ಭಾರತೀಯ ತಳಿಯ ಮಾವಿನಹಣ್ಣು ಬೆಳೆದು ಭಾರತಕ್ಕಿಂತಲೂ ಹೆಚ್ಚು ರಫ್ತು ಮಾಡುತ್ತಿದೆ ಚೀನಾ
China vs India mango exports: ವಿಶ್ವದಲ್ಲಿ ಅತಿಹೆಚ್ಚು ಮಾವಿನ ಹಣ್ಣು ಬೆಳೆಯುವುದು ಭಾರತದಲ್ಲಿ. ಆದರೆ, ಮಾವಿನ ರಫ್ತಿನ ವಿಚಾರಕ್ಕೆ ಬಂದರೆ ಭಾರತ ನಂಬರ್ ಒನ್ ಅಲ್ಲ. 1960ರ ದಶಕದವರೆಗೂ ಚೀನಾದಲ್ಲಿ ಬಹುತೇಕ ಅಪರಿಚಿತವಾಗಿದ್ದ ಮಾವು ಈಗ ಅಲ್ಲಿ ಹುಲುಸಾಗಿ ಬೆಳೆಯಲಾಗುತ್ತಿದೆ. ಮಾವಿನ ರಫ್ತಿನಲ್ಲಿ ಚೀನಾ ಭಾರತವನ್ನೂ ಮೀರಿಸಿದೆ. ಎರಡು ವರ್ಷ ಸತತವಾಗಿ ಭಾರತಕ್ಕಿಂತ ಚೀನಾ ಹೆಚ್ಚು ಮಾವು ರಫ್ತು ಮಾಡಿದೆ.
ನವದೆಹಲಿ, ಆಗಸ್ಟ್ 16: ಹಣ್ಣುಗಳ ರಾಜ ಮಾವು. ಮಾವಿನ ಹಣ್ಣು ಅತಿಹೆಚ್ಚು ಬೆಳೆಯುವುದು ಭಾರತದಲ್ಲೇ. ಜಗತ್ತಿನ ಮಾವಿನ ಉತ್ಪಾದನೆಯಲ್ಲಿ ಶೇ. 40ರಷ್ಟು ಪಾಲು ಭಾರತದ್ದು. ಆದರೆ, ಮಾವಿನ ರಫ್ತಿಗೆ ಬಂದರೆ ಭಾರತವನ್ನು ಮೀರಿಸುತ್ತಿದೆ ಚೀನಾ. ವಿಪರ್ಯಾಸ ಎಂದರೆ ಭಾರತದ ವಿಶೇಷ ಮಾವು ತಳಿಗಳಾದ ಆಲ್ಫೋನ್ಸೋ, ದಾಶೇರಿ, ಲಾಂಗ್ರ ಮೊದಲಾದ ಮಾವಿನ ಹಣ್ಣುಗಳನ್ನು ಚೀನಾ ಆಯ್ದುಕೊಂಡು ಬೆಳೆಯುತ್ತಿದೆ. ಈ ತಳಿಯ ಹಣ್ಣುಗಳಿಗೆ ಒಳ್ಳೆಯ ಬೇಡಿಕೆ ಇದೆ. ಚೀನಾ ಈ ಹಣ್ಣುಗಳನ್ನು ರಫ್ತು ಮಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಾವುಗಳ ರಫ್ತಿನಲ್ಲಿ ಭಾರತದ ಮೇಲೆ ಮೇಲುಗೈ ಸಾಧಿಸಿದೆ ಚೀನಾ ಎಂದು ದಿ ಮಿಂಟ್ ಪತ್ರಿಕೆಯ ವಿಶೇಷ ವರದಿಯಲ್ಲಿ ಹೇಳಲಾಗಿದೆ.
ಇಂಟರೆಸ್ಟಿಂಗ್ ಸಂಗತಿ ಎಂದರೆ ಚೀನಾಗೆ ಭಾರತದ ಮಾವಿನ ರುಚಿ ತೋರಿಸಿದವರು ಮಾಜಿ ಪ್ರಧಾನಿಯೊಬ್ಬರಂತೆ. ಈಗ ಭಾರತೀಯ ತಳಿಯ ಮಾವನ್ನು ಚೀನಾ ಹೆಚ್ಚಾಗಿ ಬೆಳೆಯತೊಡಗಿದೆ. ರಫ್ತಿನಲ್ಲಿ ಭಾರತವನ್ನು ಮೀರಿಸುವುದರ ಜೊತೆಗೆ ಭಾರತಕ್ಕೂ ಚೀನೀ ಹಣ್ಣುಗಳು ಬರುತ್ತಿವೆ.
