ಲಕ್ಷಾಂತರ ವೆಬ್​ಸೈಟ್​ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ

ಪಿಎಚ್‌ಪಿ (PHP) ಕೋರ್‌ನಲ್ಲಿ ಪತ್ತೆಯಾಗಿರುವ ‘ಪಿಎಚ್‌ಪಿ2ಶೆಲ್’ (PHP2Shell) ಎಂಬ ಎರಡು ಗಂಭೀರ ದೋಷಗಳು ಜಾಗತಿಕವಾಗಿ ಆತಂಕ ಮೂಡಿಸಿವೆ. ಲಾಗಿನ್ ಇಲ್ಲದೇ ಸರ್ವರ್‌ಗಳ ನಿಯಂತ್ರಣ ಸಾಧಿಸಲು ಈ ದೋಷಗಳು ಅವಕಾಶ ಮಾಡಿಕೊಡಲಿವೆ. ಈ ದೋಷಗಳ ಗಂಭೀರತೆಯನ್ನು ಅರಿತಿರುವ ಪಿಎಚ್‌ಪಿ ಭದ್ರತಾ ತಂಡವು ತುರ್ತು ಭದ್ರತಾ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.

ಲಕ್ಷಾಂತರ ವೆಬ್​ಸೈಟ್​ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ
ಸೈಬರ್ ಅಪಾಯದ ಚಿತ್ರ
Image Credit source: Getty Images

Updated on: Oct 22, 2026 | 12:53 PM

ನವದೆಹಲಿ, ಅಕ್ಟೋಬರ್ 22: ಇ-ಮುದ್ರಾದ ದುರ್ಬಲ ಸೆಕ್ಯೂರಿಟಿ ಕೀಗಳು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಇಂಟರ್ನೆಟ್ ಸಂಬಂಧಿ ಮತ್ತೊಂದು ಡಿಜಿಟಲ್ ಸೆಕ್ಯೂರಿಟಿ ಪ್ರಕರಣವೊಂದು ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಲಕ್ಷಾಂತರ ವೆಬ್‌ಸೈಟ್‌ಗಳು ಹಾಗೂ ಅಪ್ಲಿಕೇಶನ್‌ಗಳಿಗೆ ಬೆನ್ನೆಲುಬಾಗಿರುವ ಪಿಎಚ್‌ಪಿ (PHP) ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್​ನಲ್ಲಿ ಅತ್ಯಂತ ಗಂಭೀರ ಹಾಗೂ ಅಪಾಯಕಾರಿ ಭದ್ರತಾ ದೋಷಗಳು ಪತ್ತೆಯಾಗಿವೆ. ಭದ್ರತಾ ತಜ್ಞರು ಇದನ್ನು ‘ಪಿಎಚ್‌ಪಿ2ಶೆಲ್’ (PHP2Shell) ಎಂದು ಕರೆಯುತ್ತಿದ್ದು, ಇದು ಇಂಟರ್ನೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದೆ.

ಪಿಎಚ್‌ಪಿ ಕೋರ್ ಸಾಫ್ಟ್‌ವೇರ್‌ನಲ್ಲಿ ಪತ್ತೆಯಾಗಿರುವ CVE-2026-109618 ಮತ್ತು CVE-2026-109619 ಎಂಬ ಎರಡು ಗಂಭೀರ ದೋಷಗಳೇ ‘PHP2Shell’ ಎಂದು ಕರೆಯಲ್ಪಡುತ್ತಿವೆ. ಇವು ರಿಮೋಟ್ ಕೋಡ್ ಎಕ್ಸಿಕ್ಯೂಶನ್ (RCE) ದೋಷಗಳಾಗಿದ್ದು, ಹ್ಯಾಕರ್‌ಗಳು ಇದರ ಮೂಲಕ ಯಾವುದೇ ವೆಬ್‌ಸೈಟ್ ಅಥವಾ ಸರ್ವರ್‌ಗೆ ಲಾಗಿನ್ ಆಗದೆಯೇ (Unauthenticated) ನೇರವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಪಾಯವಿದೆ.

