ನವದೆಹಲಿ, ಆಗಸ್ಟ್ 16: ಹಿಂಡನ್ಬರ್ಗ್ ರಿಸರ್ಚ್ನ ಇತ್ತೀಚಿನ ವರದಿಯೊಂದರಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಯ್ಟರ್ಸ್ ಸುದ್ದಿಸಂಸ್ಥೆಯ ವರದಿಯೊಂದರಲ್ಲಿ ಅವರ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಸೆಬಿಗೆ ಸೇರ್ಪಡೆಯಾದಾಗನಿಂದ ಅವರು ಕನ್ಸಲ್ಟೆನ್ಸಿ ಸಂಸ್ಥೆಯೊಂದರಿಂದ ಆದಾಯ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಲಭ್ಯ ಇರುವ ದಾಖಲೆಗಳನ್ನು ಉಲ್ಲೇಖಿಸಿ ಈ ವರದಿಯಲ್ಲಿ ಹೇಳಲಾಗಿದೆ. ಈ ವರದಿಯಲ್ಲಿ ತಿಳಿಸಿರುವ ಅಂಶ ನಿಜವೇ ಆದಲ್ಲಿ ಸೆಬಿ ನಿಯಮಗಳನ್ನು ಮಾಧಬಿ ಬುಚ್ ಅವರು ಉಲ್ಲಂಘಿಸಿದಂತಾಗುತ್ತದೆ.
ಹಿಂಡನ್ಬರ್ಗ್ ರಿಸರ್ಚ್ ಕಳೆದ ವಾರ ಮಾಡಿರುವ ಆರೋಪಗಳ ಪ್ರಕಾರ, ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ಗೆ ಸಂಬಂಧ ಇರುವಂತಹ ಫಂಡ್ಗಳಲ್ಲಿ ಪಾಲು ಹೊಂದಿದ್ದಾರೆ. ಹೀಗಾಗಿ, ಅದಾನಿ ವಿರುದ್ಧ ತಾನು ಮಾಡಿರುವ ಆರೋಪಗಳ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ಹಿಂಡನ್ಬರ್ಗ್ ಟೀಕಿಸಿದೆ. ಈ ಆರೋಪವನ್ನು ತನ್ನ ಮೇಲೆ ವೈಯಕ್ತಿಕವಾಗಿ ನಡೆದ ಚಾರಿತ್ರ್ಯ ವಧೆ ಎಂದು ಮಾಧವಿ ಬುಚ್ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಭಾರತೀಯ ತಳಿಯ ಮಾವಿನಹಣ್ಣು ಬೆಳೆದು ಭಾರತಕ್ಕಿಂತಲೂ ಹೆಚ್ಚು ರಫ್ತು ಮಾಡುತ್ತಿದೆ ಚೀನಾ
ಇದರ ಬೆನ್ನಲ್ಲೇ ರಾಯ್ಟರ್ಸ್ ಸುದ್ದಿ ಸಂಸ್ಥೆ ಮತ್ತೊಂದು ಎಳೆ ಬಿಚ್ಚಿಟ್ಟಿದೆ. ಮಾಧವಿ ಬುಚ್ ಮತ್ತವರ ಪತಿ ಧವಳ್ ಬುಚ್ ಅವರು ಸಿಂಗಾಪುರ ಮೂಲದ ಅಗೋರಾ ಪಾರ್ಟ್ನರ್ಸ್ ಮತ್ತು ಭಾರತದ ಅಗೋರಾ ಅಡ್ವೈಸರಿ ಎಂಬ ಎರಡು ಕನ್ಸಲ್ಟೆನ್ಸಿ ಕಂಪನಿ ಹೊಂದಿದ್ದಾರೆ. ಮಾಧವಿ ಅವರು 2017ರಲ್ಲಿ ಸೆಬಿಗೆ ಸದಸ್ಯೆಯಾಗಿ ಸೇರ್ಪಡೆಯಾದರು. 2022ರಿಂದ ಅವರು ಸೆಬಿ ಮುಖ್ಯಸ್ಥೆಯಾಗಿದ್ದಾರೆ.