ಭಾರತ ಅತಿಹೆಚ್ಚು ಮಾವಿನ ಹಣ್ಣ ಬೆಳೆಯುವ ದೇಶವಾದರೂ ದೇಶೀಯ ಮಾರುಕಟ್ಟೆಗೆ ಹೆಚ್ಚಿನ ಹಣ್ಣು ಪೂರೈಕೆ ಆಗುತ್ತದೆ. ಹೀಗಾಗಿ ರಫ್ತಾಗುವುದು ಕಡಿಮೆಯೇ. ಈ ಕೊರತೆಯನ್ನು ಚೀನಾ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದೆ. 2023ರಲ್ಲಿ ಚೀನಾ ರಫ್ತು ಮಾಡಿದ ಮಾವಿನ ಹಣ್ಣಿನ ಮೌಲ್ಯ 59.43 ಮಿಲಿಯನ್ ಡಾಲರ್. ಇದೇ ವೇಳೆ, ಭಾರತ ಮಾಡಿದ ಮಾವಿನ ರಫ್ತು 55.94 ಮಿಲಿಯನ್ ಡಾಲರ್.
ಇದನ್ನೂ ಓದಿ: ಒಂದು ಕಾಲದಲ್ಲಿ ಇಡೀ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನೇ ಖರೀದಿಸಿದ ಭಾರತೀಯ ವ್ಯಕ್ತಿಯ ಕಥೆ
2022ರಲ್ಲಿ ಚೀನಾ 61.91 ಮಿಲಿಯನ್ ಡಾಲರ್ ಮತ್ತು ಭಾರತ 45.76 ಮಿಲಿಯನ್ ಡಾಲರ್ ಮೌಲ್ಯದ ಮಾವಿನ ಸರಕುಗಳನ್ನು ರಫ್ತು ಮಾಡಿದ್ದವು. ಮಾವಿನ ರಫ್ತಿನಲ್ಲಿ ಭಾರತ ಮತ್ತು ಚೀನಾ ಎರಡನ್ನೂ ಮೀರಿಸುವ ದೇಶಗಳೆಂದರೆ ಮೆಕ್ಸಿಕೋ ಮತ್ತು ಪೆರು.
2022ರಲ್ಲಿ ಭಾರತದ ಮಾವಿನ ರಫ್ತು ಬಹಳ ಕಡಿಮೆ ಆಗಿತ್ತು. 2023ರಲ್ಲಿ ರಫ್ತು ಹೆಚ್ಚಾಯಿತು. ಈ ವರ್ಷ (2024ರಲ್ಲಿ) ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ 49.55 ಮಿಲಿಯನ್ ಡಾಲರ್ ಮೊತ್ತದ ಮಾವಿನ ಹಣ್ಣನ್ನು ಭಾರತ ರಫ್ತು ಮಾಡಿದೆ. ಇನ್ನೂ ನಾಲ್ಕೈದು ತಿಂಗಳು ಬಾಕಿ ಇರುವುದರಿಂದ 2023ದಕ್ಕಿಂತಲೂ ಹೆಚ್ಚು ಮಾವಿನ ಹಣ್ಣನ್ನು ಈ ವರ್ಷ ಭಾರತ ರಫ್ತು ಮಾಡುವ ಸಾಧ್ಯತೆ ಇದೆ.
ಚೀನಾಗೆ ಗಿಫ್ಟ್ ಕೊಟ್ಟಿದ್ದ ನೆಹರೂ
ದಶಕಗಳ ಹಿಂದಿನವರೆಗೆ ಚೀನಾದ ದಕ್ಷಿಣದ ಕೆಲ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದುದು ಬಿಟ್ಟರೆ ಮಾವು ಆ ದೇಶಕ್ಕೆ ಬಹುತೇಕ ಅಪರಿಚಿತವಾಗಿತ್ತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಚೀನಾ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿತ್ತು. ವಾಡಿಕೆಯಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಚೀನಾದ ಪ್ರಧಾನಿ ಝೋ ಎನ್ಲಾಯ್ ಅವರಿಗೆ ಎಂಟು ಮಾವಿನ ತಳಿಗಳ ಗಿಡಗಳನ್ನು ಉಡುಗೊರೆಯಾಗಿ ಕಳುಹಿಸಿದ್ದರು. ಆಲ್ಫೋನ್ಸೋ, ಚೌಸಾ, ಲಾಂಗ್ರಾ, ದಶೇರಿ ತಳಿಯ ಗಿಡಗಳೂ ಇದ್ದವು.
ಚೀನಾದ ಹೈನನ್, ಗ್ವಾಂಗ್ಡೋಂಗ್ ಮೊದಲಾದ ಕೆಲ ಪ್ರಾಂತ್ಯಗಳಲ್ಲಿ ಭಾರತೀಯ ಮಾವು ತಳಿಗಳ ಮರಗಳನ್ನು ಬೆಳೆಸಲು ಸೂಕ್ತ ವಾತಾವರಣ ಇದೆ. ಇಲ್ಲಿ ಈ ಗಿಡಗಳನ್ನು ವ್ಯಾಪಕವಾಗಿ ಬೆಳಸಲಾಗುತ್ತಿದೆ. ಈಗ ಮಾವು ಬೆಳೆಯುವುದರಲ್ಲಿ ಚೀನಾ ಪರಿಣಿತಿ ಸಾಧಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