ನವದೆಹಲಿ: ಷೇರುಪೇಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕೆಂದು ಸಲಹೆ ಕೊಡುವ ಅಡ್ವೈಸರ್ಗಳನ್ನು ನೋಡಿರುತ್ತೇವೆ. ಯಾರಂದವರು ಈ ರೀತಿ ಹೂಡಿಕೆ ಸಲಹೆ ಕೊಡುವಂತಿಲ್ಲ. ಷೇರುಪೇಟೆಯ ಅಧಿಕೃತ ಪ್ರಾಧಿಕಾರ ಎನಿಸಿದ ಸೆಬಿಯಲ್ಲಿ ನೊಂದಾಯಿತವಾದ ಸಂಸ್ಥೆಗಳು ಅಥವಾ ವ್ಯಕ್ತಿಗಳು ಮಾತ್ರ ಇನ್ವೆಸ್ಟ್ಮೆಂಟ್ ಅಡ್ವೈಸರಿ ಸೇವೆ (Stock Investment Advisory Service) ನೀಡಬಹುದು. ಆದರೆ, ಸೆಬಿಯಲ್ಲಿ (SEBI) ನೊಂದಾಯಿತವಾಗದೇ ಈ ರೀತಿಯ ಹೂಡಿಕೆ ಸಲಹೆಯ ಸೇವೆ ನೀಡುತ್ತಿದ್ದ ಕೆಲ ಸಂಸ್ಥೆಗಳನ್ನು ಸೆಬಿ 6 ತಿಂಗಳ ಕಾಲ ನಿರ್ಬಂಧಿಸಿದೆ. ಇಂಥ ಅನಧಿಕೃತ ಹೂಡಿಕೆ ಸಲಹೆಗಳ ಸೇವೆಗೆ ಜನರಿಂದ ಪಡೆದ ಹಣವನ್ನು ಮೂರು ತಿಂಗಳಲ್ಲಿ ಮರಳಿಸುವಂತೆ ಈ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಕೋರ್ಸ್ ವರ್ಕ್ ಫೋಕಸ್, ಕ್ಯಾಪಿಟಲ್ ರಿಸರ್ಚ್ ಮತ್ತು ಕ್ಯಾಪ್ರೆಸ್ ಸಂಸ್ಥೆಗಳು ಹಾಗೂ ಅವುಗಳ ಮಾಲೀಕರಿಗೆ ಸೆಬಿ 6 ತಿಂಗಳ ಕಾಲ ನಿಷೇಧ ಹಾಕಿದೆ.
ಕೋರ್ಸ್ ವರ್ಕ್ ಫೋಕಸ್ ಹಾಗು ಅದರ ಮಾಲೀಕ ಶಶಾಂಕ್ ಹಿರ್ವಾನಿ; ಕ್ಯಾಪಿಟಲ್ ರಿಸರ್ಚ್ ಹಾಗೂ ಅದರ ಮಾಲೀಕ ಗೋಪಾಲ್ ಗುಪ್ತಾ; ಕ್ಯಾಪ್ರೆಸ್ ಹಾಗೂ ಅದರ ಮಾಲೀಕ ರಾಹುಲ್ ಪಟೇಲ್ ಅವರುಗಳು 6 ತಿಂಗಳ ಕಾಲ ಷೇರು ಮಾರುಕಟ್ಟೆಗಳ ವ್ಯವಹಾರಗಳಲ್ಲಿ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ತೊಡಗಿಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ಕ್ಯಾಪಿಟಲ್ ರಿಸರ್ಚ್, ಕೋರ್ಸ್ ವರ್ಕ್ ಫೋಕಸ್ ಮತ್ತು ಕ್ಯಾಪ್ರೆಸ್ ಸಂಸ್ಥೆಗಳ ವಿರುದ್ಧ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸೆಬಿ (SEBI- Securities and Exchange Board of India) ಈ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ತನಿಖೆ ನಡೆಸಿತ್ತು. ಈ ಕಂಪನಿಗಳ ಮೇಲಿನ ಆರೋಪ ನಿಜವಾಗಿರುವುದು ಗೊತ್ತಾದ ಬಳಿಕ ನಿಷೇಧಿಸುವ ಕ್ರಮವನ್ನು ಸೆಬಿ ಜಾರಿಗೊಳಿಸಿದೆ.
