ನವದೆಹಲಿ: ಕೇಂದ್ರ ಸರ್ಕಾರ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಇದುವರೆಗೂ ಎಷ್ಟು ನೋಟು ವಾಪಸ್ ಬಂದಿವೆ ಎಂಬ ಮಾಹಿತಿ ಸರ್ಕಾರದಿಂದ ಇನ್ನೂ ಬಂದಿಲ್ಲ. ಆದರೆ, ಸ್ಟೇಟ್ ಬ್ಯಾಂಕ್ ಇಂಡಿಯಾದ ಛೇರ್ಮನ್ ದಿನೇಶ್ ಕುಮಾರ್ ಖಾರ (SBI Chairman Dinesh Kumar Khara) ನೀಡಿರುವ ಹೇಳಿಕೆ ಪ್ರಕಾರ ಒಂದು ವಾರದಲ್ಲಿ ಒಟ್ಟು 17,000 ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಬ್ಯಾಂಕಿಗೆ ಬಂದಿವೆಯಂತೆ. ಇದರಲ್ಲಿ 3,000 ಕೋಟಿ ರೂ ಮೌಲ್ಯದ ನೋಟುಗಳು ವಿನಿಮಯವಾದರೆ, 14,000 ಕೋಟಿ ರೂ ಮೌಲ್ಯದಷ್ಟು ಪ್ರಮಾಣದ ನೋಟುಗಳು ಎಸ್ಬಿಐ ಗ್ರಾಹಕರ ಖಾತೆಗಳಿಗೆ ಜಮೆಯಾಗಿವೆ ಎಂಬಂತಹ ಮಾಹಿತಿಯನ್ನು ಎಸ್ಬಿಐ ಛೇರ್ಮನ್ ನೀಡಿದ್ದಾರೆ.
ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಒಟ್ಟು 17,000 ಕೋಟಿ ರೂ ಮೌಲ್ಯದ ನೋಟುಗಳು ಸಂಗ್ರಹವಾಗಿವೆ ಎಂದರೆ 2,000 ರೂ ಮುಖಬೆಲೆಯ 8.5ಕೋಟಿ ನೋಟುಗಳು ಬಂದಿವೆ ಎಂದಾಯಿತು. ಈ ಬಗ್ಗೆ ಎಸ್ಬಿಐನಿಂದ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ, ಎಸ್ಬಿಐ ಸೇರಿದಂತೆ ಪ್ರತಿಯೊಂದು ಬ್ಯಾಂಕು ಕೂಡ 2,000 ರೂ ನೋಟುಗಳು ಸಾರ್ವಜನಿಕರಿಂದ ಜಮೆ ಆದರೆ ಲೆಕ್ಕ ಇಟ್ಟುಕೊಂಡಿರಬೇಕು. ಆರ್ಬಿಐ ಕೇಳಿದಾಗ ಈ ಲೆಕ್ಕ ಕೊಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: India Shines: ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆಗಳು: ಐದನೇ ಸ್ಥಾನಕ್ಕೇರಿದ ಭಾರತ; ಯಾವ ದೇಶಗಳಿದ್ದಾವೆ ಟಾಪ್ನಲ್ಲಿ?
ಆರ್ಬಿಐ ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಿತು. ಮೇ 23ರಿಂದ ಎಲ್ಲಾ ಬ್ಯಾಂಕುಗಳಲ್ಲಿ 2,000 ರೂ ನೋಟು ಹೊಂದಿರುವ ಜನರು ಅದನ್ನು ಮರಳಿಸಲು ಅವಕಾಶ ಕೊಡಲಾಗಿದೆ. ಈ ನೋಟುಗಳನ್ನು ಜನರು ಬೇಕೆಂದರೆ ತಮ್ಮ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಅಥವಾ 2,000 ರೂ ನೋಟು ಬದಲು ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಬಹುದು. ಕೆಲ ಬ್ಯಾಂಕುಗಳಲ್ಲಿ ನೋಟು ಬದಲಾವಣೆಗೆ ಪ್ರತ್ಯೇಕ ಸ್ಲಿಪ್ ಬರೆದುಕೊಡಬೇಕು. ಗುರುತಿನ ಚೀಟಿ, ಪ್ಯಾನ್ ಇತ್ಯಾದಿ ಮಾಹಿತಿಯನ್ನು ಜನರು ಒದಗಿಸಬೇಕು ಎಂದಿದೆ. ಆದರೆ ಎಸ್ಬಿಐನಲ್ಲಿ ಇಂಥ ನಿಯಮಗಳು ಇಲ್ಲ. ಯಾರು ಬೇಕಾದರೂ ಯಾವುದೇ ದಾಖಲೆ ಸಲ್ಲಿಸದೆಯೇ 2,000 ರೂ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಘೋಷಿಸಿತ್ತು. ಅದರಂತೆ ಹೆಚ್ಚಿನ ಜನರು ಎಸ್ಬಿಐನ ಶಾಖೆಗಳಿಗೆ ಎಡತಾಕಿರುವ ಸಾಧ್ಯತೆ ಇದೆ.
ಸರ್ಕಾರದ ಅಂದಾಜು ಪ್ರಕಾರ, 2000 ರೂ ನೋಟು ಹಿಂಪಡೆದಾಗ ಚಲಾವಣೆಯಲ್ಲಿ ಸುಮಾರು 3.62 ಲಕ್ಷ ಕೋಟಿ ರೂ ಮೌಲ್ಯದಷ್ಟು 2,000 ರೂ ನೋಟುಗಳು ಇದ್ದವು ಎನ್ನಲಾಗಿದೆ. ಸೆಪ್ಟಂಬರ್ 30ರವರೆಗೂ 2,000 ರೂ ನೋಟು ಠೇವಣಿ ಇರಿಸಲು ಮತ್ತು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಅಷ್ಟರಲ್ಲಿ ಎಷ್ಟು ಮೊತ್ತದ ನೋಟುಗಳು ಆರ್ಬಿಐಗೆ ಮರಳುತ್ತವೆ ಎಂಬುದು ಕುತೂಹಲದ ಸಂಗತಿ.