ಅಗೋರಾ ಅಡ್ವೈಸರಿ ಸಂಸ್ಥೆಯಲ್ಲಿ ಮಾಧವಿ ಅವರು ಶೇ. 99ರಷ್ಟು ಷೇರುಪಾಲು ಹೊಂದಿದ್ದಾರೆ. ಈ ಕನ್ಸಲ್ಟೆನ್ಸಿ ಕಂಪನಿ ಏಳು ವರ್ಷದಲ್ಲಿ 3.71 ಕೋಟಿ ರೂ ಆದಾಯ ಗಳಿಸಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ಕಂಪನಿ ರಿಜಿಸ್ಟ್ರಾರ್ನಲ್ಲಿರುವ ಸಾರ್ವಜನಿಕ ದಾಖಲೆಗಳನ್ನು ಈ ವರದಿ ಉಲ್ಲೇಖಿಸಿದೆ.
2008ರ ಸೆಬಿ ನೀತಿ ಪ್ರಕಾರ ಅದರ ಯಾವುದೇ ಅಧಿಕಾರಿಯೂ ಲಾಭದಾಯಕವಾದ ಅನ್ಯ ಹುದ್ದೆ ಹೊಂದಿರುವಂತಿಲ್ಲ. ಇತರ ವೃತ್ತಿಪರ ಚಟುವಟಿಕೆಗಳಿಂದ ಸಂಬಳವಾಗಲೀ, ವೃತ್ತಿಪರ ಶುಲ್ಕವಾಗಲೀ ಸ್ವೀಕರಿಸುವಂತಿಲ್ಲ ಎಂದಿದೆ. ಹೀಗಾಗಿ, ಸೆಬಿ ಸದಸ್ಯೆ ಮತ್ತು ಮುಖ್ಯಸ್ಥೆಯಾಗಿದ್ದುಕೊಂಡು ಮಾಧವಿ ಅವರು ಕನ್ಸಲ್ಟೆನ್ಸಿ ಸಂಸ್ಥೆಯೊಂದರಿಂದ ಆದಾಯ ಗಳಿಸುತ್ತಿರುವುದು ಸೆಬಿ ನಿಯಮದ ಉಲ್ಲಂಘನೆ ಆಗುತ್ತದೆ.
ಇದನ್ನೂ ಓದಿ: ಒಂದು ಕಾಲದಲ್ಲಿ ಇಡೀ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನೇ ಖರೀದಿಸಿದ ಭಾರತೀಯ ವ್ಯಕ್ತಿಯ ಕಥೆ
ಹಿಂಡನ್ಬರ್ಗ್ ಆರೋಪ ಬಂದಾಗಲೇ ಮಾಧವಿ ಬುಚ್ ತಾನು ಯಾವುದನ್ನೂ ಮುಚ್ಚಿಟ್ಟಿಲ್ಲ, ಎಲ್ಲವೂ ತೆರೆದ ಪುಸ್ತಕದಂತಿದೆ ಎಂದಿದ್ದರು. ತನ್ನ ಎಲ್ಲಾ ಹಿಂದಿನ ವ್ಯವಹಾರಗಳು ಈಗಿನ ಸ್ಥಾನಮಾನಗಳು ಎಲ್ಲಾ ವಿವರವನ್ನು ಸೆಬಿಗೆ ಕಾಲಕಾಲಕ್ಕೆ ಸಲ್ಲಿಸುತ್ತಾ ಬಂದಿದ್ದೇನೆ ಎಂದು ಹೇಳಿದ್ದರು. ಈ ಕನ್ಸಲ್ಟೆನ್ಸಿಯಿಂದ ಆದಾಯ ಬರುತ್ತಿರುವ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿದ್ದು ಗೊತ್ತಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