ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜೆಪಿ ಮಾರ್ಗನ್ ಚೇಸ್ (JP Morgan Chase) 4.7 ಕೋಟಿಯಷ್ಟು ಇಮೇಲ್, ಮೆಸೇಜ್ ಇತ್ಯಾದಿ ಎಲೆಕ್ಟ್ರಾನಿಕ್ ದಾಖಲೆಗಳನ್ನು (Electronic Records) ಆಕಸ್ಮಿಕವಾಗಿ ಅಳಿಸಿಹಾಕಿರುವುದು ಬೆಳಕಿಗೆ ಬಂದಿದೆ. ಹಲವಾರು ತನಿಖೆಗಳಿಗೆ ಅವಶ್ಯಕವಾಗಿದ್ದ ಈ ದಾಖಲೆಗಳನ್ನು ಅಳಿಸಿಹಾಕಿದ ಜೆಪಿ ಮಾರ್ಗನ್ ಸಂಸ್ಥೆಗೆ ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC- Securities and Exchange Commission) 4 ಮಿಲಿಯನ್ ಡಾಲರ್ನಷ್ಟು ದಂಡ ವಿಧಿಸಿದೆ. 4 ಮಿಲಿಯನ್ ಡಾಲರ್ ಎಂದರೆ ಸುಮಾರು 33 ಕೋಟಿ ರುಪಾಯಿಯಷ್ಟು ದಂಡವನ್ನು ಜೆಪಿ ಮಾರ್ಗನ್ ಪಾವತಿಸಬೇಕಾಗುತ್ತದೆ.
ಎಸ್ಇಸಿ ಜೂನ್ 22ರಂದು ಆರೋಪಿಸಿರುವ ಪ್ರಕಾರ 2018ರ ಜನವರಿಯಿಂದ ಏಪ್ರಿಲ್ವರೆಗಿನ ಅವಧಿಯಲ್ಲಿ 47 ಮಿಲಿಯನ್ನಷ್ಟು ಇ ದಾಖಲೆಗಳನ್ನು ಜೆಪಿ ಮಾರ್ಗನ್ ಸೆಕ್ಯೂರಿಟೀಸ್ ಖಾಯಂ ಆಗಿ ಅಳಿಸಿಹಾಕಿದೆ. ಎಸ್ಇಸಿ ತನಿಖೆ ನಡೆಸುತ್ತಿರುವ 8 ಸೇರಿ 12 ಪ್ರಕರಣಗಳಲ್ಲಿ ಜೆಪಿ ಮಾರ್ಗನ್ ಚೇಸ್ನಲ್ಲಿರುವ ದಾಖಲೆಗಳನ್ನು ಪರಿಶೀಲಿಸಲು ತನಿಖಾ ಸಂಸ್ಥೆಗಳು ಮನವಿ ಮಾಡಿದ್ದವು. ಆಗ ಈ ಎಲೆಕ್ಟ್ರಾನಿಕ್ ದಾಖಲೆಗಳು ಅಳಿಸಿಹೋಗಿರುವುದು ಬೆಳಕಿಗೆ ಬಂದಿತ್ತು.
‘ಅಳಿಸಿಹೋದ ಆ ದಾಖಲೆಗಳನ್ನು ಮರಳಿಪಡೆಯಲು ಆಗುವುದಿಲ್ಲ. ಈ ದಾಖಲೆಗಳು ಯಾವ್ಯಾವು ಎಂಬ ಸುಳಿವೂ ಇಲ್ಲ. ಆ ದಾಖಲೆಗಳು ತನಿಖೆಗಳಿಗೆ ಪ್ರಬಲ ಸಾಕ್ಷ್ಯಾಧಾರ ಒದಗಿಸುತ್ತಿದ್ದವೋ ಗೊತ್ತಿಲ್ಲ’ ಎಂದು ಎಸ್ಇಸಿ ಹೇಳಿಕೆ ನೀಡಿದೆ.
