ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

Withdraw Cash From ATM Using UPI; ಪ್ರಮುಖ ಬ್ಯಾಂಕ್​ಗಳು ಕಾರ್ಡ್​ರಹಿತ ನಗದು ವಿತ್​ಡ್ರಾಕ್ಕೆ ಅವಕಾಶ ನೀಡುತ್ತಿವೆ. ಯುಪಿಐ ಮೂಲಕ ಎಟಿಎಂನಿಂದ ನಗದು ವಿತ್​ಡ್ರಾ ಮಾಡುವ ಹಂತ ಹಂತದ ಮಾಹಿತಿ ಇಲ್ಲಿದೆ.

ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI
Updated By: ಅಕ್ಷತಾ ವರ್ಕಾಡಿ

Updated on: Feb 14, 2023 | 12:14 PM

ನಗದು ವಿತ್​ಡ್ರಾ ಮಾಡಬೇಕೆಂದರೆ ತಕ್ಷಣ ನೆನಪಾಗುವುದು ಎಟಿಎಂ (Automated Teller Machine). ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Debit or Credit Card) ಬಳಸಿಕೊಂಡು ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಸಾಮಾನ್ಯ. ಆದರೆ ಈಗ ಎಸ್​ಬಿಐ (SBI), ಎಚ್​ಡಿಎಫ್​ಸಿ ಬ್ಯಾಂಕ್ (HDFC Bank), ಪಂಜಾಬ್ ನ್ಯಾಷನಲ್​ ಬ್ಯಾಂಕ್​ (PNB) ಸೇರಿದಂತೆ ಪ್ರಮುಖ ಬ್ಯಾಂಕ್​ಗಳು ಕಾರ್ಡ್​ರಹಿತ ನಗದು ವಿತ್​ಡ್ರಾಕ್ಕೆ ಅವಕಾಶ ನೀಡುತ್ತಿವೆ. ಯುಪಿಐ (UPI) ಆ್ಯಪ್​ ಮೂಲಕವೂ ಎಟಿಎನಿಂದ ಹಣ ವಿತ್​​ಡ್ರಾ ಮಾಡಬಹುದಾಗಿದೆ.

ಇಂಟರ್‌ಆಪರೇಬಲ್ ಕಾರ್ಡ್​ಲೆಸ್ ಕ್ಯಾಶ್ ವಿತ್​ಡ್ರಾವಲ್ (ಐಸಿಸಿಡಬ್ಲ್ಯು) ಎಂದು ಕರೆಯಲಾಗುವ ಕಾರ್ಡ್​​ರಹಿತ ನಗದು ವಿತ್​ಡ್ರಾ ಆಯ್ಕೆಯಲ್ಲಿ ಹಲವಾರು ಪ್ರಯೋಜನಗಳಿವೆ. ಈ ಸೌಲಭ್ಯಕ್ಕೆ ಶುಲ್ಕ ಇರುವುದಿಲ್ಲ. ಪ್ರಯಾಣದ ವೇಳೆ ಕಾರ್ಡ್ ಕೊಂಡೊಯ್ಯುವುದು ಅಥವಾ ಎಟಿಎಂ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳಬೇಕಾದ ಅಗತ್ಯವೂ ಇರುವುದಿಲ್ಲ. ತಪ್ಪಾದ ಪಿನ್ ಸಂಖ್ಯೆ ನಮೂದಿಸಿ ಟ್ರಾನ್ಸಾಕ್ಷನ್ ವಿಫಲವಾಗುವುದು, ಕಾರ್ಡ್​ ಕಳೆದುಹೋಗುವುದು ಇತ್ಯಾದಿ ಸಮಸ್ಯೆಗಳಿಗೂ ಕಾರ್ಡ್​ರಹಿತ ನಗದು ವಿತ್​ಡ್ರಾ ಸೌಲಭ್ಯದಿಂದ ಪ್ರಯೋಜನ ದೊರೆಯಲಿದೆ.