ಕೋರ್ಸ್ ವರ್ಕ್ ಫೋಕಸ್ ಸಂಸ್ಥೆ 2018 ಮಾರ್ಚ್ನಿಂದ 2020 ಜುಲೈವರೆಗೆ ಹೂಡಿಕೆದಾರರಿಂದ 96 ಲಕ್ಷ ರೂ ಶುಲ್ಕ ಪಡೆದಿತ್ತು. ಕ್ಯಾಪಿಟಲ್ ರಿಸರ್ಚ್ ಮತ್ತು ಕ್ಯಾಪ್ರೆಸ್ ಸಂಸ್ಥೆಗಳು 2014 ಜೂನ್ನಿಂದ 2019 ನವೆಂಬರ್ವರೆಗೂ 60.84 ಲಕ್ಷ ರೂ ಹಣವನ್ನು ಹೂಡಿಕೆ ಸಲಹೆಯ ಸೇವೆಯ ಶುಲ್ಕವಾಗಿ ಪಡೆದಿದ್ದವು. ಸೆಬಿಯಲ್ಲಿ ನೊಂದಾಯಿತವಾಗದೇ ಅನಧಿಕೃತವಾಗಿ ಹೂಡಿಕೆ ಸಲಹೆಯ ಸೇವೆಗಳನ್ನು ನೀಡಲಾಗಿತ್ತು ಎಂಬುದು ಬಹಿರಂಗವಾಗಿದೆ. ಮೂರು ತಿಂಗಳ ಒಳಗಾಗಿ ಈ ಸಂಸ್ಥೆಗಳು ಮೇಲೆ ತಿಳಿಸಿದ ಹಣವನ್ನು ಹೂಡಿಕೆದಾರರಿಗೆ ಮರಳಿಸಬೇಕೆಂದು ಸೆಬಿ ಆದೇಶಿಸಿದೆ.
ಇದನ್ನೂ ಓದಿ: Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ
ಇಂಥ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ನಮ್ಮ ಸುತ್ತಲೂ ಇರಬಹುದು. ಸೆಬಿಯಿಂದ ಮಾನ್ಯತೆ ಪಡೆದ ಸಂಸ್ಥೆಗಳು ಮತ್ತು ವ್ಯಕ್ತಿಗಳು ಮಾತ್ರ ಅಧಿಕೃತವಾಗಿ ಹೂಡಿಕೆದಾರರಿಗೆ ಸಲಹೆಗಳನ್ನು ನೀಡಿ ಅದಕ್ಕೆ ಸೇವಾ ಶುಲ್ಕ ಪಡೆಯಬಹುದು. ಯಾರಾದರೂ ಅನಧಿಕೃತವಾಗಿ ಈ ಸೇವೆ ನೀಡುತ್ತಿದ್ದರೆ ಸೆಬಿಯ ಗಮನಕ್ಕೆ ತರುವುದು ಒಳ್ಳೆಯದು. ಷೇರುಪೇಟೆಯಲ್ಲಿ ಮಾಡುವ ಎಲ್ಲಾ ಹೂಡಿಕೆಯೂ ಲಾಭ ತರುವುದಿಲ್ಲ. ಯಾವ ಷೇರಿನ ಮೇಲೆ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ಗ್ರಹಿಸುವುದು ತುಸು ಕಷ್ಟಕರ. ಹೀಗಾಗಿ, ಅನಧಿಕೃತ ಸಲಹೆಗಾರರ ಮಾತುಗಳನ್ನು ನಂಬಿ ಹಣ ಕಳೆದುಕೊಂಡೀರಿ ಜೋಕೆ…!
Published On - 1:59 pm, Fri, 7 April 23