ನವದೆಹಲಿ, ಸೆಪ್ಟೆಂಬರ್ 3: ಷೇರುಮಾರುಕಟ್ಟೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಹೂಡಿಕೆ ಮಾಡುತ್ತಿರುವ ಭಾರತೀಯ ಸಂಖ್ಯೆ ಕಡಿಮೆ. ಬಹಳ ಅದ್ವಿತೀಯವಾಗಿ ಲಾಭ ತರುತ್ತಿರುವ ಷೇರುಪೇಟೆಯ ಪ್ರಯೋಜನ ಬಹಳ ಜನರಿಗೆ ತಪ್ಪುತ್ತಿದೆ. ಹೀಗಾಗಿ, ಹೆಚ್ಚೆಚ್ಚು ಜನರನ್ನು ಹೂಡಿಕೆಗೆ ಪ್ರೇರೇಪಿಸಲು ಸೆಬಿ ಆಲೋಚಿಸುತ್ತಿದೆ. ಈ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ 250 ರೂ ಪ್ಲಾನ್ ಅನ್ನು ತರಲು ಸೆಬಿ ಉತ್ತೇಜಿಸುತ್ತಿದೆ. ವರದಿ ಪ್ರಕಾರ ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ 250 ರೂ ಎಸ್ಐಪಿ ಯೋಜನೆನ್ನು ಆರಂಭಿಸಲು ಮುಂದೆ ಬಂದಿದೆ ಎನ್ನಲಾಗುತ್ತಿದೆ.
ನಿನ್ನೆ ಸೋಮವಾರ ಸಿಐಐ ಸಂಘಟನೆ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸೆಬಿ ಛೇರ್ಮನ್ ಮಾಧವಿ ಪುರಿ ಬುಚ್ ಅವರು 250 ರೂ ಎಸ್ಐಪಿ ಯೋಜನೆಯನ್ನು ಘೋಷಿಸಿದರು. ‘ತಿಂಗಳಿಗೆ 250 ರೂನಷ್ಟು ಅಲ್ಪ ಮೊತ್ತವನ್ನು ಜನರು ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಈ ಹಣಕ್ಕೆ ಸ್ಟಾರ್ಬಕ್ಸ್ನಲ್ಲಿ ಕಾಫಿ ಕೂಡ ಸಿಗಲ್ಲ. ಇಷ್ಟು ಅಲ್ಪ ಹಣದಿಂದ ದೇಶದ ಬಹಳ ಜನರು ಸಂಪತ್ತು ಸೃಷ್ಟಿ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬಹುದು,’ ಎಂದು ಮಾಧವಿ ಬುಚ್ ಹೇಳಿದರು.
ಮಾರುಕಟ್ಟೆಯ ವ್ಯವಸ್ಥೆ ಭವಿಷ್ಯದಲ್ಲಿ ಹೇಗಿರುತ್ತೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಸೆಬಿ ಮುಖ್ಯಸ್ಥೆ, ಮುಂದಿನ ಹಂತವು ಬಹಳ ದೊಡ್ಡ ಮಟ್ಟದ ಹೂಡಿಕೆ ಹೊಂದಿರಲಿದೆ, ಸಂಕೀರ್ಣತೆ ಹೆಚ್ಚಿರಲಿದೆ. ಇದನ್ನು ಸರಿಯಾಗಿ ನಿರ್ವಹಿಸಲು ಸಮರ್ಪಕ ತಂತ್ರಜ್ಞಾನದ ಅಳವಡಿಕೆ ಬಹಳ ಮುಖ್ಯವಾಗಿರುತ್ತದೆ. ನಮ್ಮ ಮಾರುಕಟ್ಟೆ ಇಕೋಸಿಸ್ಟಂನ ಹೆಚ್ಚಿನ ಭಾಗವು ತಂತ್ರಜ್ಞಾನ ವಿಚಾರದಲ್ಲಿ ಮುನ್ನಡೆ ಕಾಣುತ್ತಿದೆ. ನಮ್ಮಲ್ಲಿರುವ ತಂತ್ರಜ್ಞಾನ ಬೇರೆಲ್ಲೂ ನಿಮಗೆ ಸಿಗೋದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭಾರತದ ಜಿಡಿಪಿಗಿಂತ ಹೆಚ್ಚಿದೆ ಷೇರುಮಾರುಕಟ್ಟೆ ಬಂಡವಾಳ; ಇದು ಆತಂಕಕಾರಿ ಸಂಗತಿಯಾ? ಸಿಇಒ ಎಚ್ಚರಿಕೆಯ ಮಾತುಗಳಿವು
ಸೆಬಿ ಉದ್ದೇಶಿಸಿರುವ 250 ರೂ ಎಸ್ಐಪಿಯಿಂದ ಹೊಸಬರನ್ನು ಮಾರುಕಟ್ಟೆಗೆ ಸೆಳೆಯುವ ಇರಾದೆಯೂ ಇದೆ. ಸದ್ಯ ಆದಿತ್ಯ ಬಿರ್ಲಾ ಸಂಸ್ಥೆ 250 ರೂ ಎಸ್ಐಪಿಗೆ ಮೊದಲ ಹೆಜ್ಜೆ ಇರಿಸುತ್ತಿದೆ. ಇದೇನಾದರೂ ನಿಜವಾದಲ್ಲಿ ಭಾರತದಲ್ಲಿ 250 ರೂ ಎಸ್ಐಪಿ ಆರಂಭಿಸಿದ ಮೊದಲ ಸಂಸ್ಥೆ ಅದಾಗಿರಲಿದೆ. ಸದ್ಯ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಲು ಕನಿಷ್ಠ 500 ರೂ ಇದೆ. ಕೆಲ ಮ್ಯೂಚುವಲ್ ಫಂಡ್ಗಳಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