ಐಸಿಸಿಡಬ್ಲ್ಯು ಸೌಲಭ್ಯವು ಗೂಗಲ್ ಪೇ, ಫೊನ್​ ಪೇ ಸೇರಿದಂತೆ ಹೆಚ್ಚಿನ ಯುಪಿಐ ಆ್ಯಪ್​ಗಳಲ್ಲಿ ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಬೇಕಾದರೆ ಮೊಬೈಲ್​ ಮತ್ತು ಎಟಿಎಂ ಯಂತ್ರ ಇಂಟರ್ನೆಟ್ ಸಂಪರ್ಕ ಹೊಂದಿರಬೇಕು. ಈ ವಿಧಾನದಲ್ಲಿ ಗರಿಷ್ಠ 5,000 ರೂ.ವರೆಗೆ ಮಾತ್ರ ನಗದು ವಿತ್​ಡ್ರಾ ಮಾಡಬಹುದು ಎಂಬುದನ್ನು ತಿಳಿದಿರಿ. ಯುಪಿಐ ಮೂಲಕ ನಗದು ವಿತ್​ಡ್ರಾ ಮಾಡುವ ಹಂತ ಹಂತದ ಮಾಹಿತಿ ಇಲ್ಲಿದೆ.

ಯುಪಿಐ ಮೂಲಕ ನಗದು ವಿತ್​ಡ್ರಾ ಹೀಗೆ ಮಾಡಿ…

  1. ಎಟಿಎಂ ಕೇಂದ್ರಕ್ಕೆ ತೆರಳಿ, ಸ್ಕ್ರೀನ್​ನಲ್ಲಿ ‘ವಿತ್​ಡ್ರಾ ಕ್ಯಾಶ್’ ಆಯ್ಕೆಯನ್ನು ಪ್ರೆಸ್ ಮಾಡಿ.
  2. ಸ್ಕ್ರೀನ್​ನಲ್ಲಿ ಹಲವು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ‘ಯುಪಿಐ’ ಆಯ್ಕೆಯನ್ನು ಪ್ರೆಸ್ ಮಾಡಿ.
  3. ನೀವು ‘ಯುಪಿಐ’ ಆಯ್ಕೆಯನ್ನು ಕ್ಲಿಕ್ ಮಾಡುತ್ತಿದ್ದಂತೆಯೇ ಕ್ಯುಆರ್ ಕೋಡ್ ಕಾಣಿಸುತ್ತದೆ.
  4. ಮೊಬೈಲ್ ಫೋನ್​ನಲ್ಲಿ ಯುಪಿಐ ಆ್ಯಪ್ ಓಪನ್ ಮಾಡಿಕೊಂಡು ಕ್ಯುಆರ್ ಕೋಡ್ ಸ್ಕ್ಯಾನರ್​ ಅನ್ನು ತೆರೆಯಿರಿ.
  5. ಎಟಿಎಂ ಯಂತ್ರದಲ್ಲಿ ಕಾಣಿಸುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
  6. ಯುಪಿಐ ಟ್ರಾನ್ಸಾಕ್ಷನ್ ಮಾದರಿಯಲ್ಲೇ ನಿಮಗೆ ಡ್ರಾ ಮಾಡಿಕೊಳ್ಳಬೇಕಿರುವ ಮೊತ್ತವನ್ನು ಎಂಟರ್ ಮಾಡಿ (ಗರಿಷ್ಠ ಮಿತಿ 5,000 ರೂ.).
  7. ಯುಪಿಐ ಪಿನ್ ಎಂಟರ್ ಮಾಡಿ ಮುಂದುವರಿಯಿರಿ.
  8. ಇಷ್ಟು ಮಾಡಿದ ಕೂಡಲೇ, ಎಟಿಎಂನಿಂದ ಹಣ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Mon, 21 November 22