ಇದನ್ನೂ ಓದಿ: ಇ-ಮುದ್ರಾ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ; ನಿಜಕ್ಕೂ ಏನಾಯ್ತು?

ಸೈಬರ್ ಭದ್ರತಾ ಮಾನದಂಡಗಳ (CVSS v4.0) ಪ್ರಕಾರ ಇದಕ್ಕೆ 9.2 ರವರೆಗೆ ಅತ್ಯಂತ ಗಂಭೀರ (Critical) ರೇಟಿಂಗ್ ನೀಡಲಾಗಿದೆ. ವಿಶೇಷವೆಂದರೆ, ಬಳಕೆದಾರರು ಅಪ್ಲಿಕೇಶನ್‌ಗೆ ಲಾಗಿನ್ ಆಗುವ ಮುಂಚೆಯೇ ಅಥವಾ ಯಾವುದೇ ಮುನ್ನೆಚ್ಚರಿಕೆ ಸಿಗುವ ಮೊದಲೇ ಈ ದೋಷವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

PHP2Shell ದೋಷಗಳಿಂದ ಯಾವ ಸಿಸ್ಟಮ್‌ಗಳು ಬಾಧಿತವಾಗಿವೆ?

ಪಿಎಚ್‌ಪಿ ಬಳಸುವ ಪ್ರತಿಯೊಂದು ವೆಬ್ ಸರ್ವರ್ (PHP-FPM, Apache ಜೊತೆ mod_php, php-cgi ಮತ್ತು LiteSpeed ಸೇರಿದಂತೆ) ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದು ವರ್ಡ್‌ಪ್ರೆಸ್ (WordPress), ಮಜೆಂಟೊ (Magento) ಮತ್ತು ಲಾರಾವೆಲ್ (Laravel) ಸೇರಿದಂತೆ ಅನೇಕ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಪ್ರತಿ ವರ್ಷ ಹೆಚ್ಚುತ್ತಿವೆ ಮೊಬೈಲ್‌, ಟ್ಯಾಬ್ಲೆಟ್‌ ದೂರುಗಳು: ಸಾಫ್ಟ್‌ವೇರ್‌ ಅಪ್‌ಡೇಟ್‌ ಬಳಿಕವೇ ಹೆಚ್ಚು ತೊಂದರೆ

ವೆಬ್​ಸೈಟ್ ತಂತ್ರಜ್ಞರು ಕೈಗೊಳ್ಳಬೇಕಾದ ಕ್ರಮಗಳಿವು…

ಈ ದೋಷಗಳ ಗಂಭೀರತೆಯನ್ನು ಅರಿತಿರುವ ಪಿಎಚ್‌ಪಿ ಭದ್ರತಾ ತಂಡವು ತುರ್ತು ಭದ್ರತಾ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.

ಸಿಸ್ಟಮ್ ನಿರ್ವಾಹಕರು (Developers / Admins) ಕೂಡಲೇ ತಮ್ಮ ಪಿಎಚ್‌ಪಿ ಆವೃತ್ತಿಯನ್ನು PHP 8.5.12, 8.4.27, 8.3.36 ಅಥವಾ 8.2.35 ಗೆ ಅಪ್‌ಗ್ರೇಡ್ ಮಾಡಿಕೊಳ್ಳುವಂತೆ ಬಲವಾಗಿ ಸೂಚಿಸಲಾಗಿದೆ.

ಹಳೆಯ ಅಥವಾ ಬಳಕೆಯಲ್ಲಿಲ್ಲದ ಪಿಎಚ್‌ಪಿ ಆವೃತ್ತಿಗಳನ್ನು ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ನವೀಕರಿಸುವುದು ಅಥವಾ ವೆಬ್ ಅಪ್ಲಿಕೇಶನ್ ಫೈರ್‌ವಾಲ್ (WAF) ರಕ್ಷಣೆಯಡಿ ಇಡುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us