ಜೆಪಿ ಮಾರ್ಗನ್ ಸೆಕ್ಯೂರಿಟೀಸ್ನಂತಹ ಬ್ರೋಕರೇಜ್ ಮತ್ತು ಹಣಕಾಸು ಸಂಸ್ಥೆಗಳು ಕನಿಷ್ಠ 3 ವರ್ಷಗಳ ಅವಧಿಯ ವ್ಯಾವಹಾರಿಕ ಸಂವಾದಗಳ (ಬ್ಯುಸಿನೆಸ್ ಕಮ್ಯೂನಿಕೇಶನ್ಸ್) ದಾಖಲೆಗಳನ್ನು ಉಳಿಸಿಟ್ಟುಕೊಳ್ಳಬೇಕೆಂದು ಅಮೆರಿಕದಲ್ಲಿ ಕಾನೂನು ಇದೆ. ಆದರೆ, 2018ರ ಮೊದಲ ಮೂರು ತಿಂಗಳ ಅವಧಿಯಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಸಂದರ್ಭದಲ್ಲಿ ಜೆಪಿ ಮಾರ್ಗನ್ ಸೆಕ್ಯೂರಿಟೀಸ್ ಸಂಸ್ಥೆ ಇಂತಹ ಕೋಟ್ಯಂತರ ಎಲೆಕ್ಟ್ರಾನಿಕ್ ದಾಖಲೆಗಳನ್ನು ಆಕಸ್ಮಿಕವಾಗಿ ಅಳಿಸಿಹಾಕಿದೆ. ಬ್ಯಾಂಕ್ ದಾಖಲೆಗಳನ್ನು ಸಂಗ್ರಹಿಸಿ ಇಡುವ ಜವಾಬ್ದಾರಿ ಹೊತ್ತಿದ್ದ ಬೇರೊಂದು ಸಂಸ್ಥೆ, ಈ ದಾಖಲೆಗಳನ್ನು ರಕ್ಷಿಸಬಹುದು ಎಂದು ಹೇಳಿತ್ತು. ಆದರೆ, Chase ಡೊಮೈನ್ಗೆ ಕಳುಹಿಸಲಾದ ಇಮೇಲ್ಗಳನ್ನು ರಕ್ಷಿಸಲಾಗಿಲ್ಲ. ಜೆಪಿ ಮಾರ್ಗನ್ ಚೇಸ್ನ ಗ್ರಾಹಕರ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಜೆಪಿ ಮಾರ್ಗನ್ ಸೆಕ್ಯೂರಿಟೀಸ್ನ 7,500 ಉದ್ಯೋಗಿಗಳ ಇಮೇಲ್ ಇನ್ಬಾಕ್ಸ್ಗಳಿಂದ ಆ ದಾಖಲೆಗಳೆಲ್ಲವೂ ಅಳಿಸಿಹೋಗಿದೆ ಎಂಬ ಆರೋಪ ಇದೆ.
ಇದನ್ನೂ ಓದಿ: Apple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?
ವಾಟ್ಸಾಪ್ನಂತಹ ಪ್ಲಾಟ್ಪಾರ್ಮ್ಗಳಲ್ಲಿ ವ್ಯಾವಹಾರಿಕ ಸಂವಾದಗಳನ್ನು ಉಳಿಸಿಟ್ಟುಕೊಳ್ಳಬೇಕೆಂಬ ನಿಯಮಗಳ ಪಾಲನೆ ಮಾಡದ್ದಕ್ಕೆ 2021ರಲ್ಲಿ ಜೆಪಿ ಮಾರ್ಗನ್ ಚೇಸ್ ಸಂಸ್ಥೆ ಎಸ್ಇಸಿಗೆ 125 ಮಿಲಿಯನ್ ಡಾಲರ್ ಹಾಗೂ ಕಮಾಡಿಟೀಸ್ ಫ್ಯೂಚರ್ಸ್ ಟ್ರೇಡಿಂಗ್ ಕಮಿಷನ್ ಪ್ರಾಧಿಕಾರಕ್ಕೆ 75 ಮಿಲಿಯನ್ ಡಾಲರ್ ದಂಡ ಪಾವತಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