ಲಿಕ್ ಫೈನಾನ್ಸ್, ಇಂಧನ ವಲಯದ ಸುಧಾರಣೆ, ಆರ್ಥಿಕ ಆಡಳಿತದ ವಿಚಾರಗಳಲ್ಲಿ ಅವರಿಗಿರುವ ಪರಿಣಿತಿಯು ಸರ್ಕಾರಕ್ಕೆ ಲಾಭವಾಗುವ ನಿರೀಕ್ಷೆ ಇದೆ. ಆರ್ಬಿಐ ಗವರ್ನರ್ ಆಗಿ ಅವರು ಮೂರು ವರ್ಷ ಸೇವೆ ಸಲ್ಲಿಸಲಿದ್ದಾರೆ.
ಪ್ರಸಕ್ತ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ 2018ರ ಡಿಸೆಂಬರ್ನಲ್ಲಿ ನೇಮಕವಾದವರು. ಎರಡು ಬಾರಿ ಅವರ ಸೇವಾವಧಿ ವಿಸ್ತರಣೆ ಆಗಿದೆ. ಅತಿಹೆಚ್ಚು ಕಾಲ ಆರ್ಬಿಐ ಗವರ್ನರ್ ಆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ದಾಸ್. ಬೆನೆಗಲ್ ರಾಮರಾವು ಎಂಬುವವರು 1949ರಿಂದ 1957ರವರೆಗೆ ಏಳೂವರೆ ವರ್ಷ ಕಾಲ ಆರ್ಬಿಐ ಗವರ್ನರ್ ಆಗಿದ್ದರು. ಶಕ್ತಿಕಾಂತ ದಾಸ್ ಆರು ವರ್ಷ ಆರ್ಬಿಐ ಗವರ್ನರ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Mon, 9 December 24